ಬೆಂಗಳೂರು: ಕರ್ನಾಟಕ ಏಕೀಕರಣದ ಕನಸು 1956ರ ನವೆಂಬರ್ 1ರಂದು ನನಸಾದಾಗ, ‘ಕನ್ನಡದ ಕುಲಪು ರೋಹಿತ’ ಆಲೂರು ವೆಂಕಟರಾಯರು ಹಂಪಿಯ ವಿರೂಪಾಕ್ಷ ದೇವಸ್ಥಾನದಲ್ಲಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ರಾಜ್ಯೋತ್ಸವ ಆಚರಿ ಸಿದ್ದರು. ಆ ನಂತರ ಪ್ರತಿವರ್ಷವೂ ರಾಜ್ಯೋತ್ಸವದ ದಿನದಂದು ನಾಡಿನಾ ದ್ಯಂತ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ, ವಿಶೇಷ ಪೂಜೆ– ಪುನಸ್ಕಾರಗಳು ನಡೆಯುತ್ತಲೇ ಇವೆ.
ಕನ್ನಡಿಗರು ಮತ್ತು ತಾಯಿ ಭುವನೇಶ್ವರಿ ನಡುವಿನ ಈ ನಂಟು 1956ರಲ್ಲಿ ಆರಂಭವಾದದ್ದಲ್ಲ. ಭುವನೇಶ್ವರಿಯು ಕನ್ನಡದ ಮೊದಲ ರಾಜವಂಶವಾದ ಕದಂಬರ ಕುಲದೇವತೆ. ವಿಜಯನ ಗರದ ಅರಸರು, ಆನಂತರ ಮೈಸೂರು ಅರಸರು ಸಹ ಭುವನೇಶ್ವರಿ
ಯನ್ನು ಪೂಜಿಸಿದವರೇ. ಆ ಕಾರಣಕ್ಕೇ ಇರಬೇಕು ಕರ್ನಾಟಕದ ಏಕೀಕರಣ ಹೋರಾಟದ ಸಂದರ್ಭದಲ್ಲಿ ಆಲೂರು ವೆಂಕಟರಾಯರು ಈ ಪರಿಕಲ್ಪನೆಯನ್ನು ಪೋಷಿಸಿದ್ದರು. ಹೋರಾಟದ ಮುಂಚೂಣಿಯಲ್ಲಿದ್ದ ಹಿರಿಯ ಸಾಹಿತಿಗಳು, ಗಣ್ಯರು ಅವರಿಗೆ ಬೆಂಬಲವಾಗಿ ನಿಂತಿ ದ್ದರು. ಭುವನೇಶ್ವರಿಯು ನಾಡಿಗಷ್ಟೇ ಅಲ್ಲ ‘ಭುವನ’ಕ್ಕೇ ತಾಯಿ ಎಂಬುದು ಹೋರಾಟಗಾರರ ಕಲ್ಪನೆಯಾಗಿತ್ತು.
ಪ್ರಚಲಿತ Podcast ಕೇಳಿ:ಪ್ರಚಲಿತ Podcast: ಇಲ್ಲಿವೆ ಕರ್ನಾಟಕದ ಕನ್ನಡಮ್ಮನ ದೇಗುಲಗಳು
ಈಗಲೂ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಭುವನೇಶ್ವರಿಗೆ ಅಗ್ರ ಪೂಜೆ. ರಾಜ್ಯದ ಕೆಲವು ನಗರಗಳಲ್ಲಿ ಭುವನೇಶ್ವರಿ ನಗರ ಅಥವಾ ಭುವನೇ ಶ್ವರಿ ಬಡಾವಣೆ ಕಾಣಿಸುತ್ತದೆ. ಭುವ ನೇಶ್ವರಿಯ ದೇವಸ್ಥಾನಗಳಿವೆ. ಇನ್ನೂ ಕೆಲವು ದೇವಸ್ಥಾನಗಳಲ್ಲಿ ಇತರ ದೇವ–ದೇವತೆಗಳ ಮೂರ್ತಿಯ ಜತೆಗೆ ಭುವನೇಶ್ವರಿಯ ಮೂರ್ತಿಯನ್ನೂ ಸ್ಥಾಪಿಸಿ ಪೂಜಿಸಲಾಗುತ್ತಿದೆ. ಭುವನೇಶ್ವರಿಗೆ ಇರುವ ದೇವಸ್ಥಾ ನಗಳ ಸಂಖ್ಯೆ ಕಡಿಮೆಯಾಗಿದ್ದರೂ, ಕೆಲವು ದೇವಸ್ಥಾನಗಳು ಐತಿಹಾಸಿಕ ಮಹತ್ವ ಹೊಂದಿದವುಗಳಾಗಿವೆ.
ಮೈಸೂರು ಅರಮನೆಯಲ್ಲಿ ‘ಭುವನೇಶ್ವರಿ’
ಮೈಸೂರು: ಮೈಸೂರು ಅರಮನೆಯ ಆವರಣದ ಉತ್ತರ ದ್ವಾರದ ಬಳಿ ಭುವನೇಶ್ವರಿ ದೇವಾಲಯವಿದೆ. ಅರಮನೆಯ ವಾಸ್ತುಶಿಲ್ಪಿ ಸಿದ್ದಲಿಂಗಸ್ವಾಮಿ ಅವರೇ ಈ ದೇಗುಲಕ್ಕೂ ವಾಸ್ತುಶಿಲ್ಪಿ. ದ್ರಾವಿಡ ಶೈಲಿಯಲ್ಲಿ ದೇಗುಲವನ್ನು ನಿರ್ಮಿಸಲಾಗಿದೆ.
ಭುವನೇಶ್ವರಿಯ ದೇಗುಲದೊಳಗೆ ರಾಜರಾಜೇಶ್ವರಿ, ಚಾಮುಂಡೇಶ್ವರಿ, ಮಹೇಶ್ವರ, ಮಹಾಗಣಪತಿ, ಸೂರ್ಯನಾರಾಯಣ, ಮಹಾವಿಷ್ಣುವಿನ ಸನ್ನಿಧಿಯೂ ಇದೆ. ತಾಮ್ರದ ದೊಡ್ಡ ಸೂರ್ಯಮಂಡಲ ಇಲ್ಲಿದೆ. ಜಯಚಾಮರಾಜ ಒಡೆಯರ್ ಇದನ್ನು ಭುವನೇಶ್ವರಿಗೆ ಕಾಣಿಕೆಯನ್ನಾಗಿ ಅರ್ಪಿಸಿದ್ದರು ಎಂಬುದು ರಾಜ್ಯ ಪುರಾತತ್ವ ಇಲಾಖೆ ಪ್ರಕಟಿಸಿರುವ ಪುಸ್ತಕದಲ್ಲಿ ದಾಖಲಾಗಿದೆ.
ಭುವನೇಶ್ವರಿಗೆ ಅಗ್ರಪೂಜೆ: ಗರ್ಭಗುಡಿಯಲ್ಲಿ ಭುವನೇಶ್ವರಿಯ ಮೂರ್ತಿಯಿದೆ. ಕನ್ನಡಾಂಬೆಗೆ ಇಲ್ಲಿ ಅಗ್ರಪೂಜೆ ಸಲ್ಲಿಕೆಯಾಗಲಿದೆ. ದೇಗುಲದ ಪ್ರಾಂಗಣದಲ್ಲಿ ಭುವನೇಶ್ವರಿ, ರಾಜರಾಜೇಶ್ವರಿ, ಚಾಮುಂಡೇಶ್ವರಿಯ ಉತ್ಸವ ಮೂರ್ತಿಗಳಿವೆ. ವರ್ಧಂತಿ, ನವರಾತ್ರಿ, ವಿಜಯದಶಮಿ, ಕರ್ನಾಟಕ ರಾಜ್ಯೋತ್ಸವ (ನವೆಂಬರ್ 1) ಸೇರಿದಂತೆ ವಿಶೇಷ ದಿನಗಳಲ್ಲಿ ಮುಜರಾಯಿ ಇಲಾಖೆ ವತಿಯಿಂದ ಭುವನೇಶ್ವರಿಯ ಮೂಲಮೂರ್ತಿಗೆ ಬೆಳ್ಳಿಯ ಕವಚ ತೊಡಿಸಲಾಗುತ್ತದೆ. ರಥಸಪ್ತಮಿಯಂದು ಅರಮನೆಯ ಆವರಣದಲ್ಲಿ ನಡೆಯುವ ದೇವರುಗಳ ಉತ್ಸವದಲ್ಲಿ ಭುವನೇಶ್ವರಿಗೂ ಅಗ್ರಸ್ಥಾನವಿರುತ್ತದೆ.
‘ಕರ್ನಾಟಕ ರಾಜ್ಯೋತ್ಸವದಂದು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಆಡಳಿತ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಭುವನೇಶ್ವರಿ ಹೆಸರಿನ ಸಂಘಟನೆಯೊಂದು ಕನ್ನಡಾಂಬೆಗೆ ವಿಶೇಷ ಪೂಜೆ ಸಲ್ಲಿಸುವುದು ಪ್ರತಿ ವರ್ಷದ ವಾಡಿಕೆಯಾಗಿದೆ’ ಎನ್ನುತ್ತಾರೆ 23 ವರ್ಷದಿಂದ ದೇಗುಲದಲ್ಲಿ ನಿತ್ಯ ಮುಂಜಾನೆ–ಮುಸ್ಸಂಜೆ ಭುವನೇಶ್ವರಿಗೆ ಪೂಜೆ ಸಲ್ಲಿಸುವ ಅರ್ಚಕ ಸೂರ್ಯನಾರಾಯಣ ಶಾಸ್ತ್ರಿ.
‘ನಿತ್ಯ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12 ಹಾಗೂ ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಭುವನೇಶ್ವರಿಯ ದರ್ಶನಕ್ಕೆ ಭಕ್ತರಿಗೆ ಅವಕಾಶವಿದೆ. ಹೆಚ್ಚಿನ ಭಕ್ತರು ಭೇಟಿ ನೀಡುವುದಿಲ್ಲ. ಅರಮನೆ ವೀಕ್ಷಿಸುವ ಪ್ರವಾಸಿಗರು ಇತ್ತ ಸುಳಿಯಲ್ಲ. ಬಹುತೇಕರಿಗೆ ಭುವನೇಶ್ವರಿಯ ದೇಗುಲ ಇರುವುದೇ ಗೊತ್ತಿಲ್ಲ. ಕೆಲವರು ಮಾತ್ರ ಹುಡುಕಿಕೊಂಡು ಬಂದು ದರ್ಶನ ಪಡೆಯುತ್ತಾರೆ’ ಎಂದು ಅರ್ಚಕರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಮೆರಿಕದಲ್ಲಿನ ಸಾಫ್ಟ್‌ವೇರ್ ಉದ್ಯಮಿ ಮಳವಳ್ಳಿ ಶಿವರಾಮ್ ಅವರು, ಹಲವು ವರ್ಷಗಳಿಂದ ಪ್ರತಿ ಮಾರ್ಚ್ ತಿಂಗಳಲ್ಲಿ ಭುವನೇಶ್ವರಿಗೆ ಅಭಿಷೇಕ, ಹೋಮ, ವಿಶೇಷ ಪೂಜೆಯನ್ನು ಮಾಡಿಸುತ್ತಿದ್ದಾರೆ’ ಎಂದು ಅರಮನೆಯ ಪ್ರವಾಸಿ ಮಾರ್ಗದರ್ಶಿ ರಂಗನಾಥ್ ಮಾಹಿತಿ ನೀಡಿದರು.
ಹಂಪಿಯಿಂದ ದಶದಿಕ್ಕಿಗೆ ಜ್ಯೋತಿ
ಹೊಸಪೇಟೆ: ಕರ್ನಾಟಕ ರಾಜ್ಯೋತ್ಸವಕ್ಕೆ ಹಂಪಿಯ ವಿರೂಪಾಕ್ಷ ದೇವಾಲಯದ ಪ್ರಾಂಗಣದಲ್ಲಿರುವ ಭುವನೇಶ್ವರಿ ದೇವಿಯ ಸನ್ನಿಧಿಯಿಂದ ನಾಡಿನ ದಶದಿಕ್ಕುಗಳಿಗೆ ಜ್ಯೋತಿ ಬೆಳಗಿಸಿಕೊಂಡು ಹೋಗುವ ವಿಶಿಷ್ಟ ಪರಂಪರೆ ದಶಕಗಳಿಂದ ಆಚರಣೆ
ಯಲ್ಲಿದೆ.
ರಾಜ್ಯದ ಬೇರೆ ಬೇರೆ ಭಾಗಗಳಿಂದ ವಿವಿಧ ಸಂಘಟನೆಯವರು, ಕನ್ನಡ ಪ್ರೇಮಿಗಳು ಆ ದಿನ ಹಂಪಿಗೆ ಬಂದು ಭುವನೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಳಿಕ ಅಲ್ಲಿ ಜ್ಯೋತಿ ಬೆಳಗಿಸಿಕೊಂಡು ಅವರ ಊರುಗಳಿಗೆ ಹಿಂತಿರುಗುತ್ತಾರೆ. ಆ ಜ್ಯೋತಿ ಅವರೂರಿಗೆ ಕೊಂಡೊಯ್ದ ನಂತರವೇ ರಾಜ್ಯೋತ್ಸವ ಆಚರಿಸಲಾಗುತ್ತದೆ. ಅಂದಹಾಗೆ, ಭುವನೇಶ್ವರಿ ದೇವಿ ದೇಗುಲ ನಿರ್ಮಾಣಕ್ಕೆ ಶತಮಾನಗಳ ಇತಿಹಾಸ ಇದೆ.
‘ಕಲ್ಯಾಣಿ ಚಾಲುಕ್ಯರು 11ನೇ ಶತಮಾನದಲ್ಲಿ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಭುವನೇಶ್ವರಿ ದೇವಿಯ ದೇಗುಲ ನಿರ್ಮಿಸುತ್ತಾರೆ. ಚಾಲುಕ್ಯ ಶೈಲಿಯಲ್ಲಿರುವ ದೇವಸ್ಥಾನ ವಿಶಿಷ್ಟ ಕೆತ್ತನೆ ಹೊಂದಿದೆ. ದೇವಸ್ಥಾನದ ಒಂದು ಬದಿಯಲ್ಲಿ ಪಂಪಾಂಬಿಕೆ ದೇವಿ, ಇನ್ನೊಂದು ಮಗ್ಗುಲಲ್ಲಿ ಗುಲಗುಂಜಿ ಮಾಧವ ದೇವಸ್ಥಾನ ಇದೆ. ಎಲ್ಲ ದೇವಸ್ಥಾನಗಳಲ್ಲಿ ನಿತ್ಯ ಪೂಜೆ ನೆರವೇರುತ್ತದೆ. ಆದರೆ, ರಾಜ್ಯೋತ್ಸವ, ನವರಾತ್ರಿ ಹಾಗೂ ಹಂಪಿ ಉತ್ಸವದ ಸಂದರ್ಭದಲ್ಲಿ ಭುವನೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ನವರಾತ್ರಿಯಲ್ಲಿ ನಿತ್ಯ ಒಂದೊಂದು ರೀತಿಯಲ್ಲಿ ದೇವಿಯನ್ನು ಅಲಂಕರಿಸುವುದು ವಿಶೇಷ’ ಎನ್ನುತ್ತಾರೆ ಹಂಪಿಯ ಹಿರಿಯ ಮಾರ್ಗದರ್ಶಿ ಗೋಪಾಲ್.
‘ಭುವನೇಶ್ವರಿ ದೇವಿಯಿಂದ ವಿಶಿಷ್ಟವಾದ ಶಕ್ತಿ ಪಡೆಯಲು ವಿದ್ಯಾರಣ್ಯ ಭಾರತಿ ಸ್ವಾಮೀಜಿ ಕಠೋರ ತಪ್ಪಸ್ಸು ಮಾಡುತ್ತಾರೆ. ತಪಸ್ಸಿಗೆ ಒಲಿದ ದೇವಿ ಶಕ್ತಿ ದಯಪಾಲಿಸುತ್ತಾಳೆ. ಆ ಶಕ್ತಿಯನ್ನು ವಿದ್ಯಾರಣ್ಯರು ಹಕ್ಕ–ಬುಕ್ಕರಿಗೆ ಧಾರೆಯೆರೆಯುತ್ತಾರೆ. ಬಳಿಕ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗುತ್ತದೆ’ ಎಂದು ವಿವರಿಸುತ್ತಾರೆ.
‘ಹಂಪಿ ಭುವನೇಶ್ವರಿ ದೇವಿಯನ್ನು ‘ಕರ್ನಾಟಕದ ಕುಲದೇವತೆ’ ಎಂದೂ ಕರೆಯುತ್ತಾರೆ. ವಿಜಯನಗರ ಅರಸರ ಕಾಲದಲ್ಲಿ ಮಹಾನವಮಿ ದಿಬ್ಬದ ಮೇಲೆ ದೇವಿಯನ್ನು ಪ್ರತಿಷ್ಠಾಪಿಸಿ, ಪೂಜೆ ನೆರವೇರಿಸಿದ ಬಳಿಕ ಕಾರ್ಯಕ್ರಮಗಳು ಆರಂಭವಾಗುತ್ತಿದ್ದವು. ಈಗ ಅದು ನಡೆಯುತ್ತಿಲ್ಲ. ಆದರೆ, ಹಂಪಿ ಉತ್ಸವದ ಉದ್ಘಾಟನೆಗೂ ಮುನ್ನ ಭುವನೇಶ್ವರಿ ದೇವಿಯ ಉತ್ಸವಮೂರ್ತಿಯ ಮೆರವಣಿಗೆ ನಡೆಸಲಾಗುತ್ತದೆ’ ಎಂದು ಹಿರಿಯ ಸಾಹಿತಿ ಮೃತ್ಯುಂಜಯ ರುಮಾಲೆ ಹೇಳುತ್ತಾರೆ.
‘ಕೃಷ್ಣದೇವರಾಯ ತನ್ನ ಆಸ್ಥಾನಕ್ಕೆ ‘ಭುವನ ವಿಜಯ’ ಎಂದು ನಾಮಕರಣ ಮಾಡಲು ಭುವನೇಶ್ವರಿ ದೇವಿಯೇ ಪ್ರೇರಣೆ. ಕನ್ನಡ ವಿಶ್ವವಿದ್ಯಾಲಯದಲ್ಲಿನ ಒಂದು ಸಭಾಂಗಣಕ್ಕೂ ಭುವನ ವಿಜಯ ಎಂಬ ಹೆಸರಿಡಲಾಗಿದೆ. 1936ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ 600ನೇ ವರ್ಷಾಚರಣೆಯ ಸವಿನೆನಪಿನಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲೂ ಭುವನೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು’ ಎಂದು ರುಮಾಲೆ ಸ್ಮರಿಸುತ್ತಾರೆ.
ರಾಜಧಾನಿಯಲ್ಲಿ ನಾಡದೇವತೆ
ಬೆಂಗಳೂರು: ಹಲವೆಡೆ ಕನ್ನಡ ದೇವಿ ಭುವನೇಶ್ವರಿಯ ಗುಡಿ, ಗೋಪುರ, ವೃತ್ತಗಳಿವೆ. ಕೆಲವು ಗುಡಿಗಳಲ್ಲಿ ನಿತ್ಯ ನಂದಾ ದೀಪ ಬೆಳಗಲಾಗುತ್ತದೆ.
ಹೆಬ್ಬಾಳದ ಕೆಂಪಾಪುರ ಬಳಿ ಭುವನೇಶ್ವರಿ ಗುಡಿ ಇದ್ದು, ಆ ಹೆಸರಿನಲ್ಲೇ ಪ್ರದೇಶ ಗುರುತಿಸಿಕೊಂಡಿದೆ. ಮಲ್ಲೇಶ್ವರ, ಇಂದಿರಾನಗರ, ಜಯನಗರ, ಜೋಗುಪಾಳ್ಯ, ಬಿಟಿಎಂ ಲೇಔಟ್, ಸಿ.ವಿ. ರಾಮನ್ ನಗರ, ಲಿಂಗರಾಜಪುರ, ರಾಮೋಹಳ್ಳಿ, ಸುಬ್ರಹ್ಮಣ್ಯಪುರ, ದೊಮ್ಮಲೂರು ಮತ್ತಿತರ ಕಡೆ ಭುವನೇಶ್ವರಿಯ ಗುಡಿಗಳಿಗೆ. ಕೆಲವು ಕಡೆ ಕನ್ನಡಾಂಬೆಯ ಚಿತ್ರಪಟಕ್ಕೆ ಪೂಜೆ ನಡೆಯುತ್ತದೆ.
ಇಂದಿರಾನಗರದ ಹತ್ತಿರದ ದೂಪನಹಳ್ಳಿಯಲ್ಲಿ 1991ರಲ್ಲಿ ಭುವನೇಶ್ವರಿ ದೇವಿ ದೇವಸ್ಥಾನ ಸ್ಥಾಪನೆಯಾಗಿದೆ. ಈ ದೇವಸ್ಥಾನದ ಸುತ್ತಲೂ ಒಳ್ಳೆಯ ಶಿಲಾಕೆತ್ತನೆ ಇದೆ. ನೆಲಮಂಗಲ ಪಟ್ಟಣದ ಕೋಟೆಬೀದಿ ಸಿಲ್ವರ್ ಜುಬಿಲಿ ಉದ್ಯಾನದ ಪಕ್ಕದಲ್ಲಿ ಭುವನೇಶ್ವರಿ ದೇವಸ್ಥಾನವಿದೆ. ಇಲ್ಲಿ ನವರಾತ್ರಿ ಉತ್ಸವ, ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ.
ಭುವನಗಿರಿಯ ಮೇಲೆ ಕನ್ನಡಾಂಬೆ
ಸಿದ್ದಾಪುರ (ಉತ್ತರ ಕನ್ನಡ): ತಾಲ್ಲೂಕಿನ ಭುವನಗಿರಿ ಕನ್ನಡ ತಾಯಿ ಭುವನೇಶ್ವರಿನೆಲೆಸಿರುವ ತಾಣ. ಕಣ್ಣು ಹಾಯುವವರೆಗೂ ಕಾಣುವ ಗಿರಿಶ್ರೇಣಿಗಳು, ಎತ್ತರದ ಬೆಟ್ಟದ ಮೇಲೆ ಈ ದೇಗುಲವಿದೆ.
ಭಕ್ತರ ಶ್ರದ್ಧಾಭಕ್ತಿಯ ಕೇಂದ್ರವೂ ಆಗಿರುವ ಭುವನಗಿರಿ ದೇಗುಲ, ಸಿದ್ದಾಪುರ– ಕುಮಟಾ ರಸ್ತೆಯಲ್ಲಿ ಪಟ್ಟಣದಿಂದ ಸುಮಾರು ಎಂಟು ಕಿಲೊಮೀಟರ್ ದೂರದಲ್ಲಿದೆ. ರಸ್ತೆ ಪಕ್ಕದಲ್ಲಿಯೇ ವಿಶಾಲವಾದ ಪುಷ್ಕರಣಿ ಇದೆ. ಶಾಂತ, ರಮಣೀಯ ಪರಿಸರದಲ್ಲಿರುವ ಈ ದೇಗುಲಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ವಿಜಯನಗರದ ಅರಸರ ಸಾಮಂತರಾಗಿದ್ದ ಬೀಳಗಿಯ ರಾಜರ ಪರಂಪರೆಯ ಕೊನೆಯ ಅರಸ ಬಸವೇಂದ್ರ, 1692ರಲ್ಲಿ ಭುವನಗಿರಿಯ ಬೆಟ್ಟದ ನೆತ್ತಿಯಲ್ಲಿ ಈ ದೇಗುಲವನ್ನು ಮತ್ತು ಬೆಟ್ಟದ ಕೆಳಗೆ ವಿಶಾಲ ಪುಷ್ಕರಣಿಯನ್ನು ನಿರ್ಮಿಸಿದ್ದರು ಎಂದು ಇತಿಹಾಸ ಹೇಳುತ್ತದೆ. ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿಯಿಂದ ಉಡುಪಿ ಜಿಲ್ಲೆಯ ಗಂಗೊಳ್ಳಿಯವರೆಗಿನ ಪ್ರದೇಶವನ್ನು ಅವರು ಆಳಿದ್ದರು.
ಈ ದೇವಾಲಯದ ಗರ್ಭಗುಡಿ ಶಿಲಾ ಮಯವಾಗಿದೆ. ಹಳೆಯ ಗರ್ಭಗುಡಿ ಹೊರತು ಪಡಿಸಿ, ಉಳಿದ ಕಟ್ಟಡವನ್ನು ಕೆಲವು ವರ್ಷಗಳ ಹಿಂದೆ ಭವ್ಯವಾಗಿ ಪುನರ್ ನಿರ್ಮಿಸಲಾಗಿದೆ. ಮೊದಲು ನೂರಾರು ಮೆಟ್ಟಿಲು ಏರಿ ದೇಗುಲ ಸೇರಬೇಕಾಗಿತ್ತು. ಈಗ ರಸ್ತೆಯ ಮೂಲಕವೇ ಅಲ್ಲಿಗೆ ತಲುಪಬಹುದು.
ಪ್ರತಿವರ್ಷ ಮಾಘ ಶುದ್ಧ ಹುಣ್ಣಿಮೆಯಂದು ಭುವನಗಿರಿಯಲ್ಲಿ ಮಹಾರಥೋತ್ಸವ ನಡೆಯುತ್ತದೆ. ನವರಾತ್ರಿ ಉತ್ಸವ ಸೇರಿದಂತೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯಾ ಕಾಲಕ್ಕೆ ನಡೆಸಿಕೊಂಡು ಬರಲಾಗುತ್ತಿದೆ.
ದೇವಿಯ ಪಟಕ್ಕೆ ನಿತ್ಯ ಪೂಜೆ
ನರೇಗಲ್ (ಗದಗ ಜಿಲ್ಲೆ): ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ಅನ್ನದಾನೇಶ್ವರ ಮಠದಲ್ಲಿ 1953ರ ಜನವರಿ 11ರಂದು ಕಲಾವಿದ ಸಿ.ಎನ್. ಪಾಟೀಲ ಅವರು ರಚಿಸಿದ ಆರು ಅಡಿ ಎತ್ತರದ ಭುವನೇಶ್ವರಿಯ ತೈಲವರ್ಣ ಚಿತ್ರಕ್ಕೆ ಪ್ರತಿನಿತ್ಯ ಪೂಜೆ. ಇದು ಭುವನೇಶ್ವರಿಯ ಮೊಟ್ಟಮೊದಲ ತೈಲವರ್ಣ ಚಿತ್ರವೆಂದು ಹೇಳಲಾಗುತ್ತದೆ.
ಗದುಗಿನ ಅಂದಾನಪ್ಪ ದೊಡ್ಡಮೇಟಿ ಅವರು ರಚಿಸಿದ ‘ಕರ್ಣಾಟಕ ಮಹಿಮ್ನಃಸ್ತೋತ್ರ’ವೇ ತೈಲವರ್ಣ ಚಿತ್ರ ರಚಿಸಲು ಪ್ರೇರಣೆ ಎನ್ನಲಾಗಿದೆ. ಕಾವ್ಯದಲ್ಲಿ ಕನ್ನಡಮ್ಮನ ಒಟ್ಟು 16 ಚಿತ್ರಗಳನ್ನು 16 ಶ್ಲೋಕ, 16 ರೂಪಕಗಳಲ್ಲಿ ಚಿತ್ರಿಸಲಾಗಿದೆ. ಇಲ್ಲಿ 16ರ ಸಂಖ್ಯೆ ಮಹತ್ವದ್ದು. ಇದು ಕರ್ನಾಟಕದಲ್ಲಿ 16 ಶಾಕ್ತ ಪೀಠಗಳು ಇವೆ ಎಂಬುದನ್ನು ಸಂಕೇತಿಸುತ್ತದೆ.
‘ದೊಡ್ಡಮೇಟಿ ಅವರು ನಿತ್ಯವೂ ಕನ್ನಡ ತಾಯಿಯನ್ನು ನೆನೆದು ಪೂಜಿಸುತ್ತಿದ್ದರು. ಕರ್ನಾಟಕಕ್ಕೆ ಒಳ್ಳೆಯದಾದರೆ ಸಂತೋಷ ಹಂಚಿಕೊಳ್ಳಲು ಹಾಗೂ ಕಷ್ಟ ಎದುರಾದಾಗ ಪರಿಹರಿಸುವಂತೆ ಮನೆಯಲ್ಲಿರುವ ಕನ್ನಡಮ್ಮಗೆ ಹಾಗೂ ಹಂಪಿಯಲ್ಲಿರುವ ಭುವನೇಶ್ವರಿ ದೇವಿಗೆ ಅಗ್ರಪೂಜೆ ಮಾಡಿಸುವ ಪದ್ಧತಿ ನಮ್ಮ ಮನೆತನದಲ್ಲಿ ಇಂದಿಗೂ ಇದೆ’ ಎಂದು ಮೊಮ್ಮಗ ರವೀಂದ್ರನಾಥ ದೊಡ್ಡಮೇಟಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.