ಬೆಂಗಳೂರು: ಕನ್ನಡಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಭಾನುವಾರ ಸುಮನಹಳ್ಳಿಯ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಸತಿ ಸಚಿವ ವಿ.ಸೋಮಣ್ಣ ಅವರು ಅಂತಿಮ ನಮನ ಸಲ್ಲಿಸಿದರು. ಗಾಳಿಯಲ್ಲಿಮೂರು ಸುತ್ತು ಗುಂಡು ಹಾರಿಸಲಾಯಿತು. ‘ಚಿದಾನಂದ ಮೂರ್ತಿ ಅಮರವಾಗಲಿ’, ‘ಸಿರಿಗನ್ನಡಂ ಗೆಲ್ಗೆ’ ಘೋಷಣೆ ಮೊಳಗಿತು.ಬಳಿಕ ವಿದ್ಯುತ್ ಚಿತಾಗಾರದಲ್ಲಿ ಪಾರ್ಥಿವ ಶರೀರ ಪಂಚ ಭೂತಗಳಲ್ಲಿ ಲೀನವಾಯಿತು.
‘ತಂದೆಯ ಕೊನೆಯ ಆಸೆಯನ್ನು ನಾನು ಪೂರೈಸಿದ್ದೇನೆ. ಅವರ ಹುಟ್ಟೂರು ಕೋಗಲೂರಿನ ಜನರಲ್ಲಿ ಕ್ಷಮೆ ಕೇಳುತ್ತೇನೆ.ಹಂಪಿಯವರು ಬಂದು ತುಂಗಭದ್ರಾ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿ ಅಂದಿದ್ದಾರೆ. ಆದರೆ ನಾವು ಇನ್ನೂ ನಿರ್ಧಾರ ಮಾಡಿಲ್ಲ’ ಎಂದು ಪುತ್ರ ವಿನಯ ಕುಮಾರ್ ಹೇಳಿದರು.
‘ಚಿದಾನಂದ ಮೂರ್ತಿ ಅವರು ರಾಷ್ಟ್ರದ ಸಂಪತ್ತು.ಕೋಗಲೂರಿನಲ್ಲಿ ಈಗಾಗಲೇ ಒಂದು ಪೀಠ ಸ್ಥಾಪನೆಯಾಗಿದೆ. ಹಂಪಿಯಲ್ಲೂ ಇನ್ನೊಂದು ಪೀಠ ಸ್ಥಾಪಿಸಬೇಕೆಂಬ ಒತ್ತಾಯ ಇದೆ’ ಎಂದರು.
ಹಂಪಿಯ ತುಂಗಭದ್ರಾ ನದಿಯಲ್ಲಿಯೇ ಅಸ್ಥಿ ವಿಸರ್ಜನೆಗೆ ಸರ್ಕಾರ ಅನುಮತಿ ನೀಡಬೇಕು ಎಂದುಹಂಪಿ ಉಳಿಸಿ ಆಂದೋಲನ ಸಮಿತಿಯ ಸಂಚಾಲಕ ಅನಿಲ್ ಜೋಶಿ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.