ADVERTISEMENT

ಕಾರ್ಗಿಲ್‌ ಕಥನ | ಯುದ್ಧಭೂಮಿಯಲ್ಲಿ ಜೀವ ಪಣಕ್ಕಿಟ್ಟು ಹೋರಾಟ

ಕೆ.ನರಸಿಂಹ ಮೂರ್ತಿ
Published 25 ಜುಲೈ 2019, 12:36 IST
Last Updated 25 ಜುಲೈ 2019, 12:36 IST
ಕೆ.ಎಲ್‌.ನಾರಾಯಣ್‌
ಕೆ.ಎಲ್‌.ನಾರಾಯಣ್‌   

ಬಳ್ಳಾರಿ: ಐತಿಹಾಸಿಕ ಕಾರ್ಗಿಲ್‌ ಸಂಘರ್ಷದ ಹೋರಾಟದಲ್ಲಿ ಪಾಲ್ಗೊಂಡಾಗ ನಗರದ ಬಸವೇಶ್ವರ ನಗರದ ನಿವಾಸಿ ಕೆ.ಎಲ್‌.ನಾರಾಯಣ್‌ ಅವರಿಗೆ 22ರ ಬಿಸಿಹರೆಯ. ಕಲ್ಲನ್ನು ಕುಟ್ಟಿ ಪುಡಿ ಮಾಡುವ ಹುಮ್ಮಸ್ಸು.

ಯುದ್ಧಭೂಮಿಯಲ್ಲಿ ಎದುರಾಳಿಗಳೊಡನೆ ಸೆಣೆಸಾಡುವ ಸೈನಿಕರ ತಂಡವನ್ನು ಇನ್‌ಫ್ಯಾಂಟ್ರಿ ಬೆಟಾಲಿಯನ್‌ ಎಂದು ಕರೆಯಲಾಗುತ್ತದೆ. ನಾರಾಯಣ್‌ ಕೂಡ ಅದೇ ಬೆಟಾಲಿಯನ್‌ಗೆ ಸೇರಿದ್ದವರು. ಕಾರ್ಗಿಲ್‌ ಸಂಘರ್ಷ ಶುರುವಾಗುವ ಒಂದು ವರ್ಷ ಮುಂಚೆಯೇ ಸಹಸೈನಿಕರೊಂದಿಗೆ ಅವರನ್ನು ಅಲ್ಲಿಗೆ ನಿಯೋಜಿಸಲಾಗಿತ್ತು.

‘ದೇಶದ ಭೂಮಿಯನ್ನು ಆಕ್ರಮಿಸಿದ್ದ ಪಾಕಿಸ್ತಾನದ ಎದುರಾಳಿಗಳಿಂದ ಕೆಲವೇ ಮೀಟರುಗಳ ದೂರದಲ್ಲಿ ನಿಂತು ಗುಂಡು ಹಾರಿಸುವುದಕ್ಕೂ ಎದೆಗಾರಿಕೆ ಬೇಕು. ಅಂಥದ್ದೊಂದು ಸಾಹಸದ ಸನ್ನಿವೇಶದಲ್ಲಿದ್ದು ಬಂದೆ ಎಂಬುದೇ ನನ್ನ ಜೀವನದ ಹೆಮ್ಮೆಯ ವಿಷಯ’ ಎಂದು ನೆನಪಿಸಿಕೊಂಡರು ನಾರಾಯಣ್‌.

ADVERTISEMENT

‘ನಾವು ಇದ್ದ ಕುಪ್ವಾಡ ಪ್ರದೇಶದ ಕೆರಿಯನ್‌ ಸೆಕ್ಟರ್‌ ಎಂದು ಕರೆಯಲಾಗುವ ಗುಡ್ಡದ ತುದಿಯಿಂದ ಕನಿಷ್ಠ 800ಮೀಟರ್ ಇಳಿದರೆ ಮಾತ್ರ ನೀರು ಸಿಗುತ್ತಿತ್ತು. 20 ಲೀಟರ್‌ ಕ್ಯಾನ್‌ನಲ್ಲಿ ನೀರು ತುಂಬಿಕೊಂಡು ಮತ್ತೆ ಏರಬೇಕಾಗಿತ್ತು. ಹಗಲು–ರಾತ್ರಿ ತುರ್ತು ಎಚ್ಚರದ ಸ್ಥಿತಿಯಲ್ಲೇ ಇರುತ್ತಿದ್ದೆವು. ಕಿಚಡಿಯೇ ನಮ್ಮ ಆಹಾರ. ಸುಮಾರು ಎರಡು ತಿಂಗಳು ನಮಗೆ ಸ್ನಾನ ಇರಲಿಲ್ಲ. ಹಲ್ಲುಜ್ಜಿರಲಿಲ್ಲ. ಆದರೆ, ಜನ್ಮಭೂಮಿಯನ್ನು ಉಳಿಸಿಕೊಳ್ಳಲು ಅದೇನೋ ದೊಡ್ಡ ತ್ಯಾಗವಲ್ಲ’ ಎಂದು ನಕ್ಕರು ಅವರು.

ಸಂಘರ್ಷದ ಹೋರಾಟದಲ್ಲಿ ನಮ್ಮ ತಂಡದ ಯಾರಿಗೂ ಗಾಯವಾಗಲಿಲ್ಲ. ಆದರೆ ಸಾವು–ನೋವುಗಳಿರಲಿಲ್ಲ ಎನ್ನುವಂತೆ ಇಲ್ಲ. ಸರಕು–ಸಾಗಣೆಯ ಪ್ರಮುಖ ವಾಹನಗಳಂತಿದ್ದ ಆರು ಕಚ್ಚರ್‌ ಕುದುರೆಗಳು ಸತ್ತವು. ಅವು ಆಹಾರ ಹುಡುಕಿಸಂರಕ್ಷಣಾ ವಲಯದಿಂದ ದೂರ ಹೋಗಿ ಎದುರಾಳಿಗಳ ಗುಂಡಿಗೆ ಸಿಕ್ಕಿ ಸತ್ತವು. ಎದುರಾಳಿಗಳ ಎಲ್ಲ ಬಗೆಯ ಶಕ್ತಿಗಳನ್ನೂ ಕುಗ್ಗಿಸುವುದು ಯುದ್ಧದ ಒಂದು ಪಾಠವಲ್ಲವೇ. ಹಾಗೇ ಆಯಿತು’ ಎಂದು ಸ್ಮರಿಸಿದರು.

‘ಕಾರ್ಗಿಲ್‌ ಸಂಘರ್ಷದಲ್ಲಿ ಪಾಲ್ಗೊಂಡಾಗ ನನಗೆ ಮದುವೆ ಆಗಿರಲಿಲ್ಲ. ನಾನು ಓದಿದ್ದು ಹತ್ತನೇ ತರಗತಿ. ನನ್ನ ಪತ್ನಿ ಸಂಗೀತಾ ಸ್ನಾತಕೋತ್ತರ ಪದವೀಧರೆ. ಸೈನಿಕರನ್ನೇ ಮದುವೆಯಾಗಬೇಕು ಎಂಬ ಆಸೆ ಆಕೆಗಿತ್ತು. ಹೀಗಾಗಿ ನಮ್ಮಿಬ್ಬರ ವಿದ್ಯಾರ್ಹತೆಯಲ್ಲಿದ್ದ ದೊಡ್ಡ ವ್ಯತ್ಯಾಸ ಲೆಕ್ಕಕ್ಕೆ ಬರಲಿಲ್ಲ’ ಎಂದು ನಕ್ಕರು.

‘ಪಿಯುಸಿ ಪೂರೈಸಿರುವ ಮಗ ಕೌಸ್ತುಭ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ)ಗೆ ಸೇರುವ ಸಲುವಾಗಿ ಪುಣೆಯಲ್ಲಿ ತರಬೇತಿ ಪಡೆಯುತ್ತಿದ್ದಾನೆ, ಪಿಯುಸಿ ಓದುತ್ತಿರುವ ಮಗಳು ಮೇಘನಾಗೂ ಸೈನ್ಯದಲ್ಲೇ ಕೆಲಸ ಮಾಡಬೇಕೆಂಬ ತುಡಿತವಿದೆ. ಇಬ್ಬರು ಮಕ್ಕಳಿಗೂ ಸೇನೆಯ ಸೇವೆಯಲ್ಲಿ ಆಸಕ್ತಿ ಮೂಡಿರುವುದು ನಮ್ಮ ಕುಟುಂಬದ ದೊಡ್ಡ ಹೆಮ್ಮೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.