ADVERTISEMENT

ಏಕೀಕರಣ ಆಶಯದ ಕೇಂದ್ರ

ಒಳನೋಟ *ವಿವಿಗಳಲ್ಲಿ ಕನ್ನಡ ಅಧ್ಯಯನ ಕೇಂದ್ರದ ದುಸ್ಥಿತಿ

ಇ.ಎಸ್.ಸುಧೀಂದ್ರ ಪ್ರಸಾದ್
Published 30 ನವೆಂಬರ್ 2019, 20:22 IST
Last Updated 30 ನವೆಂಬರ್ 2019, 20:22 IST
ವಿವಿಗಳಲ್ಲಿ ಕನ್ನಡ ಅಧ್ಯಯನ ಕೇಂದ್ರದ ದುಸ್ಥಿತಿ
ವಿವಿಗಳಲ್ಲಿ ಕನ್ನಡ ಅಧ್ಯಯನ ಕೇಂದ್ರದ ದುಸ್ಥಿತಿ   

ಧಾರವಾಡ: ಸ್ವಾತಂತ್ರ್ಯ ನಂತರ ಆರಂಭಗೊಂಡ ವಿಶ್ವವಿದ್ಯಾಲಯವಾಗಿರುವ ಕರ್ನಾಟಕ ವಿಶ್ವವಿದ್ಯಾಲಯದ ಮೊದಲ ವಿಭಾಗವೇ ಕನ್ನಡ ಅಧ್ಯಯನ ಪೀಠ. 1950ರಲ್ಲಿ ಆರಂಭವಾದ ಈ ಪೀಠವು ಕರ್ನಾಟಕ ಏಕೀಕರಣದ ಉತ್ಸಾಹವನ್ನು ಮೈಗೂಡಿಸಿಕೊಂಡೇ ಬೆಳೆಯಿತು.

ಡಾ. ಆರ್.ಸಿ.ಹಿರೇಮಠ, ಡಾ. ಎಂ.ಎಂ.ಕಲಬುರ್ಗಿ ಸೇರಿದಂತೆ ಹಲವು ವಿದ್ವಾಂಸರು ಈ ವಿಭಾಗವನ್ನು ಕಟ್ಟಿ ಬೆಳೆಸಿದ್ದಾರೆ. ವಚನ ಸಾಹಿತ್ಯದ ಸಮಗ್ರ ಪ್ರಕಟಣೆಯಲ್ಲಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮರ ವಚನಗಳ ಸಂಪುಟ ಈ ಪೀಠದಿಂದ ಪ್ರಕಟಗೊಂಡಿವೆ. ವಚನಗಳ ಜತೆಯಲ್ಲಿ ವಡ್ಡಾರಾಧನೆಯ ಕೆಲ ಭಾಗಗಳು ಇಂಗ್ಲಿಷ್‌ಗೆ ಭಾಷಾಂತರಗೊಂಡಿವೆ.

ಕನ್ನಡ ವಿಭಾಗವನ್ನು ಸಂಸ್ಥೆಯಾಗಿ ಬೆಳೆಸಿರುವ ಇಲ್ಲಿನ ಪ್ರಾಧ್ಯಾಪಕರು ಗ್ರಂಥಸಂಪಾದನೆ, ಶಾಸನಶಾಸ್ತ್ರ, ವಿಷಯ ಬೋಧನೆ ಮೂಲಕ ಸಂಶೋಧನೆಯನ್ನೂ ಶಿಸ್ತಿನಲ್ಲಿ ನಡೆಸಿಕೊಂಡು ಬಂದಿದ್ದರ ಪರಿಣಾಮವಾಗಿ ಪಂಪ ಪೀಠ, ಬಸವ ಪೀಠ, ಕನಕ ಪೀಠ, ವೇಮನ ಪೀಠ, ಡಾ. ಕಲಬುರ್ಗಿ ಪೀಠ ಸೇರಿದಂತೆ ಹಲವು ಪೀಠಗಳು ಇಲ್ಲಿ ಸ್ಥಾಪನೆಗೊಂಡವು.

ಇವುಗಳಲ್ಲಿ ಕೆಲವು ಪೀಠಗಳಿಗೆ ಸರ್ಕಾರದಿಂದ ಹಣ ಘೋಷಣೆಯಾಗಿದ್ದರೂ, ಈವರೆಗೂ ಬಿಡುಗಡೆಯಾಗಿಲ್ಲ. ಈ ಪೈಕಿ ಡಾ. ಎಂ.ಎಂ.ಕಲಬುರ್ಗಿ ಪೀಠ ಕೂಡಾ ಒಂದು, ಅವರ ಹತ್ಯೆ ನಂತರ ಘೋಷಣೆಯಾದ ಪೀಠಕ್ಕೆ ಮೂರು ವರ್ಷ ಕಳೆದರೂ ಹಣ ಬಿಡುಗಡೆಯಾಗಿಲ್ಲ. ಪಂಪ ಪೀಠಕ್ಕೆ ₹1ಕೋಟಿ ಬಿಡುಗಡೆಯಾಗಿದ್ದು, ಪೀಠದ ಕಾರ್ಯಚಟುವಟಿಕೆಗಳು ಆರಂಭಗೊಂಡಿವೆ.

ಜಾಗತಿಕ ವಿದ್ಯಮಾನದಲ್ಲಿ ಸ್ಥಳೀಯ ಸಂಸ್ಕೃತಿಗಳು ಎಂಬ ವಿಷಯ ಕುರಿತ ಯುಜಿಸಿ ಪ್ರಾಯೋಜಿತ ಯೋಜನೆ ಯಲ್ಲಿ 15 ಸಂಪುಟಗಳನ್ನು ಕನ್ನಡ ಅಧ್ಯಯನ ಪೀಠ ಪ್ರಕಟಿಸಿದೆ. ಶಾಸ್ತ್ರೀಯ ಭಾಷೆ ಸ್ಥಾನಮಾನ ಲಭ್ಯವಾದ ಸಂಭ್ರಮದಲ್ಲಿ 2008ರಲ್ಲಿ ಕನ್ನಡ ಭಾಷಾಭಿವೃದ್ಧಿಗೆ ಸಂಬಂಧಿಸಿದಂತೆ ಕರ್ನಾಟಕ ವಿಶ್ವವಿದ್ಯಾಲಯಕ್ಕೂ ₹1ಕೋಟಿ ಮಂಜೂರು ಆಗಿತ್ತು. ಗ್ರಂಥ ಸಂಪಾದನೆಗೊಂಡಿದ್ದರೂ,ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ ಮುನ್ನುಡಿ ದೊರೆಯದ ಕಾರಣ ಈವರೆಗೂ ಅದು ಪ್ರಕಟಗೊಂಡಿಲ್ಲ.

ಮುನ್ನುಡಿಗಾಗಿ...!

ಧಾರವಾಡ: ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ ಮುನ್ನುಡಿ ದೊರೆಯದೆ ಕನ್ನಡ ಭಾಷಾಭಿವೃದ್ಧಿ ಯೋಜನೆ ಅಡಿಯಲ್ಲಿ ವಿ.ವಿ ₹80ಲಕ್ಷ ಖರ್ಚು ಮಾಡಿ ಸಂಪಾದಿಸಿದ ಗ್ರಂಥ ಈವರೆಗೂ ಪ್ರಕಟಗೊಂಡಿಲ್ಲ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2008ರಲ್ಲಿ ಕನ್ನಡ ಭಾಷಾಭಿವೃದ್ಧಿ ಯೋಜನೆ ಅಡಿಯಲ್ಲಿ ಕನ್ನಡ ಭಾಷೆ– ಸಂಸ್ಕೃತಿ ಬೆಳೆದು ಬಂದ ದಾರಿ, ಜಾನಪದ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಸಂಶೋಧನೆ, ಅಧ್ಯಯನ ಮತ್ತು ಪ್ರಕಟಣೆಗೆ ಯೋಜನೆ ರೂಪಿಸಲಾಗಿತ್ತು.ಕರ್ನಾಟಕ ವಿ.ವಿ ಸೇರಿದಂತೆ ರಾಜ್ಯದ 11 ವಿ.ವಿಗಳಿಗೆ ತಲಾ ₹2 ಕೋಟಿ ಮೀಸಲಿಟ್ಟು, ಆರಂಭಿಕ ₹1 ಕೋಟಿ ಮಂಜೂರು ಮಾಡಿತ್ತು.

ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠಕ್ಕೆ ಗ್ರಂಥ ಸಂಪಾದನೆ ಜವಾಬ್ದಾರಿ ನೀಡಲಾ ಗಿತ್ತು. ಹತ್ತು ವರ್ಷ ಕಳೆದರೂ ಈ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಮುದ್ರಣಕ್ಕೆ ಅಗತ್ಯ ವಿರುವ ₹20 ಲಕ್ಷ ಹೊರತುಪಡಿಸಿ ಉಳಿದ ಹಣ ಖರ್ಚಾಗಿದೆ. ಇದೇ ಅವಧಿಯಲ್ಲಿ ಅನುದಾನ ಪಡೆದ ಇತರ ವಿಶ್ವವಿದ್ಯಾಲಯಗಳು 2ನೇ ಕಂತಿನ ಕೆಲಸವನ್ನೂ ಪೂರ್ಣಗೊಳಿಸುವ ಹಂತದಲ್ಲಿವೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.