ADVERTISEMENT

ಅಪಾಯದಲ್ಲಿ ಗಡಿಯಲ್ಲಿನ ಕನ್ನಡ ಶಾಲೆ!

ಒಳಗೆ ಇಲಿ, ಹೆಗ್ಗಣ, ಹೊರಗೆ ಹಾವುಗಳು

ಚಂದ್ರಕಾಂತ ಮಸಾನಿ
Published 27 ಆಗಸ್ಟ್ 2018, 2:59 IST
Last Updated 27 ಆಗಸ್ಟ್ 2018, 2:59 IST
ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಬೀದರ್‌ ತಾಲ್ಲೂಕಿನ ನೇಮತಾಬಾದ್‌ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಓದುತ್ತಿರುವ ಮಕ್ಕಳು
ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಬೀದರ್‌ ತಾಲ್ಲೂಕಿನ ನೇಮತಾಬಾದ್‌ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಓದುತ್ತಿರುವ ಮಕ್ಕಳು   

ಬೀದರ್: ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕಿನ ನೇಮತಾಬಾದ್ ಅಪ್ಪಟ ಕನ್ನಡಿಗರ ಊರು. ಭವಿಷ್ಯದ ನಾಗರಿಕರಾದ ಮಕ್ಕಳ ಮೂಲಕ ಗಡಿಯಲ್ಲಿ ಕನ್ನಡ ಉಳಿಸಬೇಕು ಎನ್ನುವ ಅಭಿಮಾನ ಗ್ರಾಮಸ್ಥರಲ್ಲಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ಮಕ್ಕಳ ಭವಿಷ್ಯಕ್ಕೆ ಅಡ್ಡಿಯಾಗಿದೆ. ಗ್ರಾಮದ ಹೊರವಲಯದಲ್ಲಿರುವ ನಮ್ಮೂರ ಕಿರಿಯ ಪ್ರಾಥಮಿಕ ಶಾಲೆ ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ.

ಶಾಲೆಯ ನಾಲ್ಕೂ ಬದಿಯ ಗೋಡೆಗಳು ಬಿರುಕು ಬಿಟ್ಟಿವೆ. ಕೊಠಡಿಯೊಳಗಿನ ಬೋರ್ಡ್‌ ಸೀಳಿಕೊಂಡಿದೆ. ಮೇಲ್ಛಾವಣಿಯೂ ಶಿಥಿಲಗೊಂಡಿದ್ದು, ಆಗಾಗ ಸಿಮೆಂಟ್‌ ಕವಚ ಕಳಚಿ ಮಕ್ಕಳ ಮೇಲೆ ಬೀಳುತ್ತಿದೆ. ನೆಲದ ಮೇಲಿನ ಫರಸಿ ಕಲ್ಲುಗಳು ಮೇಲಕ್ಕೆ ಎದ್ದಿವೆ. ‘ಇದು ವಿದ್ಯಾ ಮಂದಿರ ಕೈಮುಗಿದು ಒಳಗೆ ...’ ಎನ್ನುವ ಬರಹ ಗೋಡೆ ಮೇಲೆ ಇದೆ. ‘ಒಳಗೆ ಬಾ..’ ಎನ್ನುವ ಶಬ್ದವನ್ನು ವಿದ್ಯಾರ್ಥಿಗಳೇ ಭಯದಿಂದ ಅಳಿಸಿದ್ದಾರೆ. ಅಷ್ಟೇ ಅಲ್ಲ ಮಕ್ಕಳು ಆವರಣದಲ್ಲೇ ಕುಳಿತು ಪಾಠ ಆಲಿಸುತ್ತಿದ್ದಾರೆ.

ಶಾಲೆಯ ಎರಡು ಎಕರೆ ಜಾಗ ಒತ್ತುವರಿಯಾಗಿದೆ. ಕಟ್ಟಡದ ಸುತ್ತ ಪೊದೆ ಬೆಳೆದಿರುವ ಕಾರಣ ಕೊಠಡಿಯೊಳಗೆ ಹಾವು, ಚೇಳು, ಇಲಿ, ಹೆಗ್ಗಣಗಳ ಕಾಟ ಹೆಚ್ಚಾಗಿದೆ. ಒಳಗೆ ಕುಳಿತರೆ ಕಟ್ಟಡ ಬೀಳುವ ಆತಂಕ, ಹೊರಗೆ ಕುಳಿತರೆ ಹಾವುಗಳ ಭೀತಿ. ಒಟ್ಟಾರೆ ಭಯದ ವಾತಾವರಣದಲ್ಲೇ ಮಕ್ಕಳು ಪಾಠ ಆಲಿಸಬೇಕಾಗಿದೆ.

ADVERTISEMENT

14 ವರ್ಷಗಳ ಹಿಂದೆ ಈ ಶಾಲೆಗೆ 130 ವಿದ್ಯಾರ್ಥಿಗಳು ಬರುತ್ತಿದ್ದರು. ಪ್ರಸ್ತುತ 12 ಬಾಲಕರು ಹಾಗೂ 21 ಬಾಲಕಿಯರು ಸೇರಿ ಮಕ್ಕಳ ಸಂಖ್ಯೆ 33ಕ್ಕೆ ಇಳಿದಿದೆ. ಮೊದಲು ಒಬ್ಬರೇ ಶಿಕ್ಷಕರು ಇದ್ದರು. ಎರಡು ತಿಂಗಳ ಹಿಂದೆ ಇನ್ನೊಬ್ಬ ಶಿಕ್ಷಕಿ ಸೇವೆಗೆ ಹಾಜರಾಗಿದ್ದಾರೆ. ಸುಮಾರು 800 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಬಹುತೇಕ ಕೃಷಿ ಕುಟುಂಬಗಳೇ ಇವೆ.

‘ಸರ್ವ ಶಿಕ್ಷಣ ಅಭಿಯಾನದಲ್ಲಿ 2006–2007ರಲ್ಲಿ ₹2.30 ಲಕ್ಷ ವೆಚ್ಚದಲ್ಲಿ ಕಟ್ಟಿದ ಕೊಠಡಿ ಹಾಗೂ 2010–2011ರಲ್ಲಿ ₹3.68 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕೊಠಡಿ ಹಾಳಾಗಿವೆ. ಮುಖ್ಯ ಶಿಕ್ಷಕರು ಬಿಇಒ ಮೂಲಕ ಹಿರಿಯ ಅಧಿಕಾರಿಗಳಿಗೆ ಶಾಲೆಯ ದುಸ್ಥಿತಿಯ ಮಾಹಿತಿ ನೀಡಿದ್ದಾರೆ. ಶಿಥಿಲಾವಸ್ಥೆಯ ಕಟ್ಟಡದಲ್ಲಿ ಪಾಠ ಮಾಡುವುದು ಅಪಾ
ಯಕಾರಿಯಾಗಿದೆ. ಸಂಬಂಧಪಟ್ಟವರು ಆದಷ್ಟು ಬೇಗ ಹೊಸ ಕಟ್ಟಡ ನಿರ್ಮಾಣ ಮಾಡಲಿ ಎನ್ನುವುದು ನಮ್ಮ ಆಶಯವಾಗಿದೆ’ ಎನ್ನುತ್ತಾರೆ ಶಿಕ್ಷಕಿ ಗಿರಿಜಾ.

‘ರಾಜಕಾರಣಿಗಳು ಚುನಾವಣೆ ಇದ್ದಾಗ ಮಾತ್ರ ಊರಿಗೆ ಬರುತ್ತಾರೆ. ಆಯ್ಕೆಯಾದ ಮೇಲೆ ಇತ್ತ ಕಣ್ಣು ಹಾಯಿಸುವುದಿಲ್ಲ. ಅಧಿಕಾರಿಗಳು ಕಚೇರಿಯಿಂದ ಹೊರಗೆ ಬರುವುದಿಲ್ಲ. ಹೀಗಾಗಿ ಶಾಲೆ, ಗ್ರಾಮ ಸುಧಾರಣೆ ಕಷ್ಟವಾಗಿದೆ’ ಎಂದುಗ್ರಾಮದ ವೃದ್ಧ ಬಸಪ್ಪ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.