ADVERTISEMENT

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ಭೇದಿಸುವವರೆಗೆ ದಣಿವಿಲ್ಲದೇ ಕ್ರಮ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 4:17 IST
Last Updated 29 ಜುಲೈ 2022, 4:17 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಳ್ಳಾರೆ (ದಕ್ಷಿಣ ಕನ್ನಡ): ‘ಪ್ರವೀಣ್‌ ನೆಟ್ಟಾರು ಅವರ ಹತ್ಯೆಯನ್ನು ನಾವು ಕೇವಲ ಕೊಲೆ ಪ್ರಕರಣವಾಗಿ ನೋಡುತ್ತಿಲ್ಲ. ಇದನ್ನು ದೇಶವನ್ನು ಛಿದ್ರ ಮಾಡುವ ಯೋಜನಾಬದ್ಧ ಭಯೋತ್ಪಾದಕ ಕೃತ್ಯ ಎಂದೇ ಪರಿಗಣಿಸಿದ್ದೇವೆ. ಈ ಆಯಾಮದಲ್ಲೇ ತನಿಖೆ ಪ್ರಾರಂಭವಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಲ್ಲಿಯ ನೆಟ್ಟಾರುವಿನಲ್ಲಿ ಪ್ರವೀಣ್ ಅವರ ಕುಟುಂಬದವರನ್ನು ಗುರುವಾರ ಭೇಟಿಯಾಗಿ ಸಾಂತ್ವನ ಹೇಳಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ಇದೊಂದು ಪೂರ್ವಯೋಜಿತ ಕೃತ್ಯ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಹತ್ತು ವರ್ಷಗಳಿಂದ ಈ ಭಾಗದಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿವೆ. ಸಮಾಜಘಾತುಕ ಶಕ್ತಿಗಳು ಬೆಂಬಲ ನೀಡಿರುವುದರಿಂದಲೇ ದುಷ್ಕರ್ಮಿಗಳು ನಿರ್ಭಿಡೆಯಿಂದ ಈ ಕೃತ್ಯವನ್ನು ನಡೆಸಿದ್ದಾರೆ’ ಎಂದರು.

ADVERTISEMENT

‘ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹಲವಾರು ವರ್ಷಗಳಿಂದ ಇಂತಹ ದುಷ್ಕೃತ್ಯಗಳಲ್ಲಿ ತೊಡಗಿರುವ ಸಮಾಜಘಾತುಕ ಶಕ್ತಿಗಳ
ಜಾಡು ಹಿಡಿದು ವಿಚಾರಣೆ ಆರಂಭಿಸಿದ್ದಾರೆ. ಕೃತ್ಯದ ಹಿಂದಿರುವ ಸಂಘಟನೆಗಳನ್ನು ಗಮನಿಸುತ್ತಿದ್ದೇವೆ. ಕೆಲವು ಆರೋಪಿಗಳು ರಾಜ್ಯದ ಗಡಿ ದಾಟಿರುವ ಸಾಧ್ಯತೆಯೂ ಇದೆ. ಈ ಆಯಾಮದಿಂದಲೂ ತನಿಖೆ ಮಾಡಲಾಗುತ್ತಿದೆ. ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರಿಂದ ಪಡೆದ ಮಾಹಿತಿಯ ಆಧಾರದಲ್ಲಿ ತನಿಖೆ ಮುಂದುವರಿಯಲಿದೆ. ಶೀಘ್ರದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ’ ಎಂದರು.

‘ಈ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲ ಜಾಲವನ್ನು ಭೇದಿಸಲಾಗುವುದು. ಈ ಕೃತ್ಯಕ್ಕೆ ಬೆಂಬಲ ನೀಡಿರುವವರನ್ನೂ ವಿಚಾರಣೆಗೆ ಒಳಪಡಿಸಲು ಸೂಚಿಸಿದ್ದೇನೆ’ ಎಂದರು.

ಬೆಳ್ಳಾರೆಯಲ್ಲಿ ವಾರದ ಹಿಂದಷ್ಟೇ ನಡೆದ ಮಸೂದ್ ಹತ್ಯೆಗೂ, ಪ್ರವೀಣ್ ಹತ್ಯೆಗೂ ಸಂಬಂಧವಿದೆಯೇ ಎಂಬ ಬಗ್ಗೆ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ತಿಳಿಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿಭಟನಾನಿರತ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್‌ನಡೆಸಿದ ಬಗ್ಗೆ ಪ್ರವೀಣ್‌ ಕುಟುಂಬದ
ವರು ಹಾಗೂ ಸಿ.ಎಂ.ಬಳಿ ನೋವು ತೋಡಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಸಿದ ಮುಖ್ಯಮಂತ್ರಿ, ‘ಪೊಲೀಸ್ ಅಧಿಕಾರಿಗಳ ಕರ್ತವ್ಯ ವೈಫಲ್ಯವಾಗಿದ್ದರೆ ಅದನ್ನೂ ತನಿಖೆಗೆ ಒಳಪಡಿಸಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.