ಬೆಂಗಳೂರು: ‘ಕರ್ನಾಟಕ ಮುಂದುವರೆದ ರಾಜ್ಯ. ಹಾಗೆಂದು ರಾಜ್ಯಕ್ಕೆ ಅನ್ಯಾಯ ಮಾಡಬಾರದು. ಹಸು ಹಾಲು ಕೊಡುತ್ತದೆ ಎಂದು ಪೂರಾ ಕರೆದುಕೊಳ್ಳಬಾರದು. ಕರುವಿಗೂ ಹಾಲು ಬಿಡದಿದ್ದರೆ, ಅದು ಬಡಕಲಾಗುತ್ತದೆ. ರಾಜ್ಯಕ್ಕಾಗುತ್ತಿರುವ ಇಂತಹ ಅನ್ಯಾಯವನ್ನು ಎಲ್ಲ ಕನ್ನಡಿಗರು ಎದುರಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನಡೆಸಿ ಅವರು ಮಾತನಾಡಿದರು.
‘ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ ಮತ್ತು ಅದನ್ನು ಒಪ್ಪಿಕೊಂಡಿದ್ದೇವೆ. ಸಂವಿಧಾನವನ್ನೂ ಒಪ್ಪಿಕೊಂಡಿದ್ದೇವೆ. ಹಾಗೆಂದು ನಮಗೆ ಅನ್ಯಾಯವಾದಾಗ ಅದನ್ನು ಎದುರಿಸದೇ ಇರಲಾಗದು. ನಮ್ಮ ಹಕ್ಕುಗಳ ರಕ್ಷಣೆಗಾಗಿ ಹೋರಾಟ ಮಾಡಲೇಬೇಕು. ಕರ್ನಾಟಕಕ್ಕೆ ನ್ಯಾಯವಾಗಿ ದೊರೆಯಬೇಕಿರುವ ತೆರಿಗೆ ಪಾಲನ್ನು ಕೇಳಿದರೆ, ಅದಕ್ಕೆ ರಾಜಕೀಯ ಬೆರೆಸುವ ಕೆಲಸ ಮಾಡುತ್ತಿದ್ದಾರೆ. ಕನ್ನಡಿಗರು ಇದನ್ನು ಅರ್ಥಮಾಡಿಕೊಳ್ಳಬೇಕು’ ಎಂದರು.
‘15ನೇ ಹಣಕಾಸು ಆಯೋಗ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಅದನ್ನು ಸರಿಪಡಿಸಿ ಎಂದು ಕೇಂದ್ರ ಸರ್ಕಾರವನ್ನು ಹಲವು ಬಾರಿ ಕೇಳಿಕೊಂಡರೂ, ನ್ಯಾಯ ದೊರೆಯುತ್ತಿಲ್ಲ. ನ್ಯಾಯಯುತವಾದ ಪಾಲನ್ನು ಕೊಡಿ ಎಂದು ಕೇಳುವ ಶಕ್ತಿ ಬೆಳೆಸಿಕೊಂಡಾಗ ಮಾತ್ರ, ಇದೆಲ್ಲಾ ಪರಿಹಾರವಾಗುತ್ತದೆ. ರಾಜ್ಯದಿಂದ ಲೋಕಸಭೆ ಮತ್ತು ರಾಜ್ಯಸಭೆಗೆ ಚುನಾಯಿತರಾಗಿರುವವರು, ಈ ಅನ್ಯಾಯದ ವಿರುದ್ದ ಸಂಸತ್ತನಲ್ಲಿ ಒಕ್ಕೊರಲಿನಿಂದ ದನಿ ಎತ್ತಬೇಕು’ ಎಂದು ಆಗ್ರಹಿಸಿದರು.
‘ಈ ಎಲ್ಲಾ ಅನ್ಯಾಯದ ಮಧ್ಯೆ ರಾಜ್ಯವನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುತ್ತಿದ್ದೇವೆ. ರಾಜ್ಯದ ಎಲ್ಲ ಪ್ರದೇಶ–ಜನರನ್ನೂ ಪ್ರತಿನಿಧಿಸುವ ಕರ್ನಾಟಕ ಎಂದು ನಾಮಕರಣ ಮಾಡಿ ಈಗ 51ನೇ ವರ್ಷ. 50 ವರ್ಷಕ್ಕೆ ಕಾಲಿಟ್ಟಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಅವರು ಆ ಸಂಭ್ರಮಾಚರಣೆಗೆ ಏನನ್ನೂ ಮಾಡಲಿಲ್ಲ. ನಮ್ಮ ಸರ್ಕಾರ ಇಡೀ ವರ್ಷ ಆಚರಣೆ ಮಾಡಿದೆ’ ಎಂದರು.
‘ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಮತ್ತು ಕನ್ನಡಿಗರನ್ನು ಹೀಯಾಳಿಸುವಂತಹ ಪ್ರವೃತ್ತಿ ಈಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದು ಸರಿಯಲ್ಲ. ಇಂತಹದ್ಧರ ವಿರುದ್ಧ, ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
‘ಕರ್ನಾಟಕದಲ್ಲಿ 200ಕ್ಕೂ ಹೆಚ್ಚು ಭಾಷೆಯನ್ನಾಡುವ ಜನರಿದ್ದಾರೆ. ಅವರು ಯಾವುದೇ ಜಾತಿ–ಧರ್ಮದವರಾಗಿದ್ದರೂ, ಎಲ್ಲಿಯವರೇ ಆಗಿದ್ದರೂ ಇಲ್ಲಿನ ನೆಲ–ಗಾಳಿ–ನೀರನ್ನು ಬಳಸಿದ ಮೇಲೆ ಕನ್ನಡಿಗರೇ ಹೌದು. ಅವರೆಲ್ಲರೂ ಕನ್ನಡ ಕಲಿಯಬೇಕು. ಎಲ್ಲರೊಂದಿಗೆ ವ್ಯವಹಾರಿಕ ಭಾಷೆಯನ್ನಾಗಿ ಕನ್ನಡ ಬಳಸುತ್ತೇವೆ, ಕನ್ನಡ ಬರದವರಿಗೆ ಕಲಿಸುತ್ತೇವೆ ಎಂದು ಶಪಥ ಮಾಡಬೇಕು’ ಎಂದರು.
‘ನಮ್ಮ ನಾಡು–ನುಡಿಯನ್ನು ಬಲಿಕೊಟ್ಟು ಉದಾರಿಗಳಾಗಬಾರದು. ಭಾಷಾ ವ್ಯಾಮೋಹ ಅತಿಯಾಗಬಾರದು, ಆದರೆ ಅಭಿಮಾನವನ್ನು ನಾವು ಬಿಟ್ಟುಕೊಡಬಾರದು. ಅಭಿಮಾನ ಇಲ್ಲದೇ ಹೋದರೆ ಭಾಷೆ ಹೇಗೆ ಬೆಳೆಯುತ್ತದೆ? ಭಾಷೆ ಬೆಳೆಯಬೇಕೆಂದರೆ ನಾವು ಮೊದಲು ಕನ್ನಡಿಗರಾಗಬೇಕು. ಬೇರೆ ಭಾಷೆಯನ್ನೂ ಕಲಿತು ಭಾಷಾ ಸಂಪತ್ತು ಬೆಳೆಸಿಕೊಳ್ಳಬೇಕು, ಕನ್ನಡವನ್ನು ಮರೆಯಬಾರದು’ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
‘ಜನಸಂಖ್ಯೆ ಆಧಾರದಲ್ಲಿ ಕರ್ನಾಟಕಕ್ಕೆ ಈಗಾಗಲೇ ತೆರಿಗೆ ಪಾಲಿನಲ್ಲಿ ಅನ್ಯಾಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಜನಸಂಖ್ಯೆ ಆಧಾರದಲ್ಲೇ ಲೋಕಸಭಾ ಕ್ಷೇತ್ರ ಮರುವಿಂಗಡಣೆಯಾಗಿ ಕರ್ನಾಟಕವೂ ಸೇರಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗೆ ಅನ್ಯಾಯವಾಗಲಿದೆ’ ಎಂದು ಶಾಸಕ ರಿಜ್ವಾನ್ ಅರ್ಷದ್ ಕಳವಳ ವ್ಯಕ್ತಪಡಿಸಿದರು.
‘ನಮ್ಮದು ಅತಿಹೆಚ್ಚು ತೆರಿಗೆ ನೀಡುವ ಎರಡನೇ ದೊಡ್ಡ ರಾಜ್ಯ. ಆದರೆ ಜನಸಂಖ್ಯೆ ನಿಯಂತ್ರಣದಲ್ಲಿ ಇರಿಸಿದ್ದೇವೆ ಎಂಬ ಒಂದೇ ಕಾರಣಕ್ಕೆ ನ್ಯಾಯಯುತ ಪಾಲು ದೊರೆಯುತ್ತಿಲ್ಲ. ಆದರೆ ಜನಸಂಖ್ಯೆ ಏರಿಕೆಗೆ ನಿಯಂತ್ರಣವೇ ಇಲ್ಲದ ಉತ್ತರ ಭಾರತದ ರಾಜ್ಯಗಳಿಗೆ ಅವರು ನೀಡಿದ್ದಕ್ಕಿಂತ ಎಂಟುಪಟ್ಟು ಹೆಚ್ಚು ತೆರಿಗೆ ಪಾಲು ನೀಡಲಾಗುತ್ತಿದೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ’ ಎಂದರು.
‘ಈಗ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಾದರೆ ಉತ್ತರ ಭಾರತದ ರಾಜ್ಯಗಳ ಪ್ರಾತಿನಿಧ್ಯ ಹಲವು ಪಟ್ಟು ಹೆಚ್ಚಲಿದೆ. ದಕ್ಷಿಣ ಭಾರತದ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾಗಲಿದೆ. ಸಂಸತ್ತಿನಲ್ಲಿ ನಮ್ಮ ನಾಡು–ನುಡಿ ಮತ್ತು ಹಕ್ಕುಗಳ ಪರವಾಗಿ ದನಿ ಎತ್ತುವವರು ಕಡಿಮೆಯಾಗುತ್ತಾರೆ. ಸಂಸತ್ತು ಮತ್ತು ಕೇಂದ್ರ ಸರ್ಕಾರದಲ್ಲಿ ನಾವು ಪ್ರಸ್ತುತತೆ ಕಳೆದುಕೊಳ್ಳುತ್ತೇವೆ. ಒಟ್ಟಾರೆ ದ್ರಾವಿಡ ರಾಜ್ಯಗಳಿಗೆ ಅನ್ಯಾಯವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಕನ್ನಡ ಮತ್ತು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಆತಂಕಗಳನ್ನು ಪರಿಶೀಲಿಸುವ ಕೆಲಸವಾಗಬೇಕು’ ಎಂದರು.
‘ಕನ್ನಡವನ್ನು ಬದುಕಿನ ಭಾಷೆಯಾಗಿ ಮಾಡುವುದೇ ನಮ್ಮ ಗುರಿ. ಬದುಕಿನ ಪ್ರತಿ ಕ್ಷಣ ಕನ್ನಡವನ್ನೇ ಉಸಿರಾಗಿಸಿಕೊಳ್ಳಬೇಕು. ಈ ವರ್ಷ ಬೆಂಗಳೂರು ನಗರದಲ್ಲಿ ಎಲ್ಲಾ ಖಾಸಗಿ ಸಂಸ್ಥೆಗಳು, ಶಾಲಾ, ಕಾಲೇಜು ಹಾಗೂ ವಿದ್ಯಾ ಸಂಸ್ಥೆಗಳು ತಮ್ಮ ಕಚೇರಿಯಲ್ಲಿ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸಬೇಕು ಎಂದು ಆದೇಶಿಸಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
‘ನಮ್ಮ ನಾಡಿಗೆ ಬಹಳ ವಿಶೇಷಗಳಿವೆ. ದೇಶದ ಬೇರೆ ಯಾವ ರಾಜ್ಯಕ್ಕೂ ನಾಡಧ್ವಜ ಮತ್ತು ನಾಡಗೀತೆ ಇಲ್ಲ. ನಮ್ಮ ರಾಜ್ಯಕ್ಕೆ ಇದೆ. ಸರ್ವ ಜನಾಂಗದ ಶಾಂತಿಯ ತೋಟ ಎಂದು ಕುವೆಂಪು ಅವರು ರಚಿಸಿದ ಗೀತೆಯನ್ನು ನಾವು ನಾಡಗೀತೆ ಎಂದು ಹಾಡುತ್ತಿದ್ದೇವೆ. ಸರ್ವರನ್ನೂ ಒಳಗೊಳ್ಳುವ ಈ ಗುಣದಿಂದಲೇ ವಿಶ್ವದ ಎಲ್ಲ ಭಾಗಗಳಿಂದ ಬಂದ ಜನ ಇಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ’ ಎಂದರು.
‘ರಾಜ್ಯದ ಎಲ್ಲ ಶಾಲಾ ಮಕ್ಕಳಲ್ಲಿ ಒಕ್ಕೂಟ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸಲು, ಜಾತ್ಯತೀತ, ಸಮಾನ, ಸಹಬಾಳ್ವೆ ಮತ್ತು ಸಹಕಾರದ ಮನೋಭಾವಗಳನ್ನು ಮೂಡಿಸಲು ಸಂವಿಧಾನದ ಪ್ರಸ್ತಾವನೆಯನ್ನು ಓದಿಸುವ ಪದ್ಧತಿ ಜಾರಿಗೆ ತರಲಾಗಿದೆ’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
‘ರಾಜ್ಯದ ಎಲ್ಲರೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗಲು ಅವಶ್ಯಕವಾಗಿರುವಂತಹ ವಾತಾವರಣವನ್ನು ರೂಪಿಸಿದ್ದೇವೆ. ಕನ್ನಡದ ಏಳಿಗೆಗಾಗಿ ಶಾಲೆಗಳಲ್ಲಿ ಪ್ರಥಮ ಅಥವಾ ದ್ವೀತೀಯ ಭಾಷೆಯಾಗಿ ಕನ್ನಡ ಕಲಿಸಲು ಕ್ರಮ ತೆಗೆದುಕೊಂಡಿದ್ದೇವೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಮೂಲಕ ಶಾಲೆಗಳ ಅಭಿವೃದ್ಧಿ ನಡೆಸಲಾಗುತ್ತಿದೆ’ ಎಂದರು.
‘ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ನೆರವಿನಿಂದ ಶಾಲಾ ಮಕ್ಕಳಿಗೆ ವಾರದ ಆರು ದಿನ ಮೊಟ್ಟೆ ಅಥವಾ ಚಿಕ್ಕಿ–ಬಾಳೆಹಣ್ಣು ನೀಡಲಾಗುತ್ತಿದೆ. ಮೂರು ದಿನ ರಾಗಿ ಮಾಲ್ಟ್ ನೀಡಲಾಗುತ್ತಿದೆ. ಎಲ್ಲ ಸರ್ಕಾರಿ ಸಾಲೆಗೆ ಉಚಿತ ವಿದ್ಯುತ್ ಮತ್ತು ನೀರು ಪೂರೈಕೆ ಮಾಡಲಾಗುತ್ತಿದೆ. ನಮ್ಮ ಶಾಲೆ–ನಮ್ಮ ಜವಾಬ್ದಾರಿ ಕಾರ್ಯಕ್ರಮದ ಮೂಲಕ ಶಾಲಾ ಅಭಿವೃದ್ಧಿಯಲ್ಲಿ ಹಳೇ ವಿದ್ಯಾರ್ಥಿಗಳು ಭಾಗಿಯಾಗುತ್ತಿದ್ದಾರೆ’ ಎಂದರು.
ಮೊದಲಿಗೆ ರಾಷ್ಟ್ರಧ್ವಜಾರೋಹಣ ಮತ್ತು ರಾಷ್ಟ್ರಗೀತೆ. ನಂತರ ಕನ್ನಡ ಧ್ವಜಾರೋಹಣ ಮತ್ತು ನಾಡಗೀತೆ
ನಗರದ ವಿವಿಧ ಭಾಗದ ಶಾಲೆಗಳ ವಿದ್ಯಾರ್ಥಿಗಳಿಂದ ಪಥಸಂಚಲನ ಮತ್ತು ಕಸರತ್ತು ಪ್ರದರ್ಶನ
ಶಾಲಾ ವಿದ್ಯಾರ್ಥಿಗಳಿಂದ ಗಾಯನ ಮತ್ತು ನೃತ್ಯ ಪ್ರದರ್ಶನ
ಕನ್ನಡ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಕಲಿಕೆಗಾಗಿ ರೂಪಿಸಿದ ‘ಕನ್ನಡ ದೀವಿಗೆ’ ಪುಸ್ತಕ ಬಿಡುಗಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.