ADVERTISEMENT

ಕಪ್ಪತಗುಡ್ಡ: ಕರಗಿದ ಗಣಿಗಾರಿಕೆ ಭೀತಿ

ಅನಿಲ್‌ ಕುಂಬ್ಳೆ ಸಲ್ಲಿಸಿದ್ದ ‘ವನ್ಯಧಾಮ’ ಪ್ರಸ್ತಾವಕ್ಕೆ ಬಲ

ಜೋಮನ್ ವರ್ಗಿಸ್
Published 18 ಮೇ 2019, 20:15 IST
Last Updated 18 ಮೇ 2019, 20:15 IST
ಕಪ್ಪತಗುಡ್ಡದ ವಿಹಂಗಮ ನೋಟ– ಸಂಗ್ರಹ ಚಿತ್ರ
ಕಪ್ಪತಗುಡ್ಡದ ವಿಹಂಗಮ ನೋಟ– ಸಂಗ್ರಹ ಚಿತ್ರ   

ಗದಗ: ಜಿಲ್ಲೆಯ ಅಪರೂಪದ ಜೀವವೈವಿಧ್ಯ ತಾಣ ಕಪ್ಪತಗುಡ್ಡದ 60,332 ಎಕರೆ ಪ್ರದೇಶವನ್ನು ‘ವನ್ಯಧಾಮ’ವನ್ನಾಗಿ ಘೋಷಿಸುವ ಮೂಲಕ, ಅಲ್ಲಿ ಗಣಿಗಾರಿಕೆಗೆ ಇದ್ದ ಎಲ್ಲ ಅವಕಾಶಗಳಿಗೆ ಸರ್ಕಾರ ಅಂತ್ಯ ಹಾಡಿದೆ.

ಮುಂದಿನ ಹಂತದಲ್ಲಿ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ವನ್ಯಧಾಮ ಎಂದು ಘೋಷಣೆಯಾಗಿರುವ ಪ್ರದೇಶದ ಸಂಪೂರ್ಣ ಸಮೀಕ್ಷೆ ನಡೆಸಲಿದ್ದಾರೆ. ಬಳಿಕ ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿಯಮಗಳಿಗೆ ಅನುಸಾರವಾಗಿ, ‘10 ವರ್ಷಗಳ ಕಪ್ಪತಗುಡ್ಡ ಸಂರಕ್ಷಣೆ ಕ್ರಿಯಾ ಯೋಜನೆ’ ಸಿದ್ಧಪಡಿಸಿ, ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಕೇಂದ್ರ ಸರ್ಕಾರ ಇದಕ್ಕೆ ಅನುಮೋದನೆ ನೀಡಿದ ಬಳಿಕ, ಕಪ್ಪತಗುಡ್ಡದ ಖನಿಜ ಸಂಪತ್ತು, ಜೀವವೈವಿಧ್ಯದ ಸಂರಕ್ಷಣೆ, ಸಂವರ್ಧನೆ ಚಟುವಟಿಕೆಗಳು ಪ್ರಾರಂಭವಾಗಲಿವೆ.

‘ಅಭಿವೃದ್ಧಿಗಿಂತ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯನ್ನೇ ಆದ್ಯತೆಯಾಗಿಟ್ಟುಕೊಂಡು ಕ್ರಿಯಾ ಯೋಜನೆ ಸಿದ್ಧಪಡಿಸುತ್ತೇವೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು 2ರಿಂದ 3 ತಿಂಗಳು ಬೇಕಾಗುತ್ತದೆ. ಕಪ್ಪತಗುಡ್ಡವನ್ನು ಕಾಳ್ಗಿಚ್ಚಿನಿಂದ ರಕ್ಷಿಸುವುದು, ಅಲ್ಲಿರುವ ಔಷಧೀಯ ಸಸ್ಯಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಈ ಕ್ರಿಯಾ ಯೋಜನೆಯಲ್ಲಿ ಪ್ರಸ್ತಾಪಿಸಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್‌ ವೃಷ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕಪ್ಪತಗುಡ್ಡದ ಒಟ್ಟು ಭೂಪ್ರದೇಶ 79,930 ಎಕರೆ. ಇದರಲ್ಲಿ 44,163 ಎಕರೆಯನ್ನು ಸರ್ಕಾರ ಈಗಾಗಲೇ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಿದೆ. ಈ ಸಂರಕ್ಷಿತ ಪ್ರದೇಶದ ಜತೆಗೆ ಹೆಚ್ಚುವರಿಯಾಗಿ 16,168 ಎಕರೆ ಪ್ರದೇಶವನ್ನೂ ಸೇರಿಸಿ ಈಗ ‘ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯ’ ಎಂದು ಘೋಷಿಸಲಾಗಿದೆ.

ಅನಿಲ್‌ ಕುಂಬ್ಳೆ ಕಾರಣ: ಕಪ್ಪತಗುಡ್ಡ ‘ವನ್ಯಧಾಮ’ವಾಗಿ ಘೋಷಣೆಯಾಗಲು ಹಿಂದೆ ರಾಜ್ಯ ವನ್ಯಜೀವಿ ಮಂಡಳಿ ಉಪಾಧ್ಯಕ್ಷರಾಗಿದ್ದ ಅನಿಲ್‌ ಕುಂಬ್ಳೆ ಸಲ್ಲಿಸಿದ್ದ ವರದಿಯೇ ಕಾರಣ. 2013ರಲ್ಲಿ ಡಂಬಳದಲ್ಲಿ ಕಪ್ಪತಗುಡ್ಡ ವನ್ಯಧಾಮ ಘೋಷಣೆಗೆ ಸಂಬಂಧಿಸಿದಂತೆ ಕುಂಬ್ಳೆ ನೇತೃತ್ವದಲ್ಲಿ ಸಾರ್ವಜನಿಕರ ಸಭೆ ನಡೆದಿತ್ತು. ಬಳಿಕ, ವನ್ಯಧಾಮ ಮಾಡುವುದರಿಂದ ಮಾತ್ರ ಕಪ್ಪತಗುಡ್ಡ ಸಂರಕ್ಷಣೆ ಸಾಧ್ಯ ಎಂದು ಕುಂಬ್ಳೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿ ಪರಿಶೀಲಿಸಿದ ಮಂಡಳಿಯು ವನ್ಯಧಾಮ ಘೋಷಣೆಯ ನಿರ್ಧಾರ ತೆಗೆದುಕೊಂಡಿತ್ತು.

ಆದರೆ, ಎರಡೂವರೆ ವರ್ಷಗಳ ಬಳಿಕ, 2015ರಲ್ಲಿ ವನ್ಯಧಾಮ ಎಂದು ಘೋಷಿಸುವ ಬದಲು ‘ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ’ ಎಂದು ಸರ್ಕಾರ ಆದೇಶ ಹೊರಡಿಸಿತ್ತು.

ಈಗ ಮತ್ತೆ ಕುಂಬ್ಳೆ ಸಲ್ಲಿಸಿದ್ದ ವರದಿಯನ್ನೇ ಆಧರಿಸಿ, ಅವರು ಅಂದಿನ ವರದಿಯಲ್ಲಿ ಪ್ರಸ್ತಾಪ ಮಾಡಿದ್ದ 17,872 ಹೆಕ್ಟೇರ್‌ ಪ್ರದೇಶವನ್ನೇ ‘ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯ’ ಎಂದು ಘೋಷಿಸಲಾಗಿದೆ.

ತೋಂಟದ ಶ್ರೀಗಳ ಹೋರಾಟ ಸ್ಮರಣೀಯ

‘ಕಪ್ಪತಗುಡ್ಡದ ವ್ಯಾಪ್ತಿಗೆ ಬಂದು ನೆಲೆಯೂರಲು ಪ್ರಯತ್ನಿಸುವ ಎಲ್ಲ ಕಂಪನಿಗಳು ಅಲ್ಲಿರುವ ಅಪಾರ ಖನಿಜ ಸಂಪತ್ತಿನ ಮೇಲೆ ಕಣ್ಣಿಟ್ಟುಕೊಂಡೇ ಬಂದಿರುತ್ತವೆ. ಹೀಗಾಗಿ ಗಣಿಗಾರಿಕೆಯಿಂದ ಕಪ್ಪತಗುಡ್ಡವನ್ನು ರಕ್ಷಿಸಿ, ಸಂರಕ್ಷಿಸಲು ಸರ್ಕಾರದಿಂದ ಮಾತ್ರ ಸಾಧ್ಯ’ ಎನ್ನುವುದು ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಅಭಿಪ್ರಾಯವಾಗಿತ್ತು.

ವನ್ಯಧಾಮ ಘೋಷಣೆಯಿಂದ ಕಪ್ಪತಗುಡ್ಡ ಸಂರಕ್ಷಣೆಗೆ ಬಲ ಬಂದಂತಾಗಿದೆ. ಮುಖ್ಯವಾಗಿ ಈ ಪ್ರದೇಶದಲ್ಲಿ ಮಾನವ ಹಸ್ತಕ್ಷೇಪ ಸಂಪೂರ್ಣ ನಿಲ್ಲಲಿದೆ ಎನ್ನುವುದು ಪರಿಸರ ಪ್ರೇಮಿಗಳ ಅಭಿಪ್ರಾಯ.

ತೋಂಟದ ಶ್ರೀಗಳ ಹೋರಾಟ ಸ್ಮರಣೀಯ

‘ಕಪ್ಪತಗುಡ್ಡದ ವ್ಯಾಪ್ತಿಗೆ ಬಂದು ನೆಲೆಯೂರಲು ಪ್ರಯತ್ನಿಸುವ ಎಲ್ಲ ಕಂಪನಿಗಳು ಅಲ್ಲಿರುವ ಅಪಾರ ಖನಿಜ ಸಂಪತ್ತಿನ ಮೇಲೆ ಕಣ್ಣಿಟ್ಟುಕೊಂಡೇ ಬಂದಿರುತ್ತವೆ. ಹೀಗಾಗಿ ಗಣಿಗಾರಿಕೆಯಿಂದ ಕಪ್ಪತಗುಡ್ಡವನ್ನು ರಕ್ಷಿಸಿ, ಸಂರಕ್ಷಿಸಲು ಸರ್ಕಾರದಿಂದ ಮಾತ್ರ ಸಾಧ್ಯ’ ಎನ್ನುವುದು ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಅಭಿಪ್ರಾಯವಾಗಿತ್ತು.

ವನ್ಯಧಾಮ ಘೋಷಣೆಯಿಂದ ಕಪ್ಪತಗುಡ್ಡ ಸಂರಕ್ಷಣೆಗೆ ಬಲ ಬಂದಂತಾಗಿದೆ. ಮುಖ್ಯವಾಗಿ ಈ ಪ್ರದೇಶದಲ್ಲಿ ಮಾನವ ಹಸ್ತಕ್ಷೇಪ ಸಂಪೂರ್ಣ ನಿಲ್ಲಲಿದೆ ಎನ್ನುವುದು ಪರಿಸರ ಪ್ರೇಮಿಗಳ ಅಭಿಪ್ರಾಯ.

**

ಕಪ್ಪತಗುಡ್ಡದ ಸಂರಕ್ಷಣೆ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಕ್ರಮ. ಇಲ್ಲಿರುವ ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಸಂಶೋಧನೆ, ದಾಖಲಾತಿ ಕಾರ್ಯ ನಡೆಯಲಿ
- ಶಿವಕುಮಾರ ಸ್ವಾಮೀಜಿ, ಕಪೋತಗಿರಿ ನಂದಿವೇರಿ ಮಠ

**

ವನ್ಯಧಾಮ ಎಂದು ಘೋಷಿಸಿರುವ ಪ್ರದೇಶದಲ್ಲಿ ಯಾವುದೇ ಕಂದಾಯ ಗ್ರಾಮಗಳು, ಪಟ್ಟಾ ಭೂಮಿ ಇಲ್ಲ. ಜನರನ್ನು ಒಕ್ಕಲೆಬ್ಬಿಸುವುದಿಲ್ಲ
- ಸೋನಲ್‌ ವೃಷ್ಣಿ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.