ADVERTISEMENT

ಆಸ್ತಿ ನಗದೀಕರಣದ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸ್ಪಷ್ಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜೂನ್ 2024, 5:37 IST
Last Updated 20 ಜೂನ್ 2024, 5:37 IST
<div class="paragraphs"><p>ಆಸ್ತಿ ನಗದೀಕರಣ</p></div>

ಆಸ್ತಿ ನಗದೀಕರಣ

   

ಬೆಂಗಳೂರು: ಬೆಂಗಳೂರು ಸುತ್ತಮುತ್ತಲಿನ 25,000 ಎಕರೆ ಭೂಮಿಯನ್ನು ಆಸ್ತಿ ನಗದೀಕರಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

ಐದು ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನದಿಂದ ಎದುರಾಗಿರುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಬೆಂಗಳೂರು ನಗರ ಮತ್ತು ಸುತ್ತಮುತ್ತ ಲಿನ 25,000 ಎಕರೆ ಜಮೀನನ್ನು ವರಮಾನ ಸಂಗ್ರಹಕ್ಕೆ ಬಳಸಿಕೊಳ್ಳುವ ಚಿಂತನೆ ನಡೆಸಿದೆ ಎಂಬ 'ಪ್ರಜಾವಾಣಿ' ವರದಿಯನ್ನು ಉಲ್ಲೇಖಿಸಿ ಈ ಕುರಿತು ಸ್ಪಷನೆ ನೀಡಿದೆ.

ADVERTISEMENT

ಸರ್ಕಾರವು ನಾಗರಿಕರಿಗೆ ಯಾವುದೇ ಹೆಚ್ಚಿನ ಹೊರೆಯಾಗದಂತೆ ಹೆಚ್ಚುವರಿ ಸಂಪನ್ಮೂಲ ಕ್ರೋಢೀಕರಿಸುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ. ಈ ಕುರಿತ ಹಲವು ಪ್ರಸ್ತಾವನೆಗಳು ಸರ್ಕಾರದ ಮುಂದಿದೆ ಎಂದು ಮುಖ್ಯಮಂತ್ರಿ ಸಚಿವಾಲಯ ತಿಳಿಸಿದೆ.

ಕರ್ನಾಟಕ ರಾಜ್ಯದಲ್ಲಿ ಗಣಿಗಾರಿಕೆ, ನಗರ ವಲಯದಲ್ಲಿ ಜಾಹೀರಾತು. ನಾಮಕರಣದ ಹಕ್ಕು (naming rights) ಸೇರಿದಂತೆ ಹಲವು ತೆರಿಗೆಯೇತರ ಮೂಲಗಳಿಂದ ಹೆಚ್ಚುವರಿ ಸಂಪನ್ಮೂಲ ಕ್ರೋಢೀಕರಿಸಲು ಸಾಕಷ್ಟು ಅವಕಾಶಗಳಿವೆ. ಸರ್ಕಾರದ ಆಸ್ತಿಗಳ ಸೀಮಿತ ಮಟ್ಟದ ನಗದೀಕರಣವೂ ಇದರಲ್ಲಿ ಒಳಗೊಂಡಿರಬಹುದು. ಆದರೆ ಸರ್ಕಾರಿ ಜಮೀನಿನ ವಿಲೇವಾರಿ ಅಥವಾ ಮಾರಾಟ ಎಂಬುದು ಇದರ ಅರ್ಥವಲ್ಲ, ವ್ಯವಸ್ಥಿತ ನಗರ ಯೋಜನೆ ಮತ್ತು ರಸ್ತೆ, ನಗರ ರೈಲು ಮತ್ತು ಮೆಟ್ರೋ ಮಾರ್ಗ ನಿರ್ಮಾಣದಂತಹ ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ಖಾಸಗಿ ಭೂಮಿಯ ಮೌಲ್ಯವರ್ಧನೆ ಮಾಡಬಹುದಾಗಿದೆ. ಸರ್ಕಾರದ ಭೂಮಿ ಮಾರಾಟ ಮಾಡದೆ ಹಾಗೂ ತೆರಿಗೆ ಏರಿಕೆ ಮಾಡದೆ, ಇತರ ಹಲವು ಜಾಣ ಮಾರ್ಗಗಳ ಮೂಲಕ ಸಂಪನ್ಮೂಲ ಕ್ರೋಡೀಕರಿಸಲು ಸಾಧ್ಯವಿದೆ ಎಂದು ಹೇಳಿದೆ.

ಹಣಕಾಸು ಇಲಾಖೆಯು ಸಂಪನ್ಮೂಲ ಕ್ರೋಢೀಕರಣದ ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸುತ್ತಿದ್ದು, ಸಮರ್ಪಕ ರೂಪುರೇಷೆಗಳನ್ನು ನಿಗದಿಪಡಿಸಿದ ನಂತರ ಅಂತಹ ಪ್ರಸ್ತಾವನೆಗಳನ್ನು ಸಾರ್ವಜನಿಕರ ಮುಂದಿಡಲಾಗುವುದು, ಈ ಕುರಿತು ಪ್ರಾಥಮಿಕ ಚಿಂತನೆಗಳನ್ನಾಧರಿಸಿ ಯಾರೂ ಅವಸರದ ತೀರ್ಮಾನಕ್ಕೆ ಬರಲು ಯಾವುದೇ ಕಾರಣವಿಲ್ಲ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.