ADVERTISEMENT

ಕಪ್ಪತಗುಡ್ಡ ಡಿನೋಟಿಫೈಗೆ ತಾತ್ಕಾಲಿಕ ತಡೆ

ವನ್ಯಜೀವಿ ಮಂಡಳಿ ಸಭೆಯಲ್ಲಿ ಗೃಹ ಸಚಿವ ಬೊಮ್ಮಾಯಿ: ಚರ್ಚೆಗೆ ಗ್ರಾಸ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 20:08 IST
Last Updated 26 ಸೆಪ್ಟೆಂಬರ್ 2019, 20:08 IST
ವನ್ಯಜೀವಿ ಮಂಡಳಿ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಹಿರಿಯ ಅಧಿಕಾರಿಗಳು.
ವನ್ಯಜೀವಿ ಮಂಡಳಿ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಹಿರಿಯ ಅಧಿಕಾರಿಗಳು.   

ಬೆಂಗಳೂರು: ಚಿನ್ನದ ನಿಕ್ಷೇಪದ ಮೇಲೆ ಕಣ್ಣಿಟ್ಟ ಗಣಿ ಕಂಪನಿಗಳಿಗೆ ಅನುಕೂಲ ಮಾಡಲು ಗದಗ ಜಿಲ್ಲೆ ಕಪ್ಪತಗುಡ್ಡ ವನ್ಯಜೀವಿ ಧಾಮವನ್ನು ಡಿನೋಟಿಫೈ ಪ್ರಯತ್ನಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಾತ್ಕಾಲಿಕವಾಗಿ ತಡೆ ನೀಡಿದ್ದಾರೆ.

ಗುರುವಾರ ನಡೆದ ವನ್ಯಜೀವಿ ಮಂಡಳಿಯ ಸಭೆಯ ಅಧಿಕೃತ ಕಾರ್ಯಸೂಚಿಯಲ್ಲಿ ಕಪ್ಪತಗುಡ್ಡದ ವಿಷಯ ಇರಲಿಲ್ಲ. ಹೆಚ್ಚುವರಿ ಪಟ್ಟಿಯಲ್ಲಿ ಇದು ಇತ್ತು. ಸಭೆಯಲ್ಲಿ, ಈ ವಿಷಯವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ ಪ್ರಸ್ತಾಪಿಸಿದರು. ಆದರೆ, ವಿರೋಧ ಎದ್ದಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಈ ಕಡತ ಮುಟ್ಟುವುದು ಬೇಡ ಎಂದು ಯಡಿಯೂರಪ್ಪ ಸೂಚಿಸಿದರು ಎಂದು ಮೂಲಗಳು ಹೇಳಿವೆ.

ವನ್ಯಜೀವಿ ಮಂಡಳಿ ಸಭೆಗೆ ಆಹ್ವಾನಿತರಲ್ಲದೆ, ಬೇರೆ ಯಾರೂ ಭಾಗವಹಿಸುವಂತಿಲ್ಲ. ಆದರೆ, ಇಂದಿನ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು.

ADVERTISEMENT

‘ಸಭೆಗೆ ಆಹ್ವಾನಿತರಲ್ಲದ ಬೊಮ್ಮಾಯಿ ಅವರು ಸಭೆಯಲ್ಲಿ ಕಪ್ಪತಗುಡ್ಡ ವಿಷಯ ಪ್ರಸ್ತಾಪಿಸಿದರು. ಆಗ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿಯವರ ಹೆಚ್ಚುವರಿ ಕಾರ್ಯದರ್ಶಿ ಪಿ.ರವಿಕುಮಾರ್‌ ಅವರು, ಡಿನೋಟಿಫೈಗೆ ಆಕ್ಷೇಪ ವ್ಯಕ್ತಪಡಿಸಿ ಶಾಸಕ ಎಚ್‌.ಕೆ.ಪಾಟೀಲ ಈ ಸಂಬಂಧ ಬರೆದಿರುವ ಪತ್ರವನ್ನು ಮುಖ್ಯಮಂತ್ರಿ ಗಮನಕ್ಕೆ ತಂದರು’ ಎಂದು ಮೂಲಗಳು ತಿಳಿಸಿವೆ.

‘ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು ಉಪ ಚುನಾವಣೆ ಮುಗಿಯುವವರೆಗೆ ಈ ಪ್ರಸ್ತಾವವನ್ನು ಕೈಗೆತ್ತಿಕೊಳ್ಳುವುದು ಬೇಡ’ ಎಂದು ಸೂಚಿಸಿದರು. ಮಂಡಳಿ ಸಭೆ ನಡೆಯುವಾಗ ಅನರ್ಹರ ಕುರಿತ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆದಿತ್ತು. ಚುನಾವಣೆ ಮುಂದೂಡಿಕೆ ತೀರ್ಪು ಪ್ರಕಟವಾಗಿರಲಿಲ್ಲ.

ವನ್ಯಜೀವಿ ಸ್ಥಾನಮಾನ ರದ್ದು ಮಾಡುವ ಪ್ರಯತ್ನದ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಸರ್ಕಾರದ ಈ ಉದ್ದೇಶವನ್ನು ವಿರೋಧಿಸಿ ಗದಗ ಜಿಲ್ಲೆಯ ಪರಿಸರ ಪ್ರೇಮಿಗಳು ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಬುಧವಾರ ಹೋರಾಟ ನಡೆಸಿದ್ದರು.

ವರದಿ ಕೇಳಿದ ಸಿ.ಎಂ: ಕಪ್ಪತಗುಡ್ಡ ವನ್ಯಜೀವಿಧಾಮಕ್ಕೆ ಸಂಬಂಧಿಸಿದಂತೆ ಕಾರ್ಯ ಅನುಪಾಲನಾ ವರದಿ ನೀಡುವಂತೆ ಮುಖ್ಯಮಂತ್ರಿಗಳು ಸಭೆಯಲ್ಲಿ ಸೂಚಿಸಿದರು. ವನ್ಯಜೀವಿ ಧಾಮದ ಸ್ಥಾನಮಾನ ರದ್ದುಪಡಿಸುವ ವಿಷಯ ಚರ್ಚಿಸುವುದು ಬೇಡ ಎಂದೂ ಸೂಚಿಸಿದರು ಎಂದು ವನ್ಯಜೀವಿ ಮಂಡಳಿ ಸಭೆಯ ಬಳಿಕ ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ವನ್ಯಜೀವಿಧಾಮ ರದ್ದು ಮಾಡುವ ಪ್ರಸ್ತಾವನೆ ಕೈಬಿಡಬೇಕು. ಇಲ್ಲಿರುವ ಜೀವ ವೈವಿಧ್ಯಗಳನ್ನು ರಕ್ಷಿಸಬೇಕು. ಕಾಣದ ಕೈಗಳ ಪಿತೂರಿಗೆ ಒಳಗಾಗದೇ ಕಪ್ಪತಗುಡ್ಡ ಪರಿಸರ ರಕ್ಷಿಸಬೇಕು’ ಎಂದು ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಮಾಜಿ ಅಧ್ಯಕ್ಷ ಎಸ್‌.ಚಂದ್ರಶೇಖರ್‌ ಹೇಳಿದ್ದಾರೆ.

ಮುಖ್ಯಮಂತ್ರಿಗೆ ಎಚ್‌.ಕೆ.ಪಾಟೀಲ ಪತ್ರ
ಕಪ್ಪತಗುಡ್ಡ ವನ್ಯಜೀವಿಧಾಮ ಸ್ಥಾನಮಾನ ರದ್ದುಪಡಿಸುವ ಹುನ್ನಾರ ನಡೆದಿರುವುದು ಕಳವಳಕಾರಿ. ಇಂತಹ ಯಾವುದೇ ನಿರ್ಣಯ ಗದಗ ಜಿಲ್ಲೆಯ ಹಿತ ಮತ್ತು ಉತ್ತರ ಕರ್ನಾಟಕದ ಜನರ ಭಾವನೆಯ ವಿರೋಧಿ ನಿರ್ಣಯವಾಗಿ ಹೋರಾಟಕ್ಕೆ ನಾಂದಿ ಮಾಡಿಕೊಡಲಿದೆ ಎಂದು ಕಾಂಗ್ರೆಸ್‌ ಶಾಸಕ ಎಚ್‌.ಕೆ.ಪಾಟೀಲ ಅವರು ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮೂರು ಪುಟಗಳ ಪತ್ರ ಬರೆದಿರುವ ಅವರು, ಉತ್ತರ ಕರ್ನಾಟಕದ ಜೀವ ವೈವಿಧ್ಯದ ಬಹು ಮುಖ್ಯ ಅರಣ್ಯ ಪ್ರದೇಶವಾಗಿರುವ ಕಪ್ಪತಗುಡ್ಡದ ವನ್ಯಜೀವಿಧಾಮ ಸ್ಥಾನಮಾನವನ್ನು ಮುಂದುವರಿಸಬೇಕು. ಇಲ್ಲಿನ ಜನರ ಬಯಕೆಯೂ ಇದೇ ಆಗಿದೆ. ಇದಕ್ಕೆ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯವಾಗಿಸುವ, ವನ್ಯಜೀವಿಧಾಮವಾಗಿಸುವ ನಿಟ್ಟಿನಲ್ಲಿ ಇಲ್ಲಿನ ಜನತೆ ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ಮತ್ತೊಮ್ಮೆ ಆ ಹೋರಾಟದ ಉದ್ದೇಶವನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿವೆ. ಸರ್ಕಾರ ದುರುದ್ದೇಶದ ಮೋಸದ ಬಲೆಗೆ ಬೀಳಬಾರದು ಎಂದು ಪಾಟೀಲ ಒತ್ತಾಯಿಸಿದ್ದಾರೆ.

‘ಹಿತಾಸಕ್ತಿ ಇಲ್ಲ’
‘ಕಪ್ಪತಗುಡ್ಡ ವನ್ಯಜೀವಿ ಧಾಮ ಸ್ಥಾನಮಾನವನ್ನು ಮುಂದುವರಿಸಲು ಸಭೆಯಲ್ಲಿ ಹೇಳಿದ್ದೆ. ಇದರಲ್ಲಿ ನನಗೆ ಯಾವುದೇ ಹಿತಾಸಕ್ತಿ ಇಲ್ಲ’ ಎಂದು ಬಸವರಾಜ ಬೊಮ್ಮಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ವಿಷಯ ಪ್ರಸ್ತಾವ ಈ ಸಭೆಯಲ್ಲಿ ಆಗುವುದಿತ್ತು. ಈ ಹಿಂದೆ ನಮ್ಮ ಸರ್ಕಾರವೇ ಯೋಜನೆ ಜಾರಿ ಮಾಡಿದ್ದರಿಂದ ಮುಖ್ಯಮಂತ್ರಿಯವರು ಸಭೆಗೆ ಬರುವಂತೆ ಹೇಳಿದ ಕಾರಣ ಸಭೆಗೆ ಹಾಜರಾಗಿದ್ದೆ’ ಎಂದು ಸಮಜಾಯಿಷಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.