ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸುವ ಸಂಬಂಧ ನಾಗಮೋಹನದಾಸ್ ಮತ್ತು ಸುಭಾಷ್ ಅಡಿ ಅವರ ವರದಿಗಳು ಬಂದಿದ್ದು ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲು ಒಂದು ವಾರದೊಳಗೆ ಸರ್ವಪಕ್ಷಗಳ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸಭೆಯಲ್ಲಿ ಶುಕ್ರವಾರ ಈ ಸಂಬಂಧ ಹೇಳಿಕೆ ನೀಡಿದ ಅವರು, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣವನ್ನು ಶೇ 7 ಕ್ಕೆ ಹೆಚ್ಚಿಸಬೇಕು ಎಂದು ಕಳೆದ 200 ದಿನಗಳಿಂದ ಧರಣಿ ನಡೆಸುತ್ತಿರುವ ವಾಲ್ಮೀಕಿ ಸ್ವಾಮೀಜಿಯವರು ಧರಣಿ ಕೈಬಿಡಬೇಕು ಎಂದು ಮನವಿ ಮಾಡಿದರು.
‘ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಮಾತುಕತೆ ನಡೆಸಿ ಸಭೆಯ ದಿನಾಂಕ ನಿಗದಿ ಮಾಡುತ್ತೇನೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಬಗ್ಗೆ ಸಹಾನುಭೂತಿ ಇದೆ. ಜನಸಂಖ್ಯೆಗೆ ಆಧಾರವಾಗಿ ನ್ಯಾಯ ಕೊಡಿಸಲು ಸರ್ಕಾರವೂ ಬದ್ಧವಿದೆ. ಈ ಸಮುದಾಯಗಳ ಭಾವನೆಗೆ ನಾವು ಸ್ಪಂದಿಸುತ್ತೇವೆ. ಕಾನೂನಾತ್ಮಕ ವಿಚಾರ ಇರುವುದರಿಂದ ಕಾನೂನು ತಜ್ಞರೂ ಈ ಸಭೆಯಲ್ಲಿ ಭಾಗವಹಿಸುವರು’ ಎಂದು ಬೊಮ್ಮಾಯಿ ತಿಳಿಸಿದರು.
ಮುಖ್ಯಮಂತ್ರಿಯವರ ಪ್ರಸ್ತಾಪವನ್ನು ಬೆಂಬಲಿಸಿದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಈ ವಿಚಾರವಾಗಿ ಸರ್ವಪಕ್ಷಗಳ ಸಭೆ ನಡೆಸುವುದು ಸೂಕ್ತ. ವಾಲ್ಮೀಕಿ ಸಮುದಾಯದ ಸ್ವಾಮೀಜಿ 200 ದಿನಗಳಿಂದ ಧರಣಿ ಮಾಡುತ್ತಿದ್ದಾರೆ. ಆದಷ್ಟು ಬೇಗ ಬಗ್ಗೆ ಚರ್ಚೆ ನಡೆಸಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
‘ಸರ್ಕಾರದ ಈ ತೀರ್ಮಾನಕ್ಕೆ ಪಕ್ಷದ ಬೆಂಬಲವಿದೆ. ಸರ್ಕಾರ ನಡೆಸುವ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸುತ್ತೇವೆ. ಸ್ವಾಮೀಜಿಯವರು ಧರಣಿಯನ್ನು ಹಿಂದಕ್ಕೆ ಪಡೆಯಬೇಕು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಧರಣಿ ಹಿಂದಕ್ಕೆ ಪಡೆಯುವಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರೂ ಸ್ವಾಮೀಜಿಗೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.