ಕಲಬುರ್ಗಿ: ‘ಭಾರತವನ್ನು ಅಖಂಡವಾಗಿಯೇ ಉಳಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ಮಾಡಬೇಕು. ಪೌರತ್ವ (ತಿದ್ದುಪಡಿ) ಕಾಯ್ದೆಯಲ್ಲಿ (ಸಿಎಎ) ಏನಿದೆ ಎಂಬುದನ್ನು ದೇಶದ ಜನತೆಗೆ ತಿಳಿಸುವ ಕೆಲಸ ಆಗಬೇಕು’ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಪ್ರತಿಪಾದಿಸಿದರು.
ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿ ಸಮ್ಮೇಳನದ ಕೊನೆಯ ದಿನವಾದ ಶುಕ್ರವಾರ ಸಂವಾದದಲ್ಲಿ ಸಿಎಎ, ಎನ್‌ಆರ್‌ಸಿ ಬಗ್ಗೆ ಡಾ. ಶ್ರೀಶೈಲ ನಾಗರಾಳ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದಅವರು, ‘ಭಾರತವನ್ನು ಯಾವ ರೀತಿಯಲ್ಲಿಯೂ ಎರಡಾಗಿ ಒಡೆಯಬಾರದು. ಅಮರ್ತ್ಯಸೇನ್ ಅವರು ಹೇಳುವಂತೆ ಎಲ್ಲರನ್ನೂ, ಎಲ್ಲವನ್ನೂ ದೇಶ ಒಳಗೊಳ್ಳುವಂತಿರಬೇಕು. ಮಹಾತ್ಮ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್ ಕನಸನ್ನು ನನಸು ಮಾಡುವ ಜವಾಬ್ದಾರಿಯನ್ನು ನಾವು ಹೊರಬೇಕು ಎನ್ನುವ ಮೂಲಕ ಪರೋಕ್ಷವಾಗಿ ಧರ್ಮಾಧಾರಿತ ರಾಷ್ಟ್ರೀಯ ಪೌರತ್ವ ನೋಂದಣಿ ಅಗತ್ಯವಿಲ್ಲ ಎಂದರು.
ನಾನು ಸ್ತ್ರೀ ಪಕ್ಷಪಾತಿ: ‘ನಾನು ಆಂತರ್ಯದಲ್ಲಿ ಸ್ತ್ರೀ ಪಕ್ಷಪಾತಿ. ಸೀತೆ, ದ್ರೌಪದಿ ಹಾಗೂ ಊರ್ಮಿಳೆಯರು ಖಾಸಗಿಯಾಗಿ ನನಗೆ ಬಹಳ ಆಪ್ತವಾದ ಮಹಿಳೆಯರು. ರಾಮಾಯಣದ ಸೀತೆ ಬಹಳ ಶೋಷಣೆಗೆ ಒಳಗಾದಳು. ಮಹಿಳೆ ಯಾವಾಗಲೂ ಶೋಷಣೆಗೆ ಒಳಗಾಗುತ್ತಲೇ ಇರಬೇಕೇ? ಅದಕ್ಕಾಗಿಯೇ ಮಹಾಭಾರತದ ವ್ಯಾಸರು ಸೃಷ್ಟಿಸಿದ ದ್ರೌಪದಿಯು ಪ್ರತಿಭಟಿಸಲು ಶುರು ಮಾಡಿದಳು. ಹಾಗಾಗಿ, ಸೀತೆಯ ಸಮಸ್ಯೆಗೆ ಪರಿಹಾರವಾಗಿ ದ್ರೌಪದಿ ಕಾಣಿಸುತ್ತಾಳೆ. ಇದು ನನ್ನ ಕವಿತೆ, ನಾಟಕಗಳಲ್ಲಿಯೂ ವ್ಯಕ್ತವಾಗಿದೆ’ ಎಂದುಡಾ. ಸುಜಾತಾ ಜಂಗಮಶೆಟ್ಟಿ ಅವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
‘ಕವಿ ತನ್ನ ಭಾವಕ್ಕೆ ಬರೆಯುತ್ತಾ ತನ್ನ ಪಾಡಿಗೆ ತಾನಿದ್ದುಬಿಡಬೇಕು. ಸಾಹಿತಿಯಾದವನು ತನ್ನ ಕಲಿತನವನ್ನು ಬರವಣಿಗೆಗೆ ಬದ್ಧನಾಗುವ ಮೂಲಕ ತೋರಿಸಿದರೆ ಸಾಕು’ ಎಂದು ಲೇಖಕ ಜೋಗಿ ಅವರ ಪ್ರಶ್ನೆಗೆ ಉತ್ತರಿಸಿದರು.
ವಸುಧೇಂದ್ರ, ಡಿ.ಸಿ. ರಾಜಪ್ಪ, ಪಿ.ಜಿ. ತಡಸದ, ಶಿವರಂಜನ್ ಸತ್ಯಂಪೇಟೆ, ಹೊಂಬಯ್ಯ ಹೊನ್ನಲಗೆರೆ, ಶೇಷಮೂರ್ತಿ ಅವಧಾನಿ, ರುದ್ರೇಶ ಅದರಂಗಿ, ಓಂಕಾರ ಕಾಕಡೆ, ಗಣೇಶ ಪವಾರ, ಎ. ರಂಗಸ್ವಾಮಿ ಇತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.
‘ಪ್ರಭುತ್ವಕ್ಕೆ ಲೇಖಕ ಉತ್ತರಿಸಬೇಕಿಲ್ಲ’
ಲೇಖನವನ್ನು ಪ್ರಭುತ್ವ ಪ್ರಶ್ನಿಸಿದರೆ ಅದಕ್ಕೆ ಲೇಖಕ ಉತ್ತರ ನೀಡಬೇಕಿಲ್ಲ. ತನಗೆ ತೋಚಿದ್ದನ್ನು, ಇಷ್ಟವಾದದ್ದನ್ನು ಬರೆದುಕೊಂಡು ಇರಬೇಕು. ಪ್ರಭುತ್ವ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ಓದುಗರಿಗೆ ಸೇರಿದ್ದು. ಕವಿ ಎಂ. ಗೋಪಾಲಕೃಷ್ಣ ಅಡಿಗ ಅವರೂ ಇದನ್ನೇ ಹೇಳುತ್ತಿದ್ದರು ಎಂದು ವೆಂಕಟೇಶಮೂರ್ತಿ ಹೇಳಿದರು.
***
ನನ್ನನ್ನು ಸಮನ್ವಯ ಕವಿ ಎಂದು ಕರೆದುಕೊಳ್ಳಲಾರೆ. ನಾನು ಜಿ.ಎಸ್.ಶಿವರುದ್ರಪ್ಪನವರ ಶಿಷ್ಯ. ಶಿವರುದ್ರಪ್ಪನವರಾಗಲೀ, ಚೆನ್ನವೀರ ಕಣವಿ ಅವರಾಗಲೀ ತಮ್ಮನ್ನು ಸಮನ್ವಯ ಕವಿ ಎಂದು ಒಪ್ಪಿಕೊಳ್ಳುತ್ತಿರಲಿಲ್ಲ. ಸಮನ್ವಯ ಎಂದರೆ ಖಚಿತ ನಿಲುವಿಲ್ಲದ ಎಡಬಿಡಂಗಿ ವ್ಯಾಪಾರ ಎಂಬಂತಾಗಿದೆ.
– ಎಚ್.ಎಸ್. ವೆಂಕಟೇಶಮೂರ್ತಿ, ಸಮ್ಮೇಳನಾಧ್ಯಕ್ಷರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.