ಬೆಂಗಳೂರು: ಮಹಾಘಟಬಂಧನ್ ಸಭೆಗಾಗಿ ಹೊರ ರಾಜ್ಯಗಳಿಂದ ಬಂದ ರಾಜಕಾರಣಿಗಳ ಸೇವೆಗೆ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳನ್ನು ಕಳುಹಿಸಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಕುರಿತು ಪುರಾವೆ ಸಹಿತ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿರುವ ಕಾಂಗ್ರೆಸ್ ಪಕ್ಷ, ರಾಜ್ಯದಲ್ಲಿ 'ಐಎಎಸ್ ಜೀತ ಪದ್ಧತಿ'ಯನ್ನು ಜಾರಿಗೆ ತರುವ ಮೂಲಕ ಹೊಸ ನಮೂನೆಯ 'ರಾಜಕೀಯ, ಆಡಳಿತ ವಸಾಹತುಶಾಹಿ'ಯನ್ನು ದೇಶಕ್ಕೆ ಪರಿಚಯ ಮಾಡಿದೆ. ಕಾಂಗ್ರೆಸ್ ಯಾವಾಗಲೂ ಕುಖ್ಯಾತಿಗಳಿಗೇ ಕುಖ್ಯಾತಿ. ಅಂಥ ಅಪಾಯಕಾರಿ ಹಸ್ತವಾಸಿಯೇ ಕೈ ಪಕ್ಷದ ಆಸ್ತಿ ಎಂದು ಟೀಕಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಅಧಿಕಾರ ಬಂಧನಕ್ಕಾಗಿ ಘಟಬಂಧನಕ್ಕೆ ಒಳಗಾದ ಕಾಂಗ್ರೆಸ್ ಪಕ್ಷವು ಕರ್ನಾಟಕದ ಹೆಮ್ಮೆ, ಪರಂಪರೆ,ಸ್ವಾಭಿಮಾನಕ್ಕೆ ಘಟಶ್ರಾದ್ಧ ಮಾಡಿದೆ. ಘಟಬಂಧನಕ್ಕೆ ಬಂದ ಹೊರರಾಜ್ಯದ ರಾಜಕಾರಣಿಗಳ ಸೇವೆಗೆ ರಾಜ್ಯದ ಹೆಮ್ಮೆಯ ಐಎಎಸ್ ಅಧಿಕಾರಿಗಳನ್ನು ಕಳಿಸಿದ ಕಾಂಗ್ರೆಸ್ ಸರ್ಕಾರದ ನಡೆ ತಪ್ಪು. ನುಡಿದಂತೆ ನಡೆಯುವುದು ಎಂದರೆ ಇದೇನಾ? ಎಂದು ಪ್ರಶ್ನಿಸಿದ್ದಾರೆ.
ಇದು ರಾಜ್ಯ ಸರ್ಕಾರಿ ಕಾರ್ಯಕ್ರಮ ಅಲ್ಲ, ಹೊಸ ಸರ್ಕಾರದ ಪ್ರಮಾಣ ಸ್ವೀಕಾರವೂ ಅಲ್ಲ. ಕೇವಲ ರಾಜಕೀಯ ಸಭೆಯಷ್ಟೇ. ಇಂಥ ಸಭೆಗೆ ಬಂದ ರಾಜಕೀಯ ನಾಯಕರಿಗೆ ಆತಿಥ್ಯ ನೀಡಲು ಜವಾಬ್ದಾರಿಯುತ ಅಧಿಕಾರಿಗಳನ್ನು ಕಳಿಸಿದ್ದು ಆರೂವರೆ ಕೋಟಿ ಕನ್ನಡಿಗರಿಗೆ ಎಸಗಿದ ಘೋರ ಅಪಚಾರ ಹಾಗೂ ರಾಜ್ಯದ ಪಾಲಿಗೆ ಮಹಾ ದುರಂತ ಎಂದು ಹೇಳಿದ್ದಾರೆ.
ಯಾವುದೇ ಒಂದು ರಾಜ್ಯದ ಅಭಿವೃದ್ಧಿ, ಆಡಳಿತ, ಮುನ್ನಡೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಐಎಎಸ್ ಅಧಿಕಾರಿಗಳು ಕೇವಲ ಅಧಿಕಾರಿಗಳಷ್ಟೇ ಅಲ್ಲ; ಆಯಾ ರಾಜ್ಯಗಳ ಕ್ಷಮತೆ, ದಕ್ಷತೆಯ ಪ್ರತೀಕ. ಅಂಥವರನ್ನು ಇನ್ನೊಬ್ಬರ ಆಜ್ಞಾಪಾಲಕರನ್ನಾಗಿ ಮಾಡಿ, ಬಾಗಿಲು ಕಾಯುವ ಕೆಲಸ ಹಚ್ಚಿದ್ದು ಆಡಳಿತ ಪಕ್ಷದ ಅಹಂಕಾರದ ಪರಮಾವಧಿ ಎಂದು ಹೇಳಿದ್ದಾರೆ.
ಇದು ನಿಶ್ಚಿತವಾಗಿಯೂ ಐಎಎಸ್ ಸೇವಾ ನೀತಿ ಸಂಹಿತೆಯ ಉಲ್ಲಂಘನೆ. ಇದು ತಮ್ಮ ಸ್ವಾಭಿಮಾನ, ಗೌರವಕ್ಕೆ ಧಕ್ಕೆ ತರುವಂತದ್ದು ಎಂದು ಗೊತ್ತಿದ್ದರೂ ಅಧಿಕಾರಿಗಳು ಈ ಕೆಲಸಕ್ಕೆ ಒಪ್ಪಿದ್ದು ನನಗೆ ಅತೀವ ಅಚ್ಚರಿ, ಆಘಾತ ಉಂಟು ಮಾಡಿದೆ. ಇಂಥ ವಿವಾದಾಸ್ಪದ ಆದೇಶ ಹೊರಡಿಸಿದ ಮುಖ್ಯ ಕಾರ್ಯದರ್ಶಿಗಳು ಜನತೆಗೆ ಉತ್ತರ ಕೊಡಲೇಬೇಕಿದೆ ಎಂದು ಆಗ್ರಹಿಸಿದ್ದಾರೆ.
135 ಸೀಟು ಕೊಟ್ಟ ತಪ್ಪಿಗೆ ಕನ್ನಡಿಗರಿಗೆ ವಿಪರೀತ ದರ್ಪ ತೋರಿದೆ ಕಾಂಗ್ರೆಸ್. ಸತ್ಯಯುಗದಲ್ಲಿ ಹಿರಣ್ಯಕಶಿಪು ಅಷ್ಟದಿಕ್ಪಾಲಕರನ್ನು ಸೆರೆಹಿಡಿದು ಮೆಟ್ಟಿಲು ಮಾಡಿಕೊಂಡ ಪಾಪಕ್ಕೆ ಸರ್ವನಾಶವಾದ. ಕಾಂಗ್ರೆಸ್ ಕೂಡ 30 ಐಎಎಸ್ ಅಧಿಕಾರಿಗಳನ್ನು ರಾಜಕಾರಣಿಗಳ ದ್ವಾರಪಾಲಕರನ್ನಾಗಿ ಮಾಡುವ ಮೂಲಕ ತನ್ನ ನಾಶಕ್ಕೆ ತಾನೇ ನಾಂದಿ ಹಾಡಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.