ADVERTISEMENT

ಸಾಂಸ್ಕೃತಿಕ ನಗರಿಯಲ್ಲಿ ಅಕ್ಷರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 20:20 IST
Last Updated 3 ಜನವರಿ 2019, 20:20 IST
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜುಗೊಂಡಿರುವ ವೇದಿಕೆ –ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜುಗೊಂಡಿರುವ ವೇದಿಕೆ –ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಧಾರವಾಡ: ಸಾಹಿತ್ಯ, ಸಂಗೀತ, ಜಾನಪದದ ತವರೂರು ಎಂದೇ ಎನಿಸಿರುವ ಧಾರವಾಡದಲ್ಲೀಗ ನುಡಿಜಾತ್ರೆಯ ಸಂಭ್ರಮ. ಭೌಗೋಳಿಕ ಕರ್ನಾಟಕದ ಒಗ್ಗಟ್ಟಿಗೆ ಹುಟ್ಟಿಕೊಂಡ ಏಕೀಕರಣ ಚಳವಳಿ, ಭಾಷಾ ಮಾಧ್ಯಮದ ವಿಷಯವಾದ ಗೋಕಾಕ ಚಳವಳಿಯಂಥ ಹೋರಾಟಗಳಿಗೆ ವೇದಿಕೆಯಾದ; ಬೇಂದ್ರೆ ಅವರಂಥ ಕವಿಗಳ ಕಾವ್ಯಸೆಲೆಯಾದ ಧಾರಾನಗರಿ ಆರು ದಶಕಗಳ ನಂತರ ನುಡಿಜಾತ್ರೆಗೆ ಅಣಿಗೊಂಡಿದೆ.

ಕನ್ನಡದೊಂದಿಗೆ ಚಳವಳಿಗಳನ್ನೂ ಕಟ್ಟಿದ ಈ ನೆಲ ಸಾಕಷ್ಟು ಸಂಭ್ರಮದೊಂದಿಗೆ, ನಾಡು–ನುಡಿ ಎದುರಿಸುತ್ತಿರುವ ಒಂದಿಷ್ಟು ಸಂಕಷ್ಟಗಳ ಚಿಂತನ–ಮಂಥನಕ್ಕೂ ವೇದಿಕೆಯಾಗಲಿದೆ.

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರ ಬೆಳಿಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಒಂದೆಡೆ ನಿಕಟಪೂರ್ವ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ ಅವರ ನುಡಿ ಮತ್ತು ಸಮ್ಮೇಳನಾಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅವರ ಮಾತುಗಳತ್ತ ಕನ್ನಡದ ಮನಸ್ಸುಗಳ ಚಿತ್ತ ನೆಟ್ಟಿದೆ.

ADVERTISEMENT

1957ರ ನಂತರ ಸಾಂಸ್ಕೃತಿಕ ನಗರಿಯಲ್ಲಿ ನಡೆಯುತ್ತಿರುವ ನುಡಿಜಾತ್ರೆಗೆ ಇಡೀ ನಗರವೇ ಕಂಗೊಳಿಸುತ್ತಿದೆ. ಎಲ್ಲೆಲ್ಲೂ ಜ್ಞಾನಪೀಠ ಪುರಸ್ಕೃತರ ಚಿತ್ರಗಳು ರಾರಾಜಿಸುತ್ತಿವೆ. ಕನ್ನಡದ ನುಡಿಗಟ್ಟುಗಳು, ಹೆಸರಾಂತ ಕವಿಗಳ ಕವನದ ಸಾಲುಗಳು ಮೆರವಣಿಗೆ ನಡೆಯುವ ರಾಜಮಾರ್ಗದ ಗೋಡೆಗಳನ್ನು ಅಲಂಕರಿಸಿವೆ.

ನಗರದಿಂದ ತುಸುವೇ ದೂರದಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಮೈದಾನದಲ್ಲಿ ನಿರ್ಮಾಣಗೊಂಡಿರುವ ಮಹಾಕವಿ ಪಂಪ ಮಹಾಮಂಟಪದ ಅಂಬಿಕಾತನಯದತ್ತ ಪ್ರಧಾನ ವೇದಿಕೆಯಲ್ಲಿ ಇನ್ನು ಮೂರು ದಿನ ಕನ್ನಡದ ಹಣತೆಯ ಬೆಳಗಲಿದೆ. ನಾಡು, ನುಡಿ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಪಸರಿಸುವ ಪ್ರಯತ್ನ ನಡೆಯಲಿದೆ.

ಡೆಪ್ಯುಟಿ ಚನ್ನಬಸಪ್ಪ ಮಹಾದ್ವಾರ, ಆಲೂರು ವೆಂಕಟರಾವ್, ಡಾ. ವಿ.ಕೃ.ಗೋಕಾಕ, ಡಾ. ಎಂ.ಎಂ.ಕಲಬುರ್ಗಿ, ಡಾ. ಬೆಟಗೆರೆ ಕೃಷ್ಣಶರ್ಮ ದ್ವಾರಗಳನ್ನು ನಿರ್ಮಿಸಲಾಗಿದೆ.

ಕಂಗೊಳಿಸುತ್ತಿದೆ ಮೆರವಣಿಗೆ ಮಾರ್ಗ: ಕನ್ನಡದ ಹಬ್ಬಕ್ಕಾಗಿ, ನಗರದಿಂದ ಸಮ್ಮೇಳನದ ಸ್ಥಳದವರೆಗಿನ 5 ಕಿ.ಮೀ ಮಾರ್ಗ ಹಳದಿ ಹಾಗೂ ಕೆಂಪು ಬಣ್ಣಗಳ ಬಂಟಿಂಗ್‌ಗಳಿಂದ ಸಿಂಗಾರಗೊಂಡಿದೆ. ಪ್ರಮುಖ ವೃತ್ತಗಳು ಕನ್ನಡ ಧ್ವಜದ ತೋರಣವನ್ನು ಕಟ್ಟಿಕೊಂಡು ಸಮ್ಮೇಳನಕ್ಕೆ ಬರುತ್ತಿರುವವರನ್ನು ಸ್ವಾಗತಿಸುತ್ತಿವೆ. ನಾಡಿನ ವಿವಿಧ ಮೂಲೆಗಳಿಂದ ಬಂದ 50ಕ್ಕೂ ಹೆಚ್ಚು ಕಲಾತಂಡಗಳು, 10ಸಾವಿರಕ್ಕೂ ಹೆಚ್ಚು ಮಕ್ಕಳು ಕನ್ನಡದ ಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರೊಂದಿಗೆ, ಶತಮಾನ ಕಂಡ ಕರ್ನಾಟಕ ಕಾಲೇಜು ಮೈದಾನದಿಂದ 14 ಸ್ತಬ್ಧಚಿತ್ರಗಳೊಂದಿಗೆ, ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಲಿದೆ. ಅಲಂಕೃತ ಯಾಂತ್ರಿಕ ಸಾರೋಟಿನಲ್ಲಿ ಕಂಬಾರ ದಂಪತಿ ಮೆರವಣಿಗೆ ಹೊರಡಲಿದ್ದಾರೆ.

ಬೆಳಿಗ್ಗೆ 8.30ಕ್ಕೆ ಆರಂಭವಾಗಲಿರುವ ಮೆರವಣಿಗೆ ಆಲೂರು ವೆಂಕಟರಾವ್ ವೃತ್ತ, ವಿವೇಕಾನಂದ ವೃತ್ತ, ಅಂಜುಮನ್ ವಿದ್ಯಾಲಯ, ರಾಣಿ ಚೆನ್ನಮ್ಮ ಉದ್ಯಾನ, ಹೊಸ ಬಸ್‌ನಿಲ್ದಾಣ ರಸ್ತೆ, ಕೃಷಿ ವಿಶ್ವವಿದ್ಯಾಲಯದ ಪ್ರಧಾನ ವೇದಿಕೆಗೆ ಬಂದು ತಲುಪಲಿದೆ.

ಮೂರುಸಾವಿರ ಮಠದ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆಗೆ ದನಿಯಾಗಲಿದ್ದಾರೆ. ಸ್ಮರಣ ಸಂಚಿಕೆ, ವಿವಿಧ ಲೇಖಕರ ಪುಸ್ತಕಗಳು, ಪರಿಷತ್ತಿನ ಪುಸ್ತಕಗಳ ಬಿಡುಗಡೆ, ಪುಸ್ತಕ ಮಳಿಗೆಗಳ ಉದ್ಘಾಟನೆ, ಮಹಾಮಂಟಪ ಉದ್ಘಾಟನೆ, ಚಿತ್ರಕಲಾ ಪ್ರದರ್ಶನ, ವಾಣಿಜ್ಯ ಮಳಿಗೆಗಳ ಉದ್ಘಾಟನೆ, ವೇದಿಕೆ ಹಾಗೂ ಮುಖ್ಯದ್ವಾರಗಳ ಉದ್ಘಾಟನೆ ನೆರವೇರಲಿದೆ.

ಈ ಬಾರಿ ಸಮ್ಮೇಳನಕ್ಕೆ ಎರಡು ಸಮನಾಂತರ ವೇದಿಕೆಗಳಲ್ಲಿ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಡಾ. ಶಂ.ಬಾ. ಜೋಶಿ ವೇದಿಕೆ, ಡಾ. ಎಸ್‌.ಎಸ್.ಭೂಸನೂರಮಠ ಮಹಾಮಂಟಪ, ರೆವರೆಂಡ್‌ ಎಫ್.ಕಿಟೆಲ್ ದ್ವಾರ ಒಂದೆಡೆ, ಮತ್ತೊಂದೆಡೆ 39ನೇ ಸಮ್ಮೇಳನದ ತಂದಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಅಂದಿನ ಕುಲಪತಿ ಡಾ. ಡಿ.ಸಿ.ಪಾವಟೆ ವೇದಿಕೆ, ಡಾ. ಸರೋಜಿನಿ ಮಹಿಷಿ ಮಹಾಮಂಟಪ, ಡಾ. ಗಿರಡ್ಡಿ ಗೋವಿಂದರಾಜ ದ್ವಾರ ಕನ್ನಡದ ಚರ್ಚೆಗೆ ವೇದಿಕೆಯಾಗಲಿವೆ.

ಮುಖ್ಯವೇದಿಕೆ ಮತ್ತು ಎರಡು ಸಮಾನಾಂತರ ವೇದಿಕೆ ಸೇರಿದಂತೆ ಈ ಬಾರಿ 24 ಗೋಷ್ಠಿಗಳು ಜರುಗಲಿವೆ. ಈ ಸಂಖ್ಯೆ, ಈವರೆಗೂ ನಡೆದಿರುವ ಸಮ್ಮೇಳನಗಳಿಗೆ ಹೋಲಿಸಿದಲ್ಲಿ ಅಧಿಕ. ರಾಜ್ಯದ ವಿವಿಧ ಭಾಗಗಳ ಸಾಹಿತಿಗಳು, ಕವಿಗಳು, ಚಿಂತಕರು ಮತ್ತು ವಿಮರ್ಶಕರು ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ.

ನಗರದಲ್ಲಿ ರಂಗಾಯಣ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘಗಳಲ್ಲಿ ಸಂಜೆಯ ಕಾರ್ಯಕ್ರಮ ಆಯೋಜನೆಗೊಂಡಿವೆ. ಇದರೊಂದಿಗೆ ಸಮ್ಮೇಳನದ ನಡೆಯಲಿರುವ ಕೃಷಿ ವಿವಿ ಆವರಣದ ಮೂರು ವೇದಿಕೆಗಳಲ್ಲೂ ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಒಟ್ಟು 250 ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಒಟ್ಟಿನಲ್ಲಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ರಸದೌತಣ ಉಣಬಡಿಸಲಿದೆ.

ದಕ್ಷಿಣ, ಉತ್ತರ ಬೆಸೆಯುವ ಊಟೋಪಚಾರ

ಉತ್ತರ ಕರ್ನಾಟಕದ ರೊಟ್ಟಿ ಊಟ, ದಕ್ಷಿಣದ ಮುದ್ದೆ ಊಟದ ಜತೆಗೆ ಮಾದ್ಲಿ, ಶೇಂಗಾ ಹೋಳಿಗೆ, ಮೈಸೂರು ಪಾಕ್‌ ಅನ್ನು ಈ ಬಾರಿ ಸಮ್ಮೇಳನದಲ್ಲಿ ಸವಿಯಬಹುದಾಗಿದೆ. ನಿತ್ಯ ಮೂರು ಹೊತ್ತು ತರಹೇವಾರಿ ಖಾದ್ಯಗಳು ಲಭ್ಯ. ಈವರೆಗೂ ನಡೆದಿರುವ ಸಮ್ಮೇಳನಗಳಲ್ಲೇ ಅತಿ ದೊಡ್ಡದಾದ ಮತ್ತು ವಿಶಾಲವಾದ ಪೆಂಡಾಲ್‌ ಹಾಕಲಾಗಿದೆ. ಇವುಗಳಿಗೆ ಈ ಭಾಗದ ದಾಸೋಹ ಪರಂಪರೆ ಸಾರಿದ ಮಠಗಳ ಹೆಸರುಗಳನ್ನು ಇಡಲಾಗಿದೆ.

ದೀಪಾಲಂಕಾರ

ಸಮ್ಮೇಳನ ಪ್ರಯುಕ್ತ ನಗರದ ರಸ್ತೆಗಳು, ವೃತ್ತಗಳು ಹಾಗೂ ಪಾರಂಪರಿಕ ಕಟ್ಟಡಗಳು ವಿದ್ಯುತ್‌ ದೀಪಾಲಂಕಾರದಿಂದ ಝಗಮಗಿಸುತ್ತಿವೆ. ಸಮ್ಮೇಳನದ ಮೆರವಣಿಗೆ ಸಾಗಲಿರುವ ಹಾದಿಯುದ್ದಕ್ಕೂ ಎಲ್‌ಇಡಿ ದೀಪ ಅಳವಡಿಸಲಾಗಿದೆ. ಚುಮುಚುಮು ಚಳಿಯಲ್ಲಿ ಮೂರೂ ದಿನಗಳ ಕಾಲ ನಗರ ಬೆಳಕಿನ ಬೆಚ್ಚನೆ ಅನುಭವ ನೀಡಲಿದೆ.

‘ಕುಂಭ ಮೆರವಣಿಗೆ ಮುಗಿದ ವಿವಾದ’

ಸಮ್ಮೇಳನದಲ್ಲಿ ಮಹಿಳೆಯರಿಂದ ಕುಂಭ ಮೆರವಣಿಗೆ ನಡೆಸುವುದಕ್ಕೆ ಪ್ರಗತಿಪರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ನಡುವೆಯೂ ಸಮ್ಮೇಳನದ ಆಯೋಜನೆ ಹೊತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು, ‘ಮೆರವಣಿಗೆ ನಡೆಯುತ್ತದೆ’ ಎಂದು ಹೇಳಿದೆ. ಪುರುಷರೂ ಸೇರಿದಂತೆ ಯಾರೂ ಬೇಕಾದರೂ ಭಾಗವಹಿಸಬಹುದು ಎಂದು ಪರಿಷತ್ತು ನೀಡಿರುವ ಸಮಜಾಯಿಷಿ, ಪ್ರಗತಿಪರರಿಗೆ ತೃಪ್ತಿ ನೀಡಿಲ್ಲ.

* ಭವ್ಯವಾದ ಮೆರವಣಿಗೆ ನಡೆಯಲಿದೆ. ಎಲ್ಲಾ ಮಹಿಳೆಯರು, ತೃತೀಯ ಲಿಂಗಿಗಳೂ ಭಾಗವಹಿಸಲಿದ್ದಾರೆ. ಗೋಷ್ಠಿಗಳು ನಿಗದಿತ ಸಮಯಕ್ಕೆ ಆರಂಭವಾಗಲಿದೆ
-ಡಾ. ಮನು ಬಳಿಗಾರ, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು

ಶುಕ್ರವಾರ ಬೆಳಿಗ್ಗೆ ಮುಖ್ಯಮಂತ್ರಿ ಚಾಲನೆ

ಕೃಷಿ ವಿಶ್ವವಿದ್ಯಾಲಯದಲ್ಲಿ ಬೃಹತ್‌ ವೇದಿಕೆ

24 ಗೋಷ್ಠಿ, 250 ಸಾಂಸ್ಕೃತಿಕ ಕಾರ್ಯಕ್ರಮಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.