ADVERTISEMENT

ಹೇಳತೇನ ಕೇಳ ಕನ್ನಡದ ಕಳವಳ

ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣಕ್ಕೆ ಕಂಬಾರ ಆಗ್ರಹ

ವಿಶಾಲಾಕ್ಷಿ
Published 5 ಜನವರಿ 2019, 1:52 IST
Last Updated 5 ಜನವರಿ 2019, 1:52 IST
ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಮಾತನಾಡುತ್ತಿರುವುದು.
ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಮಾತನಾಡುತ್ತಿರುವುದು.   

ಅಂಬಿಕಾತನಯತ್ತ ಪ್ರಧಾನ ವೇದಿಕೆ (ಧಾರವಾಡ): ‘ಒಂದರಿಂದ ಏಳನೇ ತರಗತಿಯವರೆಗಿನ ಕನ್ನಡ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಬೇಕು; ತುರ್ತಾಗಿ ಸರ್ಕಾರಿ ಶಾಲೆಗಳ ಸುಧಾರೀಕರಣ ನಡೆಯಬೇಕು, ಅನಂತರದ 8ನೆಯ ತರಗತಿಯಿಂದ ಶಿಕ್ಷಣವನ್ನು ಖಾಸಗಿಯವರಿಗೆ ಕೊಡಬಹುದು. ಇದಾಗದಿದ್ದಲ್ಲಿ ರಾಜ್ಯಭಾಷೆಗಳಿಗೆ ಭವಿಷ್ಯವಿಲ್ಲ‘ ಎಂದು 84ನೇ ಅಖಿಲ ಭಾರತ ಸಮ್ಮೇಳನದ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಎಚ್ಚರಿಸಿದರು.

ದಿನೇ ದಿನೇ ವ್ಯಾಪಿಸುತ್ತ, ಹೆಚ್ಚು ಹೆಚ್ಚು ಪ್ರಭಾವಶಾಲಿಯಾಗುತ್ತಿರುವ ಇಂಗ್ಲಿಷ್ ಭಾಷೆಯು ದೇಸಿ ಭಾಷೆಗಳ, ಸಂಸ್ಕೃತಿಯ ಕತ್ತು ಹಿಸುಕುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಖಾಸಗಿ ಶಾಲೆಗಳ ಅಬ್ಬರದಲ್ಲಿ ಕನ್ನಡ ಶಾಲೆಯ ಮಕ್ಕಳನ್ನು ನಿರ್ಗತಿಕರಂತೆ ಕಾಣುತ್ತಿರುವುಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

’ಕನ್ನಡದಲ್ಲಿ ಓದಿ ಬೆಳೆದ ಮಗು ಬೌದ್ಧಿಕ ಕಸುವಿನಿಂದ ಬೆಳೆದರೆ, ಬಾಯಿಪಾಠದ ಮೂಲಕ ಇಂಗ್ಲಿಷ್ ಗೀಳಿಗಳಾದ ಮಕ್ಕಳು ರಸಹೀನವಾಗಿ ಬೆಂಡಾಗುವ ಅಪಾಯವೇ ಹೆಚ್ಚು. ಇತ್ತ ಕನ್ನಡವೂ ಬಾರದ ಅತ್ತ ಇಂಗ್ಲಿಷ್ ಮೇಲೆ ಪ್ರಭುತ್ವವನ್ನೂ ಸಾಧಿಸದೇ ಎಡಬಿಡಂಗಿಗಳಾಗುತ್ತಿರುವ ಸನ್ನಿವೇಶ ಸದ್ಯದ್ದು’ ಎಂದು ಆತಂಕ ವ್ಯಕ್ತಡಿಸಿದರು.

ADVERTISEMENT

‘ತಾಯಿ ನುಡಿಯಲ್ಲಿ ಶಿಕ್ಷಣ ಕೊಡಬೇಕೆಂಬ ಸಿದ್ಧಾಂತ ಈಗ ಸರ್ವಸಮ್ಮತವಾಗಿದೆ. ಆದರೆ, ಇದಕ್ಕೆ ನಮ್ಮ ಖಾಸಗಿ ಶಾಲೆ ನಡೆಸುವವರನ್ನು ಹೊರತುಪಡಿಸಿ ಶಿಕ್ಷಣ ತಜ್ಞರೆಲ್ಲ ಸರ್ವಾನುಮತದಿಂದ ಒಪ್ಪುತ್ತಾರೆ. ಆದರೆ, ಅದಕ್ಕೆ ಅಡಚಣೆಗಳಿವೆಯೆಂದೂ ಹಿಂಜರಿಯುತ್ತಾರೆ. ಕನ್ನಡ ಸಾಹಿತ್ಯವನ್ನು ಕಲಿಸಬಹುದು, ಸಂಸ್ಕೃತ ಸಾಹಿತ್ಯವನ್ನು ಕಲಿಸಬಹುದು. ಆದರೆ ಮಹತ್ವದ ವಿಷಯಗಳಾದ ಭೌತಶಾಸ್ತ್ರ, ಗಣಿತ, ವೈದ್ಯಶಾಸ್ತ್ರ, ತಂತ್ರಜ್ಞಾನ - ಇವನ್ನು ಕನ್ನಡದಲ್ಲಿ ಕಲಿಸುವುದು ಸಾಧ್ಯವಿಲ್ಲವೆಂದೇ ಎಲ್ಲರೂ ಹೇಳುತ್ತಾರೆ. ನಾವು ಕಲಿಸಬೇಕಾದ ಶಾಸ್ತ್ರ ಜ್ಞಾನವೆಲ್ಲ ಇಂಗ್ಲಿಷಿನಲ್ಲಿ ಲಭ್ಯವಿರುವುದರಿಂದ, ಶಿಕ್ಷಕರೆಲ್ಲ ಇಂಗ್ಲಿಷಿನಲ್ಲಿ ಕಲಿತು ಬಂದವರಾದ್ದರಿಂದ ಇಂಗ್ಲಿಷ್ ಭಾಷೆಯೇ ಇದಕ್ಕೆ ಸರಿಯಾದ ಮಾಧ್ಯಮವೆಂಬುದನ್ನು ಎಲ್ಲರೂ ದೃಢವಾಗಿ ನಂಬಿಬಿಟ್ಟಿದ್ದಾರೆ’ ಎಂದ ಅವರು, ಅಂಥ ದೌರ್ಬಲ್ಯವನ್ನು ಮೀರುವ ಪ್ರಯತ್ನ ಮಾಡಿದ ಶಿವರಾಮ ಕಾರಂತ ಹಾಗೂ ಕುವೆಂಪು ಅವರನ್ನು ಈ ವೇಳೆ ಸ್ಮರಿಸಿದರು.

ಕನ್ನಡದ ಮೂಲಕ ವಿಜ್ಞಾನದ ತಿಳಿವಳಿಕೆ ಸಾಧ್ಯ ಎಂಬುದನ್ನು ಹೇಳಿದ ಹಾಗೂ ಅದು ನಮ್ಮ ಇಂದಿನ ಅಗತ್ಯವೆಂದು ತೋರಿಸಲು ವಿಜ್ಞಾನ ಪ್ರಪಂಚ ಬರೆದ ಶಿವರಾಮ ಕಾರಂತರನ್ನು ಹಾಗೂ ಜನಸಾಮಾನ್ಯರಿಗೆ ವಿಜ್ಞಾನದ ತಿಳಿವಳಿಕೆ ನೀಡಲೆಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಂದ ಹಳ್ಳಿಗಳಲ್ಲಿ ಉಪನ್ಯಾಸಏರ್ಪಡಿಸಿದ ಕುವೆಂಪು ಅವರನ್ನು, ಕನ್ನಡ ಭಾಷೆಗೆ ಮಾರ್ಗದರ್ಶನ ಮಾಡಿದ ದಾರ್ಶನಿಕರು ಎಂದು ಬಣ್ಣಿಸಿದ ಕಂಬಾರ, ಇದೇ ಹುರುಪಿನಲ್ಲಿ ನಮ್ಮ ಪ್ರಾಧ್ಯಾಪಕರು ವಿಜ್ಞಾನವನ್ನು ಶಾಲೆ ಕಾಲೇಜುಗಳಲ್ಲಿ, ಕನ್ನಡದಲ್ಲಿ ಬೋಧನೆ ಮಾಡಿದ್ದರೆ ಇವತ್ತಿನ ನಮ್ಮ ಭಾಷಾ ಸಮಸ್ಯೆಯೇ ಇರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ತಾವು ಕುಲಪತಿಯಾಗಿದ್ದಾಗ, ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಂದಿಗೆ ಇಂಥದೇ ಒಂದು ಪ್ರಯೋಗ ಮಾಡಿದ್ದನ್ನು ಸ್ಮರಿಸಿಕೊಂಡರು.

‘ಅಂದಿನ ಪಿ.ಯು. ವಿಜ್ಞಾನದ ನಾಲ್ಕು ಪಠ್ಯಗಳನ್ನು ಕನ್ನಡಕ್ಕೆ ಅನುವಾದಿಸಿ ಬಿಡುಗಡೆ ಮಾಡಲಾಗಿತ್ತು. ಈ ಯೋಜನೆ ಎಷ್ಟು ಜನಪ್ರಿಯವಾಯಿತೆಂದರೆ ಲಕ್ಷಾಂತರ ಪ್ರತಿಗಳು ಮಾರಾಟವಾಗಿ ಆ ವರ್ಷಗಳಲ್ಲಿ ಹಳ್ಳಿಗಾಡಿನ ಕಾಲೇಜುಗಳ ಪರೀಕ್ಷೆಯ ಫಲಿತಾಂಶ ಅತ್ಯುತ್ತಮವಾಗಿತ್ತೆಂದು ಅಂದಿನ ಶಿಕ್ಷಣಾಧಿಕಾರಿಗಳೇ ಹೇಳಿದರು. ಸ್ವಯಂ ಶಿವರಾಮ ಕಾರಂತರು ಕೂಡ ನಮ್ಮ ಈ ಯೋಜನೆಯನ್ನು ಮೆಚ್ಚಿಕೊಂಡರು’ಎಂದು ಮಾತೃಭಾಷೆ ಮಾಡಿದ ಪರಿಣಾಮವನ್ನು ಹಂಚಿಕೊಂಡರು.

‘ಅದುವರೆಗೆ ಕಂಠಪಾಠ ಮಾಡಿ ಉತ್ತರಿಸುತ್ತಿದ್ದ ಮಕ್ಕಳು, ಕನ್ನಡದಲ್ಲಿ ವಿಷಯ ತಿಳಿದುಕೊಂಡು ಇಂಗ್ಲಿಷಿನಲ್ಲಿ ಉತ್ತರ ಬರೆದಿದ್ದರು. ಈಗಲೂ ನಾನು ಹೇಳುವುದೇನೆಂದರೆ ವಿಜ್ಞಾನದ ಯಾವುದೇ ಪಠ್ಯವಿರಲಿ ಅದನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟರೆ ವಿದ್ಯಾರ್ಥಿಗಳಿಗೆ ಖಂಡಿತ ಸಹಾಯವಾಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಯಾವಾಗ ವಿಜ್ಞಾನದ ಶಿಕ್ಷಣಕ್ಕೆ ಕನ್ನಡದ ಆಸರೆ ಇಲ್ಲವಾಯಿತೋ ಆಗಲೇ ಇಂಗ್ಲಿಷ್ ನಮ್ಮ ಶಿಕ್ಷಣದ ಅವಿಭಾಜ್ಯ ಅಂಗವಾಯಿತು; ಇದೀಗ ಕನ್ನಡ ಉಳಿಯುವ ಬಗ್ಗೆಯೇ ಅನುಮಾನ ಬರುವಷ್ಟರ ಮಟ್ಟಿಗೆ ಅದರ ವ್ಯಾಪ್ತಿ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಒಂದು ರಾಜ್ಯದ ಭಾಷೆ, ಸಂಸ್ಕೃತಿ, ಪರಂಪರೆಗಳನ್ನು ಸಂರಕ್ಷಿಸುವ ಜವಾಬ್ದಾರಿ ಸರ್ಕಾರದ್ದು. ಇದನ್ನರಿತು ತನ್ನ ರಾಜ್ಯದ ಪ್ರಜೆಗಳಿಗೆ ಎಂಥ ಶಿಕ್ಷಣ ಕೊಡಬೇಕೆಂದು ನಿರ್ಧರಿಸುವ ಕರ್ತವ್ಯ ಮತ್ತು ಅಧಿಕಾರ ಸರ್ಕಾರದ್ದು. ಕನ್ನಡವೇ ನಮ್ಮೆಲ್ಲ ದೈನಿಕ ವ್ಯವಹಾರಕ್ಕೆ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವಿಕಾಸಕ್ಕೆ ಬೇಕಾದ್ದು. ಸರ್ಕಾರವಾಗಲಿ, ಶಿಕ್ಷಣ ಮತ್ತು ಸಂಸ್ಕೃತಿ ಸಂಸ್ಥೆಗಳಾಗಲಿ ವ್ಯಾಪಾರ ವಾಣಿಜ್ಯ ವ್ಯವಹಾರಗಳಲ್ಲಿ ಕೂಡ ಕನ್ನಡ ಭಾಷೆಗೆ ಮೊದಲ ಆದ್ಯತೆಯ ಸ್ಥಾನ ಕೊಡಬೇಕು ಎಂದು ಪ್ರತಿಪಾದಿಸಿದ ಕಂಬಾರರು, ‘ಭಾಷೆ ಬಳಕೆಯಿಂದ ಉಳಿಯುತ್ತದೆ ಚಳವಳಿಯಿಂದಲ್ಲ ಎಂಬುದನ್ನು ಮನಗಂಡು ಕನ್ನಡ ಭಾಷೆಯ ಬಳಕೆಗೆ, ಶಾಲೆಗಳಿಗೆ ಅಗತ್ಯ ಪ್ರೋತ್ಸಾಹ, ಸೌಲಭ್ಯ ನೀಡಬೇಕು’ ಎಂದು ಒತ್ತಾಯಿಸಿದರು.

ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಕಂಪ್ಯೂಟರ್ ಸರ್ವವ್ಯಾಪಿಯಾಗಿ ಆವರಿಸುತ್ತಿದೆ. ನಾವು ಕಂಪ್ಯೂಟರ್‌ನಲ್ಲಿ ಇಂಗ್ಲಿಷ್ ಭಾಷೆಯಷ್ಟೇ ಸಮರ್ಥವಾಗಿ ನಮ್ಮ ಭಾಷೆಯನ್ನು ಬಳಸಲು ಸಾಧ್ಯವಾಗದಿದ್ದರೆ ನಮ್ಮ ಭಾಷೆಯನ್ನು ಉಳಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ ಎಂದು ಪೂರ್ಣಚಂದ್ರ ತೇಜಸ್ವಿ ಸಾರಿ ಸಾರಿ ಹೇಳಿದ್ದರು. ನಾಡಿನ ಸುಪ್ರಸಿದ್ಧ ವಿಜ್ಞಾನಿ ಡಾ. ರಾಜಾರಾಮಣ್ಣ ಕೂಡ ಇದೇ ಮಾತನ್ನು ಅನುಮೋದಿಸಿದ್ದರು ಎಂದು ಜ್ಞಾಪಿಸಿಕೊಂಡ ಡಾ.ಕಂಬಾರ, ಮಾಹಿತಿ ತಂತ್ರಜ್ಞಾನದ ವಿವಿಧ ಅಂಗಗಳಲ್ಲಿ ಕಾಲಕಾಲಕ್ಕೆ ಆಗುತ್ತಿರುವ ಬದಲಾವಣೆಗೆ ಸರಿಹೊಂದುವಂತೆ ಆಗಾಗ ಸರ್ಕಾರಕ್ಕೆ ಸಲಹೆ ಕೊಡಲು ಒಂದು ತಜ್ಞರ ಸಮಿತಿಯ ಅಗತ್ಯವಿದೆ ಎಂದು ಸಲಹೆ ನೀಡಿದರು.

ಡಬ್ಬಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ವಿಚಾರ ಮಂಡಿಸಿದ ಡಾ.ಕಂಬಾರ, ಕನ್ನಡಕ್ಕೆ ಬೇರೆ ಭಾಷೆಯ ಚಲನಚಿತ್ರಗಳನ್ನು ಡಬ್ ಮಾಡಬಾರದೆಂದು ಕನ್ನಡ ಚಲನಚಿತ್ರ ಮಂಡಳಿ ನಿರ್ಣಯ ತೆಗೆದುಕೊಂಡಿದೆ. ಚಲನಚಿತ್ರಗಳನ್ನು ಡಬ್ ಮಾಡಬಾರದು ಎನ್ನುವುದು ಯೋಗ್ಯ ನಿರ್ಣಯ. ಆದರೆ ವಿದೇಶಗಳ ಇತಿಹಾಸ, ಎನಿಮಲ್ ಪ್ಲಾನೆಟ್, ಡಿಸ್ಕವರಿ ಮುಂತಾದ ವಾಹಿನಿಗಳಲ್ಲಿ ಬರುವ ಕಾರ್ಯಕ್ರಮಗಳನ್ನು ಕನ್ನಡಕ್ಕೆ ಡಬ್ ಮಾಡಿ ತೋರಿಸಿದರೆ ನಮ್ಮ ಮಕ್ಕಳಿಗೆ ಅವು ಒಳ್ಳೆ ಪಾಠಗಳಾಗುತ್ತವೆ. ಅಂಥ ಕಾರ್ಯಕ್ರಮಗಳನ್ನು ನಮ್ಮ ಮಕ್ಕಳು ಈಗ ತೆಲಗು, ತಮಿಳು ಚಾನೆಲ್‍ಗಳಲ್ಲಿ ನೋಡುತ್ತಿದ್ದಾರೆ. ಅದರ ಬದಲು ಕನ್ನಡದಲ್ಲಿಯೇ ನೋಡುವುದು ಒಳ್ಳೆಯದು ಎಂದು ಅವರು ಹೇಳಿದರು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.