ಬೆಂಗಳೂರು: ಶೋಷಕರ ಭಾಷೆಗೆ ಸಿಗುವಷ್ಟೇ ಸಮಾನ ವೇದಿಕೆ ಶೋಷಿತರ ಭಾಷೆಗೂ ಸಿಗಬೇಕು. ಸಮಾನ ವೇದಿಕೆ ಕೊಡಲು ಸಾಧ್ಯವಾಗದೇ ಇರುವುದು ಕನ್ನಡ ಸಾಹಿತ್ಯದ ಅನಾರೋಗ್ಯವನ್ನು ತಿಳಿಸುತ್ತದೆ ಎಂದು ಲೇಖಕಿ ಎಂ.ಎಸ್. ಆಶಾದೇವಿ ತಿಳಿಸಿದರು.
ಕನ್ನಡ ಸಾಹಿತ್ಯ ಮತ್ತು ಜಾಗತೀಕರಣ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಾಗತೀಕರಣದ ಪ್ರಭಾವ ವಲಯಕ್ಕೆ ಸಿಲುಕಿದವರ ಹೊಸ ಬದುಕಿನಲ್ಲಿ ಹುಟ್ಟಿದ ಹೊಸ ಭಾಷೆಯನ್ನಷ್ಟೇ ಗುರುತಿಸಿದರೆ ಅದು ಒಂದು ಮಿತಿಯಾಗುತ್ತದೆ. ಭಿನ್ನ ಅನುಭವಗಳಿಂದ ಬರುವ ಹೊಸಭಾಷೆಗಳನ್ನೂ ಒಳಗೊಳ್ಳಬೇಕು. ಹೆಣ್ಣಿನ ಭಾಷೆ, ದಲಿತರ ಭಾಷೆಗಳಿಗೂ ಅವಕಾಶ ಇರಬೇಕು ಎಂದು ಪ್ರತಿಪಾದಿಸಿದರು.
ಲೇಖಕ ಎಂ.ಎಸ್. ಶ್ರೀರಾಂ ಮಾತನಾಡಿ, ‘ಭಾಷೆಗೊಂದು ವಾತಾವರಣ ಇರುತ್ತದೆ. ಅದನ್ನು ಅನುವಾದದಲ್ಲಿ ಕಟ್ಟಿಕೊಡುವುದು ಕಷ್ಟ. ದೇವನೂರು, ತೇಜಸ್ವಿ ಸಾಹಿತ್ಯವನ್ನು ಇಂಗ್ಲಿಷ್‌ಗೆ ಅನುವಾದ ಮಾಡುವಾಗಲೂ ಇದೇ ಸಮಸ್ಯೆ ಉಂಟಾಗುತ್ತದೆ’ ಎಂದು ತಿಳಿಸಿದರು.
ಬರಹಗಾರ ಎಸ್.ಆರ್. ವಿಜಯಶಂಕರ್ ಮಾತನಾಡಿ, ‘ಹಿಂದೆ ಸಮಾನತೆ, ಸ್ವಾತಂತ್ರ್ಯ, ಸಹೋದರತೆಯನ್ನು ಆದರ್ಶವಾಗಿ ಇಟ್ಟುಕೊಂಡು ಸಾಹಿತ್ಯ ರಚನೆಯಾಗುತ್ತಿತ್ತು. ಜಾಗತೀಕರಣವು ಇದಕ್ಕೆ ಭಿನ್ನವಾದ ಆದರ್ಶವನ್ನು ತಿಳಿಸುತ್ತದೆ. ಆರ್ಥಿಕತೆಯೇ ಅದರ ಕೇಂದ್ರವಾಗಿರುತ್ತದೆ’ ಎಂದು ವಿಶ್ಲೇಷಿಸಿದರು.
ಬರಹಗಾರ್ತಿ ಕಾವ್ಯ ಕಡಮೆ ಗೋಷ್ಠಿ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.