ಚಿತ್ರದುರ್ಗ: ಕನ್ನಡ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಕ್ಕಳು ಅತಂತ್ರರಾಗುತ್ತಿದ್ದಾರೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಸರ್ಕಾರಕ್ಕೆ ಒಲ್ಲದ ಕೂಸುಗಳಾಗಿವೆ. ಉದ್ಯೋಗ ಒದಗಿಸದ ಕನ್ನಡ ಶಾಲೆಗಳಿಗೆ ಕರ್ನಾಟಕ ಗಡಿ ಗ್ರಾಮದ ಜನರೇ ಬೀಗ ಜಡಿಯುತ್ತಿದ್ದಾರೆ!
ಕನ್ನಡ ಭಾಷೆಗೆ ಇಂತಹದೊಂದು ಕಂಟಕ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಯಲ್ಲಿ ಎದುರಾಗಿದೆ. ಆಂಧ್ರಪ್ರದೇಶಲ್ಲಿ ಅಸ್ತಿತ್ವದಲ್ಲಿರುವ ಕನ್ನಡ ಶಾಲೆಗಳು ಒಂದೊಂದಾಗಿ ಬಾಗಿಲು ಮುಚ್ಚುತ್ತಿವೆ. ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಸಮೀಪದಲ್ಲೇ ಇರುವ ಗಡಿಗ್ರಾಮ ಮಡೇನಹಳ್ಳಿಯ ಶಾಲೆ ಕೆಲ ದಿನಗಳ ಹಿಂದೆಯಷ್ಟೇ ಬಾಗಿಲು ಹಾಕಿದೆ.
ಮಡೇನಹಳ್ಳಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿದೆ. ಕರ್ನಾಟಕದ ಗಡಿಯಲ್ಲೇ ಇರುವ ಈ ಗ್ರಾಮದ ಪ್ರತಿಯೊಬ್ಬರ ಮಾತೃಭಾಷೆ ಕನ್ನಡ. ಗಡಿ ವಿಂಗಡಣೆಯಲ್ಲಿ ಆಂಧ್ರಪ್ರದೇಶಕ್ಕೆ ಸೇರಿದರೂ ಇಲ್ಲಿಯ ಜನರ ಜೀವನಾಡಿಯಲ್ಲಿ ಕನ್ನಡ ಹರಿದಾಡುತ್ತಿದೆ. ರಕ್ತ ಸಂಬಂಧ, ಒಡನಾಟ, ಸಂಸ್ಕೃತಿ ಕನ್ನಡದೊಂದಿಗೆ ಬೆರೆತಿದೆ. ಕರ್ನಾಟಕದ ಕೊಂಡಿಯನ್ನು ಕಳಚಿಕೊಳ್ಳಲು ಇಷ್ಟಪಡದ ಗ್ರಾಮಸ್ಥರು ಕನ್ನಡ ಶಾಲೆಯನ್ನು ಅಸ್ಥೆಯಿಂದ ಕಾಪಾಡಿಕೊಂಡು ಬಂದಿದ್ದರು. ಆದರೆ, ಅದೇ ಶಾಲೆ ಬದುಕಿಗೆ ಆಶ್ರಯ ಕಲ್ಪಿಸದೇ ಇರುವುದು ಗಡಿನಾಡ ಕನ್ನಡಿಗರನ್ನು ಹತಾಷೆಗೆ ದೂಡಿದೆ.
ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ 19 ಕನ್ನಡ ಶಾಲೆಗಳಿವೆ. ಸಾವಿರಕ್ಕೂ ಅಧಿಕ ಮಕ್ಕಳು ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ. ಇವುಗಳಲ್ಲಿ ಕೆಲ ಶಾಲೆಗಳಿಗೆ ಶತಮಾನವೂ ತುಂಬಿದೆ. ‘ಕನ್ನಡ ಶಾಲೆ’ ಎಂಬ ನಿರ್ಲಕ್ಷ್ಯ ಆಂಧ್ರಪ್ರದೇಶ ಸರ್ಕಾರ ತೋರುವ ಧೋರಣೆಯಲ್ಲಿ ವ್ಯಕ್ತವಾಗುತ್ತದೆ. ಅನುದಾನ, ಮೂಲ ಸೌಲಭ್ಯ ಅಷ್ಟಕ್ಕಷ್ಟೇ. ಹೆಚ್ಚಿನ ನೆರವು ಕೇಳಿದರೆ ತೆಲುಗು ಮಾಧ್ಯಮಕ್ಕೆ ಪರಿವರ್ತನೆ ಹೊಂದುವ ಸಲಹೆಯನ್ನು ಅಧಿಕಾರಿಗಳು ಉಚಿತವಾಗಿ ನೀಡುತ್ತಾರೆ.
ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದರೆ ಆಂಧ್ರಪ್ರದೇಶ ಸರ್ಕಾರ ಪರಿಗಣಿಸುವುದಿಲ್ಲ. ‘ಆಂಧ್ರ’ದವರು ಎಂಬ ಕಾರಣಕ್ಕೆ ಕರ್ನಾಟಕದಲ್ಲಿ ಉದ್ಯೋಗ ಹಿಡಿಯಲು ಅವಕಾಶವೇ ಇಲ್ಲ. ಎಂಜಿನಿಯರಿಂಗ್, ವೈದ್ಯಕೀಯ ಸೀಟುಗಳಲ್ಲಿಯೂ ಪ್ರಾತಿನಿದ್ಯ ಸಿಗುತ್ತಿಲ್ಲ. ಇದು ಕನ್ನಡ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿದವರನ್ನು ಅತಂತ್ರ ಸ್ಥಿತಿಗೆ ತಳ್ಳಿದೆ.
‘ಕನ್ನಡ ಉದ್ಯೋಗ ನೀಡುವ ಭಾಷೆ ಆಗಿ ಉಳಿದಿಲ್ಲ. ಕನ್ನಡ ಶಾಲೆಯಲ್ಲಿ ಶಿಕ್ಷಣ ಪಡೆದ ಮಕ್ಕಳು ಪ್ರತಿಭಾವಂತರಾಗಿದ್ದರೂ ಕೆಲಸ ಸಿಗುತ್ತಿಲ್ಲ. ಆಂಧ್ರಪ್ರದೇಶ ಹಾಗೂ ಕರ್ನಾಟಕ ಸರ್ಕಾರದ ಮಲತಾಯಿ ಧೋರಣೆಯಿಂದ ಈ ತಾಂತ್ರಿಕ ತೊಡಕು ಎದುರಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರೂ ಪ್ರಯೋಜವಾಗಿಲ್ಲ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅನಂತಪುರ ಜಿಲ್ಲಾ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಗಿರಿಜಾಪತಿ.
ಪಠ್ಯಕ್ಕೆ 25 ವರ್ಷ ಹೋರಾಟ
ಕನ್ನಡ ಶಾಲೆಯ ಮಕ್ಕಳಿಗೆ ಆಂಧ್ರಪ್ರದೇಶ ಸರ್ಕಾರ ಪಠ್ಯ ಪುಸ್ತಕ ಪೂರೈಕೆ ಮಾಡುತ್ತದೆ. ತೆಲುಗು ಭಾಷೆಯ ಪಠ್ಯವನ್ನೇ ಕನ್ನಡಕ್ಕೆ ಭಾಷಾಂತರಿಸಿ ನೀಡಲಾಗುತ್ತದೆ. ಭಾಷಾಂತರ ಮಾಡಿದ ಪಠ್ಯ ಪುಸ್ತಕದಲ್ಲಿ ಕನ್ನಡದ ಅಸ್ಮಿತೆ ಇರುವುದಿಲ್ಲ. ಆಂಧ್ರಪ್ರದೇಶದ ಕವಿ, ಲೇಖಕರು, ಸಂಸ್ಕೃತಿ, ಹಬ್ಬಗಳ ಮಾಹಿತಿಯನ್ನು ಈ ಪಠ್ಯ ಒಳಗೊಂಡಿದೆ. ಹೀಗಾಗಿ, ಕನ್ನಡ ಭಾಷಾ ಪುಸ್ತಕವನ್ನು ಕರ್ನಾಟಕ ಸರ್ಕಾರವೇ ಪೂರೈಕೆ ಮಾಡಬೇಕು ಎಂದು ಆಂಧ್ರಪ್ರದೇಶದ ಕನ್ನಡ ಶಾಲೆಯ ಶಿಕ್ಷಕರು 25 ವರ್ಷ ಹೋರಾಟ ನಡೆಸಿದ್ದಾರೆ. 2015ರಿಂದ ಈಚೆಗೆ ಕನ್ನಡ ಭಾಷಾ ಪಠ್ಯವನ್ನು ಕರ್ನಾಟಕ ಸರ್ಕಾರ ಒದಗಿಸುತ್ತಿದೆ.
‘ಪಠ್ಯ ಪುಸ್ತಕ ಕರ್ನಾಟಕದೊಂದಿಗೆ ಉಳಿದಿಕೊಂಡ ಕೊಂಡಿ. ಇದನ್ನು ಕಳಚಿದರೆ ಕನ್ನಡ ಶಾಲೆಯ ಮಕ್ಕಳು ಇನ್ನಷ್ಟು ಅತಂತ್ರರಾಗಬಹುದು ಎಂಬ ಆತಂಕವಿದೆ. ಹೊರರಾಜ್ಯದಲ್ಲಿ ನೆಲೆಸಿದ್ದರೂ ಕನ್ನಡ ಸಂಬಂಧವನ್ನು ಕಡಿದುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಕನ್ನಡ ಶಾಲೆಯಲ್ಲಿ ಓದಿದ ಮಕ್ಕಳಿಗೆ ಕರ್ನಾಟಕದಲ್ಲಿಯೂ ಉದ್ಯೋಗ ಸಿಗಬೇಕು. ಆಗ ಕನ್ನಡ ಶಾಲೆಗಳೂ ಉಳಿಯುತ್ತವೆ’ ಎಂಬುದು ಗಿರಿಜಾಪತಿ ಅವರ ಮನವಿ.
ಸಹೋದರ ಸಂಬಂಧ
ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಯಲ್ಲಿ ಕನ್ನಡ – ತೆಲಗು ಭಾಷೆಯ ನಡುವೆ ಸಹೋದರ ಸಂಬಂಧವಿದೆ. ಭಾಷಾ ವಿಚಾರಕ್ಕೆ ಇಲ್ಲಿ ಕಲಹ ಉಂಟಾಗಿರುವ ನಿದರ್ಶನಗಳು ಕಾಣುವುದಿಲ್ಲ. ಎರಡೂ ರಾಜ್ಯದಲ್ಲಿ ಹರಡಿಕೊಂಡ ಸಂಸ್ಕೃತಿಯೂ ಇದಕ್ಕೆ ಕಾರಣವಿರಬಹುದು ಎಂಬುದು ಗಡಿನಾಡ ಕನ್ನಡಿಗರ ವಿಶ್ಲೇಷಣೆ.
ವಾಲ್ಮೀಕಿ ನಾಯಕ ಸೇರಿ ಇತರ ಸಮುದಾಯ ರಾಜ್ಯದ ಗಡಿಯಲ್ಲಿ ನೆಲೆ ಕಂಡುಕೊಂಡಿವೆ. ಕರ್ನಾಟಕದಲ್ಲಿರುವ ನಾಯಕ ಸಮುದಾಯದ ಮಾತೃ ಭಾಷೆ ತೆಲುಗು. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬಹುತೇಕ ಗ್ರಾಮಗಳ ಜನರ ಮಾತೃಭಾಷೆ ಕನ್ನಡ. ಹೀಗಾಗಿ, ಕನ್ನಡ ಮತ್ತು ತೆಲುಗು ಭಾಷೆಯನ್ನು ಬಹುತೇಕ ಎಲ್ಲರೂ ಮಾತನಾಡುತ್ತಾರೆ. ಹೀಗಾಗಿ, ಭಾಷೆಯ ವಿಚಾರಕ್ಕೆ ಇಲ್ಲಿ ವೈಮನಸುಗಳು ಉಂಟಾಗಿದ್ದು ವಿರಳ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.