ADVERTISEMENT

ಆ ದಿನಗಳು ಈಗ ನೆನಪು...

ಒಳನೋಟ *ವಿವಿಗಳಲ್ಲಿ ಕನ್ನಡ ಅಧ್ಯಯನ ಕೇಂದ್ರದ ದುಸ್ಥಿತಿ

ರಾಜೇಶ್ ರೈ ಚಟ್ಲ
Published 30 ನವೆಂಬರ್ 2019, 20:24 IST
Last Updated 30 ನವೆಂಬರ್ 2019, 20:24 IST
   

ಬೆಂಗಳೂರು: ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯ ಶ್ರೀಮಂತಗೊಂಡು, ಅಂತರರಾಷ್ಟೀಯ ಮಟ್ಟದಲ್ಲಿ ಮಿನುಗುವ ಹಾದಿಯಲ್ಲಿ, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ 'ಕನ್ನಡ ಅಧ್ಯಯನ ಕೇಂದ್ರ'ದ ಎರಡು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿವರ್ಹಿಸಿದ್ದು ಈಗ ನೆನಪು ಮಾತ್ರ.

ಮೈಸೂರು ವಿಶ್ವವಿದ್ಯಾಲಯದ ಭಾಗವಾಗಿ 1960-61ರಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡ ಎಂ.ಎ ಕೋರ್ಸ್ ಆರಂಭವಾಯಿತು. ಜಿ.ಪಿ. ರಾಜರತ್ನಂ, ಎ.ಎನ್. ಕೃಷ್ಣರಾವ್, ರಂ.ಶ್ರೀ. ಮುಗಳಿ, ಜಿ.ಎಸ್. ಶಿವರುದ್ರಪ್ಪ ಅವರಂಥವರು ಇಲ್ಲಿ ಪಾಠ- ಪ್ರವಚನ ಮಾಡಿದ್ದರು. 1964ರ ಜುಲೈನಲ್ಲಿ ಈ ವಿಭಾಗ ಬೆಂಗಳೂರು ವಿ.ವಿಯ ಭಾಗವಾಗಿ, 'ಕನ್ನಡ ಅಧ್ಯಯನ ಕೇಂದ್ರ' ಆಗಿ ಸ್ವತಂತ್ರವಾಯಿತು. 1967ರಿಂದ 1969ರವರೆಗೆ ರಂ. ಶ್ರೀ. ಮಗಳಿ ಅವರು ಕೇಂದ್ರದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ಅಧ್ಯಾಪಕರಾಗಿ ಸೇರಿದ ಜಿ.ಎಸ್. ಶಿವರುದ್ರಪ್ಪನವರು 1970ರಲ್ಲಿ ನಿರ್ದೇಶಕರಾದ ಬಳಿಕ, ಸ್ವತಂತ್ರ ದಾರಿಯಲ್ಲಿ ಹೆಜ್ಜೆ ಇಟ್ಟರು. ಇತರೆ ವಿಶ್ವವಿದ್ಯಾಲಯಗಳು ಬೆಂಗಳೂರು ವಿ.ವಿ ಯನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದರು. ಕಾವ್ಯದ ಜತೆಯಲ್ಲಿಯೇ ವಿಮರ್ಶೆ, ಮೀಮಾಂಸೆ ಕ್ಷೇತ್ರದಲ್ಲಿ ಕೈಯಾಡಿಸುವ ಮೂಲಕ ಹೊಸ ಮಾದರಿ ಒದಗಿಸಿದರು.

ಕನ್ನಡ ಸಾಹಿತ್ಯ ಮತ್ತು ತೌಲುನಿಕ ಸಾಹಿತ್ಯ ಅಧ್ಯಯನ ಎಂಬ ಎರಡು ಎಂಎ ಕೋರ್ಸುಗಳು ನಡೆಯುತ್ತಿದ್ದವು. ಹದಿನೈದಕ್ಕೂ ಹೆಚ್ಚು ಶ್ರೇಷ್ಟ ಅಧ್ಯಾಪಕರುಗಳು ಇದ್ದು ಸುವರ್ಣಯುಗವನ್ನೂ ಕಂಡಿತ್ತು. ಜಗತ್ತಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿದ್ಯಮಾನಗಳಿಗೆ ಕೇಂದ್ರವು ಸೇತುವೆಯಾಗಿ ಕಾರ್ಯ ನಿರ್ವಹಿಸಿದ್ದು ಈಗ ಇತಿಹಾಸ. ಪ್ರತಿವರ್ಷ ನಡೆಯುತ್ತಿದ್ದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವು ಶ್ರೇಷ್ಟತೆ ಮತ್ತು ಅರ್ಥಪೂರ್ಣತೆಗೆ ಮಾದರಿಯಾಗಿತ್ತು. ನಂತರದ ದಿನಗಳಲ್ಲಿ ಸಾಹಿತ್ಯ ಲೋಕದ ದಿಗ್ಗಜರು ಅನ್ನಿಸಿಕೊಂಡ ಕೆಲವರ ಸಣ್ಣತನಗಳಿಂದ ಕೇಂದ್ರವು ಶ್ರೇಷ್ಟತೆಯನ್ನು ಕಳೆದುಕೊಂಡಿತಲ್ಲದೆ, ಗುಂಪುಗಾರಿಕೆ ಮತ್ತು ಜಾತಿ ರಾಜಕಾರಣಗಳಿಂದ ಬೌದ್ಧಿಕ ದಿವಾಳಿತಕ್ಕೆ ಗುರಿಯಾಯಿತು. 50 ರಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ನೂರು ಚಿಲ್ಲರೆ ಆಗಿದ್ದರೂ ಖಾಲಿಯಿರುವ ರೀಡರ್ಸ್, ಪ್ರೊಫೆಸರ್ ಹುದ್ದೆಗಳನ್ನು ಭರ್ತಿ ಮಾಡದೆ ಖಾಲಿ ಇಟ್ಟಿರುವುದೇ ಹೆಗ್ಗಳಿಕೆ ಎಂಬ ಆರೋಪಗಳಿಗೂ ಕೇಂದ್ರ ಗುರಿಯಾಗಿದೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.