ADVERTISEMENT

ಕನ್ನಡ ಮಾಧ್ಯಮ: ಶನಿವಾರ ಪೋಷಕರ ಸಭೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2023, 23:30 IST
Last Updated 17 ಆಗಸ್ಟ್ 2023, 23:30 IST
   

ಬೆಂಗಳೂರು: ಕನ್ನಡ ಮಾಧ್ಯಮದಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಿರುವ, ಕನ್ನಡ ಮಾಧ್ಯಮದಲ್ಲಿ ಓದಿಸಬೇಕು ಎಂಬ ಉದ್ದೇಶ ಹೊಂದಿರುವ ಪಾಲಕರ ಸಭೆಯನ್ನು ‘ಮುನ್ನೋಟ ಟ್ರಸ್ಟ್’ ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಿದೆ. 

‘ಬೆಂಗಳೂರಿನಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಕೆಯನ್ನು ಬಲಪಡಿಸಬೇಕು ಎಂಬ ಆಸೆ ಹೊಂದಿರುವವರು ಸಭೆಯಲ್ಲಿ ಪಾಲ್ಗೊಳ್ಳಬಹುದು. ಸಭೆಯು ಬಸವನಗುಡಿಯ ಬಿ.ಎಂ.ಶ್ರೀ ಕಲಾಭವನದಲ್ಲಿ ಶನಿವಾರ (ಆಗಸ್ಟ್‌ 19) ಸಂಜೆ 4 ಗಂಟೆಗೆ ನಡೆಯಲಿದೆ’ ಎಂದು ಟ್ರಸ್ಟ್‌ನ ಪರವಾಗಿ ಪ್ರಶಾಂತ ಸೊರಟೂರ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಕನ್ನಡ ಮಾಧ್ಯಮ ಶಾಲೆಗಳು ದಿನೇ ದಿನೇ ಕಡಿಮೆಯಾಗುತ್ತಿವೆ. ಬೆಂಗಳೂರಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಬೆರಳೆಣಿಕೆಯಷ್ಟಿವೆ. ತಾಯ್ನುಡಿಯಲ್ಲಿ ಅಥವಾ ಪರಿಸರದ ನುಡಿಯಲ್ಲಿ ಮಕ್ಕಳು ಮೊದಲ ಹಂತದ ಕಲಿಕೆ ಪಡೆಯುವುದು ಬೌದ್ಧಿಕ ವಿಕಾಸಕ್ಕೆ ಗಟ್ಟಿಯಾದ ಅಡಿಪಾಯ ಹಾಕುತ್ತದೆ ಎಂಬ ತತ್ತ್ವದಲ್ಲಿ ನಂಬಿಕೆ ಇರುವ ಹಲವಾರು ಪೋಷಕರು ಬೆಂಗಳೂರಿನ ಬೇರೆ ಬೇರೆ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಿದ್ದಾರೆ’ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ADVERTISEMENT

‘ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರ ಹಾಗೂ ಶಿಕ್ಷಕರಷ್ಟೇ ಮುಖ್ಯ ಪಾಲುದಾರರಾದ ಪೋಷಕರನ್ನು ಒಂದೆಡೆ ಸೇರಿಸಿ ಅವರ ಅನುಭವ, ಅನಿಸಿಕೆಗಳನ್ನು ಆಲಿಸುವುದು, ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳ ಪಠ್ಯೇತರ ಕಲಿಕೆಯ ಅಗತ್ಯಗಳನ್ನು ಪೋಷಕರಿಂದ ತಿಳಿಯುವುದು ಮತ್ತು ಅಂತಹ ಅಗತ್ಯಗಳನ್ನು ಶಾಲೆಯ ಹೊರಗೆ ಪಾಲಕರೇ ಕೈಜೋಡಿಸಿ ಏರ್ಪಾಟು ಮಾಡಿಕೊಳ್ಳುವುದು ಹೇಗೆ ಅನ್ನುವ ಕುರಿತು ಈ ಸಭೆ ಚರ್ಚೆ ಮಾಡಲಿದೆ’ ಎಂದು ಪ್ರಶಾಂತ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.