ರಾಯಚೂರು: ‘ಶ್ರೀಶೈಲದಲ್ಲಿ ಕರ್ನಾಟಕದ ಎಲ್ಲ ಭಕ್ತರು ಸುರಕ್ಷಿತವಾಗಿದ್ದಾರೆ. ಯಾರಿಗೂ ಜೀವಭಯವಾಗಲಿ, ತೊಂದರೆಯಾಗಲಿ ಇಲ್ಲ. ಪರಿಸ್ಥಿತಿ ಹತೋಟಿಯಲ್ಲಿದ್ದು, ಎಲ್ಲವೂ ಸುಲಲಿತವಾಗಿ ನಡೆಯುತ್ತಿವೆ‘ ಎಂದು ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ಧರಾಮ ಶಿವಾಚಾರ್ಯರು ತಿಳಿಸಿದ್ದಾರೆ.
ಗುರುವಾರ ಸಂಜೆ ವಿಡಿಯೊ ಸಂದೇಶ ನೀಡಿರುವ ಅವರು, ‘ಬುಧವಾರ ರಾತ್ರಿ ಅಂಗಡಿಯೊಂದರಲ್ಲಿ ಇಬ್ಬರ ಮಧ್ಯೆ ಜಗಳ ನಡೆದಿದೆ. ಕರ್ನಾಟಕದ ಭಕ್ತನ ಮೇಲೆ ಹಲ್ಲೆಯಾಗಿದೆ. ಆದರೆ, ಕರ್ನಾಟಕದ ಭಕ್ತ ಮೃತಪಟ್ಟಿದ್ದಾನೆ ಎಂದು
ಸುದ್ದಿ ಹರಡಿದ್ದರಿಂದ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.
ಪರಿಸ್ಥಿತಿ ಕೈಮೀರುವ ಹಂತದಲ್ಲಿ ಮಧ್ಯಪ್ರವೇಶಿಸಿ ಎಲ್ಲರಿಗೂ ಶಾಂತಿಯಿಂದ ಇರಲು ಹೇಳಲಾಗಿದೆ’ಎಂದಿದ್ದಾರೆ.
‘ಶ್ರೀಶೈಲದಲ್ಲಿ ಕರ್ನಾಟಕದ ಭಕ್ತರು ಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವುದು ವಸ್ತುಸ್ಥಿತಿಯಲ್ಲ. ಹಲ್ಲೆಗೊಳಗಾದ ವ್ಯಕ್ತಿಯ ತಲೆಗೆ ಪೆಟ್ಟಾಗಿದ್ದರಿಂದ ಮೊದಲು ಸುನ್ನಿಪೇಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕರ್ನೂಲ್ ಆಸ್ಪತ್ರೆಗೆ ಗುರುವಾರ ಕಳುಹಿಸಲಾಗಿದೆ’ ಎಂದಿದ್ದಾರೆ.
ಹಲವು ಭಕ್ತರು ವಾಪಸ್: ‘ಶ್ರೀಶೈಲಕ್ಕೆ ಬರುವ ಭಕ್ತರು ಯುಗಾದಿ ದಿನ ನಡೆಯುವ ರಥೋತ್ಸವದ ವರೆಗೂ ಇರುವುದು ವಾಡಿಕೆ. ಹಲ್ಲೆಯಲ್ಲಿ ಯುವಕ ಮೃತಪಟ್ಟಿದ್ದಾನೆ ಎನ್ನುವ ಸುದ್ದಿ ಹರಡಿತ್ತು ಹಾಗೂ ವಾಹನಗಳಿಗೆ ಹಾನಿ ಮಾಡಿರುವುದನ್ನು ನೋಡಿದ ಹಲವು ಭಕ್ತರು ಆತಂಕದಿಂದ ರಾತ್ರೋ ರಾತ್ರಿ ತಮ್ಮ ಊರುಗಳಿಗೆ ಮರಳಿದ್ದಾರೆ’ ಎಂದು ರಾಯಚೂರು ಜಿಲ್ಲೆಸಿರವಾರದ ಭಕ್ತ ಬಸವರಾಜಗೌಡ ‘ಪ್ರಜಾವಾಣಿ‘ಗೆ ತಿಳಿಸಿದರು.
‘ಶ್ರೀಶೈಲದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಗುರುವಾರ ಸಂಜೆ ಹೊತ್ತಿಗೆ ಅಂಗಡಿಗಳು ತೆರೆದು ವಹಿವಾಟು
ನಡೆಸಲಾಗುತ್ತಿದೆ. ಭಕ್ತರು ದರ್ಶನ ಪಡೆದುಕೊಳ್ಳುವುದಕ್ಕೆ ಯಾವುದೇ ತೊಂದರೆ ಇಲ್ಲ ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.