ಬೆಂಗಳೂರು: ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿ ಧಾಮದ 10 ಕಿ.ಮೀ ವ್ಯಾಪ್ತಿಯಲ್ಲಿ 28 ಗಣಿಗಾರಿಕೆಗಳಿಗೆ ಅನುಮತಿಗೆ ಕೋರಿ ಸಲ್ಲಿಕೆಯಾಗಿದ್ದ ಪ್ರಸ್ತಾವಗಳ ವಿಷಯವನ್ನು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸಭೆ ಚರ್ಚೆಗೆ ಕೈಗೆತ್ತಿಕೊಳ್ಳದೇ ಮುಂದೂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಮಂಡಳಿ ಸಭೆ ನಡೆಯಿತು. ವಿವಾದಕ್ಕೆ ಒಳಗಾಗಬಹುದಾಗಿದ್ದ ಬಹುತೇಕ ಪ್ರಸ್ತಾವಗಳನ್ನು ಮುಂದೂಡಲಾಗಿದೆ.
ಅಲ್ಲದೇ, ಕಾವೇರಿ ವಿಸ್ತರಿತ ವನ್ಯಜೀವಿಧಾಮದ 10 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಕೋರಿ ಸಲ್ಲಿಕೆಯಾಗಿದ್ದ ಪ್ರಸ್ತಾವದ ವಿಷಯವನ್ನೂ ಮುಂದೂಡಲಾಯಿತು ಎಂದು ಮೂಲಗಳು ತಿಳಿಸಿವೆ.
ಚಿತ್ರದುರ್ಗ ಜಿಲ್ಲೆಯ ಅರಣ್ಯ ಭೂಮಿಯಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಎರ್ನಿಕಾನ್ ಪವನ ವಿದ್ಯುತ್ ಕಂಪನಿಗೆ ನೀಡಿರುವ ಅನುಮತಿಯನ್ನು ನವೀಕರಿಸುವ ಪ್ರಸ್ತಾವದ ವಿಷಯವನ್ನೂ ಮುಂದೂಡಲಾಗಿದೆ.
1,500 ಮೆ.ವಾ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ‘ವರಾಹಿ ಪಂಪ್ಡ್ ಸ್ಟೋರೇಜ್ ಯೋಜನೆ’ಯ ಪ್ರಸ್ತಾವದ ವಿಷಯವನ್ನೂ ಮುಂದೂಡಲಾಗಿದೆ.
ಭದ್ರಾವತಿ ವಿಭಾಗದ ಚೊರ್ಡೇನಹಳ್ಳಿ ಮತ್ತು ಕೈತೊಟ್ಲು ಪ್ರದೇಶಗಳನ್ನು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಪ್ರದೇಶಕ್ಕೆ ಸೇರ್ಪಡೆಗೊಳಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ.
‘ಶಿವಮೊಗ್ಗ ಜಿಲ್ಲೆ ಶೆಟ್ಟಿಹಳ್ಳಿ ಅಭಯಾರಣ್ಯದ ಗಡಿಯ ಪರಿಷ್ಕೃತ ಪ್ರಸ್ತಾವನೆ ಪರಿಶೀಲಿಸಿ ಒಟ್ಟು 395.64 ಚದರ ಕಿ.ಮೀ.ಗೆ ನಿಗದಿ ಪಡಿಸಲಾಗಿದ್ದು, ಇದಕ್ಕೆ ಮಂಡಳಿ ತನ್ನ ಅಂಗೀಕಾರ ನೀಡಿದ್ದು, ಕೇಂದ್ರೀಯ ವನ್ಯಜೀವಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದರಿಂದ ಶಿವಮೊಗ್ಗ ಜನತೆಗೆ ಎದುರಾಗಿದ್ದ ಅರಣ್ಯ ಗಡಿ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ’ ಎಂದು ಸಭೆಯ ಬಳಿಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.