ಬೆಂಗಳೂರು: ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿ ಧಾಮದ 10 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ ಒಟ್ಟು 28 ಪ್ರಸ್ತಾವಗಳು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಮುಂದೆ ಸಲ್ಲಿಕೆಯಾಗಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯುವ ಮಂಡಳಿ ಸಭೆಯಲ್ಲಿ ಕಪ್ಪತಗುಡ್ಡದ ಭವಿಷ್ಯ ತೀರ್ಮಾನವಾಗಲಿದೆ.
ಕಪ್ಪತಗುಡ್ಡದ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಕಲ್ಲು–ಮರಳು ಸೇರಿ ಯಾವುದೇ ರೀತಿಯ ಗಣಿಗಾರಿಕೆ ನಡೆಸುವಂತಿಲ್ಲ ಎಂದು ನಿಷೇಧ ವಿಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿತ್ತು. ಪ್ರಭಾವಿ ಸಚಿವರ ಮಕ್ಕಳು ಮತ್ತು ರಾಜಕೀಯ ವ್ಯಕ್ತಿಗಳ ಜತೆ ನಂಟು ಹೊಂದಿರುವವರು ಮಂಡಳಿಯ ಸದಸ್ಯರಾಗಿದ್ದಾರೆ. ಇಂತಹವರಿಂದ ಪರಿಸರ ಸೂಕ್ಷ್ಮ ವಿಷಯಗಳಲ್ಲಿ ನ್ಯಾಯ ಸಿಗಲು ಸಾಧ್ಯವೇ ಎಂಬುದು ಪರಿಸರ ಪ್ರೇಮಿಗಳ ಪ್ರಶ್ನೆ.
ಕಪ್ಪತಗುಡ್ಡ ಹಾಗೂ ಕಾವೇರಿ ವಿಸ್ತರಿತ ವನ್ಯಜೀವಿಧಾಮಗಳನ್ನು ಪರಿಸರ ಸೂಕ್ಷ್ಮ ವಲಯಗಳೆಂದು ಅಂತಿಮ ಅಧಿಸೂಚನೆ ಹೊರಡಿಸಬೇಕಾಗಿದೆ. ಅಲ್ಲದೇ, ಸುಪ್ರೀಂ ಕೋರ್ಟ್ ಆದೇಶದಂತೆ, 10 ಕಿ.ಮೀ ಪರಿಭಾವಿತ ಪರಿಸರ ಸೂಕ್ಷ್ಮ ವಲಯದಲ್ಲೇ ಬಹುತೇಕ ಗಣಿಗಾರಿಕೆ ಪ್ರಸ್ತಾವಗಳಿವೆ. ಹೀಗಾಗಿ ಅಂತಿಮ ಅಧಿಸೂಚನೆವರೆಗೆ ಗಣಿಗಾರಿಕೆ ಪ್ರಸ್ತಾವನೆಗಳನ್ನು ಮಂಡಳಿ ಮುಂದೂಡುವುದು ಒಳಿತು ಎಂದು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಗಿರಿಧರ ಕುಲಕರ್ಣಿ ಅಭಿಪ್ರಾಯಪಡುತ್ತಾರೆ.
1,500 ಮೆ.ವಾ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ‘ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆ’. ಇದು ಮೂಕಾಂಬಿಕಾ ಮತ್ತು ಸೋಮೇಶ್ವರ ವನ್ಯಜೀವಿಧಾಮಗಳ ವ್ಯಾಪ್ತಿಯಲ್ಲಿ ಸ್ಥಾಪನೆಯಾಗಲಿದೆ. ಸುಮಾರು 82 ಹೆಕ್ಟೆರ್ ಅರಣ್ಯ ಪ್ರದೇಶ ಮುಳುಗಡೆ ಆಗಲಿದೆ
ಭದ್ರಾವತಿ ವಿಭಾಗದ ಚೊರ್ಡೇನಹಳ್ಳಿ ಮತ್ತು ಕೈತೊಟ್ಲು ಪ್ರದೇಶಗಳನ್ನು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಪ್ರದೇಶಕ್ಕೆ ಸೇರ್ಪಡೆಗೊಳಿಸುವ ಪ್ರಸ್ತಾವ
ಚಿತ್ರದುರ್ಗ ಜಿಲ್ಲೆಯ ಅರಣ್ಯ ಭೂಮಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎರ್ನಿಕಾನ್ ಪವನ ವಿದ್ಯುತ್ ಕಂಪನಿಗೆ ನೀಡಿರುವ ಅನುಮತಿಯನ್ನು ನವೀಕರಿಸುವ ಪ್ರಸ್ತಾವ. ಕೆಆರ್‌ಇಡಿಎಲ್‌ನಿಂದ ಉಪಗುತ್ತಿಗೆ ಪಡೆದು ಎರ್ನಿಕಾನ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ
ಕಾವೇರಿ ವಿಸ್ತರಿಸಿದ ವನ್ಯಜೀವಿ ಧಾಮದ 10 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ ಪ್ರಸ್ತಾವ
ಬೆಂಗಳೂರು ಅರಣ್ಯ ವೃತ್ತದ ರಾಮನಗರ ವಿಭಾಗದಲ್ಲಿರುವ ಹಂದಿಗುಂದಿ ಮೀಸಲು ಅರಣ್ಯ ಪ್ರದೇಶದ 4,167.94 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಕರಡಿಧಾಮವೆಂದು ಘೋಷಿಸುವ ಪ್ರಸ್ತಾವ
ಭದ್ರಾವತಿ ವಿಭಾಗದ ಕುಕ್ವಾಡ ಉಬ್ರಾಣಿ ರಾಜ್ಯ ಅರಣ್ಯ ಪ್ರದೇಶ ಮತ್ತು ಸುತ್ತಲಿನ ಮೀಸಲು ಅರಣ್ಯ ಪ್ರದೇಶಗಳ ಒಟ್ಟು 305.86 ಚ.ಕಿ.ಮೀ ಪ್ರದೇಶವನ್ನು ‘ಕುಕ್ವಾಡ ಉಬ್ರಾಣಿ ವನ್ಯಜೀವಿಧಾಮ’ ಎಂದು ಘೋಷಿಸುವ ಪ್ರಸ್ತಾವ
ಬೆಂಗಳೂರಿನ ಹೆಸರಘಟ್ಟ ಪ್ರದೇಶವನ್ನು ‘ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ’ವಾಗಿ ಘೋಷಿಸುವ ಕುರಿತ ಪ್ರಸ್ತಾವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.