ADVERTISEMENT

ಕನ್ನಡ ಹಬ್ಬಕ್ಕೆ ಮೆರವಣಿಗೆ ಮೆರಗು

ಶಾಲಾ–ಕಾಲೇಜು, ವಿವಿಧ ಸಂಘ–ಸಂಸ್ಥೆಗಳಿಂದ ರಾಜ್ಯೋತ್ಸವ ಆಚರಣೆ l ಗಮನ ಸೆಳೆದ ಕಲಾತಂಡಗಳು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 6:51 IST
Last Updated 2 ನವೆಂಬರ್ 2019, 6:51 IST
ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಗಾರುಡಿ ಗೊಂಬೆಗಳ ತಂಡ ಗಮನ ಸೆಳೆಯಿತು 
ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಗಾರುಡಿ ಗೊಂಬೆಗಳ ತಂಡ ಗಮನ ಸೆಳೆಯಿತು    

ಬೆಂಗಳೂರು: ನಗರದಲ್ಲಿ ಶುಕ್ರವಾರ ‘ಕನ್ನಡ ಹಬ್ಬದ’ ವಾತಾವರಣ ಸೃಷ್ಟಿಯಾಗಿತ್ತು. ಹಳದಿ–ಕೆಂಪು ಬಣ್ಣದ ನಾಡಧ್ವಜ ಎಲ್ಲೆಡೆ ಹಾರಾಡುತ್ತಿತ್ತು. ವಿವಿಧ ಸಂಘ–ಸಂಸ್ಥೆಗಳು ನಡೆಸಿದ ಕನ್ನಡ ತಾಯಿ ಭುವನೇಶ್ವರಿ ದೇವಿ ಭಾವಚಿತ್ರದ ಮೆರವಣಿಗೆ ನಗರಕ್ಕೆ ವಿಶೇಷ ಕಳೆ ತಂದುಕೊಟ್ಟಿತ್ತು.

ಹಚ್ಚೇವು ಕನ್ನಡದ ದೀಪ, ಬಾರಿಸು ಕನ್ನಡ ಡಿಂಡಿಮವ, ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು , ಕನ್ನಡವೇ ನಮ್ಮಮ್ಮ ಸೇರಿದಂತೆ ಕನ್ನಡದ ಹಲವು ಗೀತೆಗಳನ್ನು ಒಳಗೊಂಡ ಕಾರ್ಯಕ್ರಮಗಳು ರಾಜ್ಯೋತ್ಸವಕ್ಕೆ ಮೆರುಗು ನೀಡಿದವು. ಕನ್ನಡದ ಕವಿಗಳು, ಸಾಹಿತಿಗಳ ಕೊಡುಗೆಯನ್ನು ನೆನೆಯಲಾಯಿತು. ಕನ್ನಡ ಭಾಷೆಯ ಹಿರಿಮೆ–ಗರಿಮೆಯನ್ನು ಕೊಂಡಾಡುವುದರ ಜೊತೆಗೆ, ಭಾಷೆಯು ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಶಾಲಾ–ಕಾಲೇಜುಗಳು ಹಾಗೂ ವಿವಿಧ ಸಂಘ–ಸಂಸ್ಥೆಗಳಲ್ಲಿ 64ನೇ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ADVERTISEMENT

ಕಿತ್ತೂರು ಕರ್ನಾಟಕವಾಗಲಿ: ಕನ್ನಡ ಗೆಳೆಯರ ಬಳಗದ ವತಿಯಿಂದ ಲಾಲ್‌ಬಾಗ್‌ನಲ್ಲಿ ಆಚರಿಸಲಾದ ರಾಜ್ಯೋತ್ಸವದಲ್ಲಿ ಮಾತನಾಡಿದ ಹಿರಿಯ ಸಂಶೋಧಕ ಎಂ. ಚಿದಾನಂದಮೂರ್ತಿ, ‘ದಾಸ್ಯದ ಪ್ರತೀಕವಾಗಿದ್ದ ‘ಹೈದರಾಬಾದ್ ಕರ್ನಾಟಕ’ ಹೆಸರನ್ನು ‘ಕಲ್ಯಾಣ ಕರ್ನಾಟಕ’ ಎಂದು ಮರು ನಾಮಕರಣ ಮಾಡಿ ಕನ್ನಡಿಗರ ಸ್ವಾಭಿಮಾನವನ್ನು ಎತ್ತಿ ಹಿಡಿದಿರುವ ರಾಜ್ಯ ಸರ್ಕಾರವು ‘ಮುಂಬೈ ಕರ್ನಾಟಕ’ ಹೆಸರನ್ನು ‘ಕಿತ್ತೂರು ಕರ್ನಾಟಕ’ ಎಂದು ಶೀಘ್ರವಾಗಿ ಬದಲಿಸಲಿ’ ಎಂದು ಒತ್ತಾಯಿಸಿದರು.

ಕನ್ನಡ ಪ್ರಾಧ್ಯಾಪಕ ಡಾ. ರುದ್ರೇಶ್ ಅದರಂಗಿ, ರಾ.ನಂ. ಚಂದ್ರಶೇಖರ, ಬಾ.ಹ. ಉಪೇಂದ್ರ, ಮ. ಚಂದ್ರಶೇಖರ ಹಾಜರಿದ್ದರು.

ಕಸಾಪ: ಕನ್ನಡ ಸಾಹಿತ್ಯ ಪರಿಷತ್‌ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದ ಮಾತನಾಡಿದ ಪರಿಷತ್‌ ಅಧ್ಯಕ್ಷ ಮನು ಬಳಿಗಾರ, ‘ಪ್ರತಿಯೊಬ್ಬರೂ ಕನ್ನಡದಲ್ಲೇ ಮಾತನಾಡಬೇಕು, ಕನ್ನಡದಲ್ಲೇ ವ್ಯವಹರಿಸಬೇಕು ಆ ಮೂಲಕ ನಮ್ಮ ಭಾಷೆಯನ್ನು ಪ್ರೀತಿಸಬೇಕು’ ಎಂದು ಹೇಳಿದರು.

ಗೌರವ ಕಾರ್ಯದರ್ಶಿ ಡಾ. ರಾಜಶೇಖರ ಹತಗುಂದಿ, ಗೌರವ ಕೋಶಾಧ್ಯಕ್ಷರಾದ ಪಿ. ಮಲ್ಲಿಕಾರ್ಜುನಪ್ಪ, ರಾಜ್ಯ ಸಂಚಾಲಕ ಪದ್ಮರಾಜ ದಂಡಾವತಿ, ಬೆಂಗಳೂರು ನಗರ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಮಾಯಣ್ಣ, ರಮಾದೇವಿ ವಿಶ್ವೇಶ್ವರಯ್ಯ, ನೊಣವಿನಕೆರೆ ರಾಮಕೃಷ್ಣಯ್ಯ, ಮುರಳಿಕೃಷ್ಣ ಭಾಗವಹಿಸಿದ್ದರು.

ಕರ್ನಾಟಕ ರಾಜ್ಯೋತ್ಸವ ಸಮಿತಿ: ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಸಮಿತಿ ವತಿಯಿಂದ ನಗರದ ನೃಪತುಂಗ ಮಂಟಪದಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಕನ್ನಡ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರ ಮೆರವಣಿಗೆ ನಡೆಯಿತು. ವಿವಿಧ ಸಾಂಸ್ಕೃತಿಕ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಡಿವಿಜಿ ಬಳಗ: ಬಸವನ ಗುಡಿಯ ಕಹಳೆ ಬಂಡೆ ಉದ್ಯಾನವನದಲ್ಲಿ ಡಿವಿಜಿ ಕನ್ನಡ ಬಳಗದ ವತಿಯಿಂದ
ರಾಜ್ಯೋತ್ಸವ ಆಚರಿಸಲಾಯಿತು. ಇದೇ ವೇಳೆ ಡಿವಿಜಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ,ಎಸ್.ಪಿನಾಕಪಾಣಿ, ಜಗದೀಶ್ಮುಳಬಾಗಿಲು ಮತ್ತಿತರರು ಇದ್ದರು.

ಅಖಿಲ ಕರ್ನಾಟಕ ಕ್ಯಾಥೋಲಿಕ್‌ ಕ್ರೈಸ್ತರ ಕನ್ನಡ ಸಂಘ: ಸಂಪಂಗಿರಾಮನಗರದಲ್ಲಿನ ಕ್ರೈಸ್ತರ ಕನ್ನಡ ಸಂಘದಿಂದ ‘ಕನ್ನಡ ನಿಘಂಟು ಕರ್ತೃ’ ರೆವರೆಂಡ್‌ ಎಫ್‌. ಕಿಟಲ್‌ ಸ್ಮರಣೆ ಕಾರ್ಯಕ್ರಮ ನಡೆಯಿತು. ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ಕಿಟಲ್‌ ಅವರ ಕೊಡುಗೆ ಸ್ಮರಿಸಲಾಯಿತು.

ವಿವಿಧ ಸಂಘ–ಸಂಸ್ಥೆಗಳು ರಾಜ್ಯೋತ್ಸವ ಅಂಗವಾಗಿ ಅನ್ನಸಂತರ್ಪಣೆ ಏರ್ಪಡಿಸಿದ್ದವು. ಶಾಲಾ–ಕಾಲೇಜುಗಳಲ್ಲಿ ಸಿಹಿ ಹಂಚಿ ಕನ್ನಡ ಹಬ್ಬವನ್ನು ಆಚರಿಸಲಾಯಿತು.

‘ನಾಡಗೀತೆಗೆ ಗೌರವ ತಂದುಕೊಡಿ’
‘ನಾಡಗೀತೆಗೆ ಗೌರವ ತಂದುಕೊಡಲು ರಾಜ್ಯಸರ್ಕಾರ ಮುಂದಾಗಲಿ’ ಎಂದು ಹಿರಿಯ ಸಂಶೋಧಕ ಎಂ. ಚಿದಾನಂದ ಮೂರ್ತಿ ಹೇಳಿದರು.

‘ನಾಡಗೀತೆಯನ್ನು ಹಾಡುವ ಕ್ರಮ, ನಿರ್ದಿಷ್ಟ ಕಾಲಾವಧಿ ಮತ್ತು ಧಾಟಿಯನ್ನು ನಿಗದಿ ಪಡಿಸದಿರುವುದರಿಂದ ಒಬ್ಬೊಬ್ಬರು ಒಂದೊಂದು ರೀತಿ ಹಾಡುತ್ತಾರೆ. ನಾಡಗೀತೆಗೆ ಆಗುತ್ತಿರುವ ಈ ಅಪಚಾರವನ್ನು ತಡೆಯಲು ರಾಷ್ಟ್ರಗೀತೆ ‘ಜನಗಣಮನ’ದ ಮಾದರಿಯಲ್ಲಿ ನಿರ್ದಿಷ್ಟ ಕಾಲಾವಧಿ ನಿಗದಿಪಡಿಸಬೇಕು’ ಎಂದರು.

ಬಸ್‌–ಆಟೊಗಳಿಗೆ ಸಿಂಗಾರ
ನಗರ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲೂ ಶುಕ್ರವಾರ ರಾಜ್ಯೋತ್ಸವದ ಸಂಭ್ರಮ–ಸಡಗರ ಕಾಣಿಸಿತು.ಬಿಎಂಟಿಸಿಯ ಕೆಲ ಬಸ್‍ಗಳು ವಿವಿಧ ಹೂವುಗಳಿಂದ ಅಲಂಕಾರಗೊಂಡು ಪ್ರಯಾಣಿಕರನ್ನು ಆಕರ್ಷಿಸಿದವು.

ಹಲವು ಆಟೊಗಳನ್ನು ಕೂಡ ವಿಶೇಷವಾಗಿ ಸಿಂಗರಿಸಲಾಗಿತ್ತು. ಕನ್ನಡದ ಧ್ವಜವನ್ನು ಕಟ್ಟಿಕೊಂಡು ಸಂಚರಿಸಿದವು. ಕನ್ನಡದ ಗೀತೆಗಳನ್ನು ಹಾಕಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.