ADVERTISEMENT

ಚಂಪಾ ಕೃತಿಗಳು | ಕನ್ನಡ ಕನ್ನಡ ಬರ್‍ರೀ ನಮ್ಮ ಸಂಗಡ...

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 5:12 IST
Last Updated 10 ಜನವರಿ 2022, 5:12 IST
ಚಂದ್ರಶೇಖರ ಪಾಟೀಲ
ಚಂದ್ರಶೇಖರ ಪಾಟೀಲ   

ಬೆಂಗಳೂರು: ಸಾಹಿತಿ, ಹೋರಾಟಗಾರ ಚಂದ್ರಶೇಖರ ಪಾಟೀಲ (82) ಅವರು ಇಂದು ಬೆಳಿಗ್ಗೆ ನಗರದ ಕೋಣನಕುಂಟೆಯ ಆಸ್ಟ್ರಾ ಆಸ್ಪತ್ರೆಯಲ್ಲಿ ನಿಧನರಾದರು. ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಭಾಷಾ ಚಳವಳಿಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದವರು ಚಂಪಾ.

ಈ ಶೀರ್ಷಿಕೆಯೇ ಹೇಳುವಂತೆ ‘ಕನ್ನಡ ಕನ್ನಡ ಬರ್‍ರೀ ನಮ್ಮ ಸಂಗಡ’ ಕನ್ನಡ ಕುರಿತು ಚಂಪಾ ಅವರ ಕಾಳಜಿಯ ಘೋಷವಾಕ್ಯವೂ ಹೌದು. ಇದು ಅವರ ಕೃತಿಯ ಶೀರ್ಷಿಕೆ. ಇದರಂತೆಯೆ ಹಲವು ಸಂಪಾದಿತ ಕೃತಿಗಳೂ ಇದೇ ಸಾಲಿನಲ್ಲಿವೆ. ಸಂಕ್ರಮಣ ಕಾವ್ಯ, ಗಾಂಧಿ ಗಾಂಧಿ, ಜೂನ್‌ 75 ಮಾರ್ಚ್ 77, ಬಂಡಾಯ ಮತ್ತು ಸಾಹಿತ್ಯ, ನೆಲ್ಸನ್‌ಮಂಡೇಲಾ, ಕನ್ನಡನಾಡಿಗೊಂದು ಪ್ರಾದೇಶಿಕ ಪಕ್ಷ, ಸಂಕ್ರಮಣ ಸಾಹಿತ್ಯ (3 ಸಂಪುಟಗಳಲ್ಲಿ), ಗಾಂಧಿ ಎನ್ನುವ ಹೆಸರು... ಬೇಂದ್ರೆ-ನಾ ಕಂಡಂತೆ, ನನಗೆ ಕಂಡಷ್ಟು, 26 ದಿನ 25 ರಾತ್ರಿ, ಇಂಗ್ಲಿಷ್‌ ಕೃತಿ ಅಟ್‌ದಿ ಅದರ್‌ ಎಂಡ್‌ .

ಕವನ ಸಂಕಲನ

ADVERTISEMENT

ಬಾನುಲಿ, ಮಧ್ಯಬಿಂದು, ಹತ್ತೊಂಬತ್ತು ಕವನಗಳು, ಗಾಂಧಿಸ್ಮರಣೆ, ಓ! ನನ್ನ ದೇಶ ಬಾಂಧವರೇ, ಹೂವು ಹೆಣ್ಣು ತಾರೆ, ಅರ್ಧ ಸತ್ಯದ ಹುಡುಗಿ, ಗುಂಡಮ್ಮನ ಹಾಡು, ಶಾಲ್ಮಲಾ ನನ್ನ ಶಾಲ್ಮಲಾ, ದೇವಬಾಗ..
ಸಮಕಾಲೀನ ವಸ್ತು ಸಂಗತಿಗಳಿಗೆ ಪ್ರತಿಕ್ರಿಯೆಯಾಗಿ ನಾಟಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿದರು. ಅವರ ಪ್ರಮುಖ ನಾಟಕಗಳೆಂದರೆ ಕೊಡೆಗಳು, ಅಪ್ಪ, ಕುಂಟ ಕುಂಟ ಕುರುವತ್ತಿ, ಗುರ್ತಿನವರು, ಟಿಂಗರ ಬುಡ್ಡಣ್ಣ, ಕತ್ತಲರಾತ್ರಿ, ಗೋಕರ್ಣದ ಗೌಡಸಾನಿ, ಜಗದಂಬೆಯ ಬೀದಿನಾಟಕ, ಬುರಡಿ ಬಾಬನ ವಸ್ತ್ರಾಪಹರಣ ಪವಾಡ, ನಳ ಕವಿಯ ಮಸ್ತಕಾಭಿಷೇಕ, ವಂದಿಮಾಗಧ ...

ಪತ್ರಕರ್ತ ಚಂಪಾ

ಸಮಾನಮನಸ್ಕ ಗೆಳೆಯರೊಂದಿಗೆ ಸೇರಿ ಆರಂಭಿಸಿದ ಸಾಹಿತ್ಯ ಪತ್ರಿಕೆ ಸಂಕ್ರಮಣ (1964). ದಲಿತ, ಬಂಡಾಯ ಸಾಹಿತ್ಯ ಚಳವಳಿ ಮುಂತಾದವುಗಳನ್ನು ಒಳಗೊಂಡಿದ್ದು ಹಲವಾರು ಯುವ ಬರಹಗಾರರಿಗೆ ಈ ಪತ್ರಿಕೆ ವೇದಿಕೆ ಕಲ್ಪಿಸಿತ್ತು.

ಸಂಘಟಕ ಚಂಪಾ

ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕ, ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾಸಮಿತಿಯ ಪ್ರಧಾನ ಕಾರ್ಯದರ್ಶಿ, ಧಾರವಾಡದ ನಾಟಕ ಕೂಟದ ಕಾರ್ಯದರ್ಶಿ, ಮ್ಯಾಳ ನಾಟಕ ಸಂಘದ ಕಾರ್ಯಾಧ್ಯಕ್ಷ, ಕರ್ನಾಟಕ ವಿಶ್ವವಿದ್ಯಾಲಯದ ವಿಶ್ವಚೇತನ ಸಾಂಸ್ಕೃತಿಕ ವೇದಿಕೆಯ ನಿಯೋಜಕ... ಹೀಗೆ ಚಂಪಾ ಅವರು ಮುಂಚೂಣಿಯಲ್ಲಿದ್ದ ವೇದಿಕೆಗಳು ಹತ್ತು, ಹಲವು. ಈ ವೇದಿಕೆಗಳ ಮೂಲಕ ಹಲವಾರು ಹೋರಾಟಗಳಲ್ಲಿ ತೊಡಗಿದ್ದರು. ಗೋಕಾಕ ಚಳವಳಿಯೂ ಅವುಗಳಲ್ಲಿ ಪ್ರಮುಖವಾದದ್ದು. ತುರ್ತು ಪರಿಸ್ಥಿತಿಯ ಸಂದರ್ಭ 26 ದಿನ ಜೈಲುವಾಸವನ್ನೂ ಅನುಭವಿಸಿದ್ದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ (1996-99) ಸಣ್ಣ ಪ್ರಕಾಶಕರನ್ನು ಉತ್ತೇಜಿಸಲು ಪ್ರತಿ ಶನಿವಾರ ‘ಪುಸ್ತಕ ಸಂತೆ’ ಏರ್ಪಡಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ (2004–08) ಆ ಪರಿಷತ್ತನ್ನೂ ನಾಡು, ನುಡಿಯಪರ ಸ್ಪಂದಿಸುವ ಪ್ರಬಲ ವೇದಿಕೆಯನ್ನಾಗಿ ರೂಪಿಸಿದ್ದು ಚಂಪಾಆ ಅವರ ಅಗ್ಗಳಿಕೆ.

ಪ್ರಶಸ್ತಿಗಳು

ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ (1960,74,76)
ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (1988)
ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ (1989)
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1992)
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1995)
ಕೆ.ವಿ. ಶಂಕರಗೌಡ ರಂಗಭೂಮಿ ಪ್ರಶಸ್ತಿ (1996)
ಸಂದೇಶ ಮಾಧ್ಯಮ ಪ್ರಶಸ್ತಿ (1996)
ಕರುನಾಡ ಭೂಷಣ ಪ್ರಶಸ್ತಿ (2006)
ಆಳ್ವಾಸ್ ನುಡಿಸಿರಿ ಪ್ರಶಸ್ತಿ (2011)
ಪಂಪ ಪ್ರಶಸ್ತಿ (2011)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.