ADVERTISEMENT

ಕಾವೇರಿಗಾಗಿ ಸೆ.29ಕ್ಕೆ ಕರ್ನಾಟಕ ಬಂದ್‌ಗೆ ಕರೆ: ಏನಿರುತ್ತೆ? ಏನಿರಲ್ಲ?

ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್‌, 29ರ ಹೋರಾಟಕ್ಕೆ ನೂರಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2023, 23:19 IST
Last Updated 27 ಸೆಪ್ಟೆಂಬರ್ 2023, 23:19 IST
<div class="paragraphs"><p>ಬೆಂಗಳೂರಿನಲ್ಲಿ ಬುಧವಾರ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಮುಂದಾದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಸೇರಿದಂತೆ ಹಲವು ಸದಸ್ಯರನ್ನು ಬುಧವಾರ ಪೊಲೀಸರು ವಶಕ್ಕೆ ಪಡೆದರು.</p></div>

ಬೆಂಗಳೂರಿನಲ್ಲಿ ಬುಧವಾರ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಮುಂದಾದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಸೇರಿದಂತೆ ಹಲವು ಸದಸ್ಯರನ್ನು ಬುಧವಾರ ಪೊಲೀಸರು ವಶಕ್ಕೆ ಪಡೆದರು.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು’ ಎಂದು ಆಗ್ರಹಿಸಿ ಮಂಗಳವಾರ ಬೆಂಗಳೂರು ಬಂದ್‌ ನಡೆದ ಬೆನ್ನಲ್ಲೇ, ಮತ್ತು ಕೆಲವು ಸಂಘಟನೆಗಳು ಶುಕ್ರವಾರ(ಸೆ.29) ಕರ್ನಾಟಕ ಬಂದ್‌ಗೆ ಕರೆ ನೀಡಿವೆ.

ADVERTISEMENT

ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಕರೆ ನೀಡಿರುವ ಬಂದ್‌ಗೆ ನೂರಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಕಾವೇರಿ ನೀರು ಅವಲಂಬಿಸಿರುವ ಬೆಂಗಳೂರು, ಮೈಸೂರು, ರಾಮನಗರ, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ನಗರ ಪ್ರದೇಶಗಳಲ್ಲಿ ಬಂದ್‌ಗೆ ಬೆಂಬಲ ಹೆಚ್ಚಾಗಿದ್ದು, ವ್ಯಾಪಾರ–ವಹಿವಾಟು ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ರಾಜ್‌ಕುಮಾರ್‌ ಅಭಿಮಾನಿಗಳ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಕುಮಾರ್‌ ಶೆಟ್ಟಿ ಹಾಗೂ ಶಿವರಾಮೇಗೌಡ ಬಣ, ಕನ್ನಡ ಸೇನೆ, ಕನ್ನಡ ಜಾಗೃತಿ ವೇದಿಕೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಂದ್‌ಗೆ ಬೆಂಬಲ ಘೋಷಿಸಿವೆ. ಚಿತ್ರರಂಗದವರು ರ್‍ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಸಂಘಟನೆಗಳು ಮನವಿ ಮಾಡಿವೆ. ಜಿಲ್ಲಾ ಕೇಂದ್ರಗಳಲ್ಲೂ ದೊಡ್ಡಮಟ್ಟದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಲು ಸಂಘಟನೆಗಳು ತೀರ್ಮಾನಿಸಿವೆ.

ಓಲಾ–ಉಬರ್‌ ಚಾಲಕರ ಸಂಘವು ಬೆಂಬಲ ನೀಡಿದ್ದು ಬೆಂಗಳೂರಿನಲ್ಲಿ ಅವುಗಳ ಸಂಚಾರ ಇರುವುದಿಲ್ಲ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಯಥಾಪ್ರಕಾರ ಇರಲಿದೆ. ಮಂಗಳವಾರ ಬಂದ್‌ಗೆ ಬೆಂಬಲ ನೀಡಿದ್ದ ಸಂಘಟನೆಗಳು ಹೊರತು ಪಡಿಸಿ ಬೇರೆಲ್ಲಾ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ.

‘ರಾಜ್ಯದಲ್ಲಿ ಬರ ಪರಿಸ್ಥಿತಿಯಿದೆ. ಕಾವೇರಿಕೊಳ್ಳದ ಜಿಲ್ಲೆಗಳಲ್ಲಿ ನೀರು ಸಿಗದೆ ಬೆಳೆಗಳು ಒಣಗುತ್ತಿವೆ. ಬೆಂಗಳೂರಿನ ಜನರಿಗೂ ನೀರಿಲ್ಲದ ಸ್ಥಿತಿ ಬರಲಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ರಾಜ್ಯದ ಸಂಸದರು ಕಾವೇರಿ ವಿಚಾರವಾಗಿ ಸಂಸತ್‌ನಲ್ಲಿ ಚರ್ಚಿಸುತ್ತಿಲ್ಲ. ಸಂಸದರು ರಾಜೀನಾಮೆ ನೀಡಬೇಕು’ ಎಂದು ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಆಗ್ರಹಿಸಿದರು.

‘ಬಂದ್‌ ಶಾಂತಿಯುತವಾಗಿ ನಡೆಯಲಿದೆ. ಬಂದ್‌ ವಾಪಸ್‌ ಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ಅವರು ಹೇಳಿದರು.

ಮಲ್ಲೇಶ್ವರ, ಶೇಷಾದ್ರಿಪುರ, ಮೆಜೆಸ್ಟಿಕ್‌ ಭಾಗದಲ್ಲಿ ಬುಧವಾರ ತೆರೆದ ವಾಹನದಲ್ಲಿ ಸಂಚರಿಸಿದ ವಾಟಾಳ್‌ ನಾಗರಾಜ್‌ ಅವರು ಬಂದ್‌ಗೆ ಬೆಂಬಲ ಸೂಚಿಸುವಂತೆ ಕೋರಿದರು. ಅಂಗಡಿ, ಮಾಲ್‌ ಸಿಬ್ಬಂದಿ, ಬಸ್‌, ಆಟೊ, ಕ್ಯಾಬ್‌ ಚಾಲಕರಲ್ಲಿ ಬಂದ್‌ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ಬಂದ್ ಮಾಡಿಸಲು ಸಂಘಟನೆಗಳು ತೀರ್ಮಾನಿಸಿವೆ. ಬೆಂಗಳೂರು–ಹೊಸೂರು ಮುಖ್ಯರಸ್ತೆ, ಬೆಂಗಳೂರು–ಹೈದರಾಬಾದ್ ಹೆದ್ದಾರಿ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರು–ಮೈಸೂರು ಹೆದ್ದಾರಿ, ತುಮಕೂರು ರಸ್ತೆ, ಬೆಂಗಳೂರು–ಕನಕಪುರ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಲಿದೆ. ಶಾಲಾ–ಕಾಲೇಜುಗಳಿಗೆ ರಜೆ ನೀಡುವ ಕುರಿತು ತೀರ್ಮಾನ ಕೈಗೊಂಡಿಲ್ಲ. ಕೆಲವು ವಿಶ್ವವಿದ್ಯಾಲಯಗಳು, ಶಾಲಾ–ಕಾಲೇಜುಗಳಲ್ಲಿ ಅಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿವೆ.

ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಪ್ರಯತ್ನ:

ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ನಡೆದ ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ಮುತ್ತಿಗೆ ಹಾಕಲು ಹೋರಾಟಗಾರರು ಮುಂದಾಗಿದ್ದರು. ಆಗ ಅವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು.

ತಮಿಳುನಾಡಿನ ಗಡಿಪ್ರದೇಶದಲ್ಲಿ ಬಂದೋಬಸ್ತ್‌ ಹೆಚ್ಚಿಸಲಾಗಿದೆ. ನಗರದ ಸೂಕ್ಷ್ಮಪ್ರದೇಶದಲ್ಲೂ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಮಧ್ಯರಾತ್ರಿ ತನಕ ಕೆಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ ಸಾಧ್ಯತೆಯಿದೆ.

ಎಲ್ಲೆಲ್ಲಿ ಬಂದ್ ಸಂಭವ?

ಬೆಂಗಳೂರು, ಮೈಸೂರು, ರಾಮನಗರ, ಚಾಮರಾಜನಗರ, ಮಂಡ್ಯ

ರಾಜ್ಯದಾದ್ಯಂತ ಬಂದೋಬಸ್ತ್‌

ಕಾವೇರಿ ಹೋರಾಟಗಾರರು ಇದೇ 29ಕ್ಕೆ ಬಂದ್ ಮಾಡಲು‌ ನಿರ್ಧರಿಸಿದ್ದು ರಾಜ್ಯದಾದ್ಯಂತ ಅಗತ್ಯ ಬಂದೋಬಸ್ತ್ ಕೈಗೊಳ್ಳುವಂತೆ ಎಲ್ಲ ವಲಯ ಐಜಿಪಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಇಲ್ಲಿ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು ‘ಬಂದ್‌ ಕೈಬಿಡುವಂತೆ ಹೋರಾಟಗಾರರಲ್ಲಿ ಮನವಿ ಮಾಡಲಾಗಿದೆ. ಒಂದು ವೇಳೆ ಬಂದ್‌ ನಡೆದರೆ ಭದ್ರತಾ ದೃಷ್ಟಿಯಿಂದ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಎಲ್ಲ ನಗರ ಪೊಲೀಸ್‌ ಕಮಿಷನರ್‌ಗಳು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೂ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ’ ಎಂದು ಹೇಳಿದರು.

ಸೆ.29ಕ್ಕೆ ಚಿತ್ರರಂಗ ಸಂಪೂರ್ಣ ಸ್ತಬ್ಧ

ಕನ್ನಡ ಸಂಘಟನೆಗಳ ಒಕ್ಕೂಟ ಶುಕ್ರವಾರ(ಸೆ.29)ದಂದು ನಡೆಸಲಿರುವ ಕರ್ನಾಟಕ ಬಂದ್‌ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್‌ಸಿಸಿ) ಬೆಂಬಲ ನೀಡಿದೆ.  ಬುಧವಾರ(ಸೆ.27) ಮಂಡಳಿಯ ಕಚೇರಿಯಲ್ಲಿ ಚಿತ್ರರಂಗದ ವಿವಿಧ ಸಂಘಗಳ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಎಫ್‌ಸಿಸಿ ಅಧ್ಯಕ್ಷ ಎನ್‌.ಎಂ. ಸುರೇಶ್‌ ‘ಬಂದ್‌ಗೆ ಸಂಪೂರ್ಣ ಬೆಂಬಲ ನೀಡಲಿದ್ದೇವೆ. ಸೆ.29ರಂದು ಚಿತ್ರಮಂದಿರಗಳು ತೆರೆಯುವುದಿಲ್ಲ. ಜೊತೆಗೆ ಚಿತ್ರರಂಗದ ಚಟುವಟಿಕೆಗಳೂ ಸ್ತಬ್ಧವಾಗಲಿದೆ. ಕನ್ನಡ ಸಂಘಟನೆಗಳು ನಡೆಸುವ ರ್‍ಯಾಲಿಯಲ್ಲಿ ಕಲಾವಿದರೂ ಜೊತೆಯಾಗಲಿದ್ದಾರೆ. ಮಂಡಳಿ ಆವರಣದಲ್ಲಿ ಎಲ್ಲರೂ ಸೇರಿಕೊಂಡು ನಂತರ ಜೊತೆಯಾಗಿ ರ್‍ಯಾಲಿಯಲ್ಲಿ ಹೆಜ್ಜೆ ಹಾಕುತ್ತೇವೆ’ ಎಂದಿದ್ದಾರೆ.  

ಏನಿರಲ್ಲ?

ಆಟೊಮ್ಯಾಕ್ಸಿ ಕ್ಯಾಬ್‌,

ಖಾಸಗಿ ಬಸ್‌ಗಳು,

ಶಾಲಾ ವಾಹನಗಳು,

ಜಿಲ್ಲಾ ಕೇಂದ್ರದ ಪ್ರಮುಖ ಮಾರುಕಟ್ಟೆ,

ಕೆಲ ಖಾಸಗಿ ಶಾಲೆಗಳು

ಗೂಡ್ಸ್ ಸಾಗಣೆ ವಾಹನಗಳು

ಕೈಗಾರಿಕೆಗಳು

ಆಭರಣ ಮಳಿಗೆಗಳು

ಓಲಾ–ಉಬರ್ ಕ್ಯಾಬ್‌

ಚಿತ್ರ ಮಂದಿರಗಳು ಅನುಮಾನ

ಸರ್ಕಾರಿ ಕಚೇರಿಗಳು

ಐಟಿ–ಬಿಟಿ ಕಂಪನಿಗಳು

ಹೋಟೆಲ್‌ಗಳು

ಆಟೊ

ಏನಿರುತ್ತೆ?

ಆಸ್ಪತ್ರೆಗಳು

ಔಷಧಿ ಮಳಿಗೆಗಳು

ಆಂಬುಲೆನ್ಸ್ ಸಂಚಾರ

ಬ್ಯಾಂಕ್‌ಗಳು,

ದಿನಪತ್ರಿಕೆಗಳು,

ಮೆಟ್ರೊ ರೈಲು, ಬಿಎಂಟಿಸಿ,‌ ಕೆಎಸ್‌ಆರ್‌ಟಿಸಿ ಬಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.