ADVERTISEMENT

PU Exam Results: ದಾಖಲೆ ಜಿಗಿತ, 5.52 ಲಕ್ಷ ವಿದ್ಯಾರ್ಥಿಗಳು ತೇರ್ಗಡೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಪದವಿಪೂರ್ವ ಶಿಕ್ಷಣದ ಇತಿಹಾಸದಲ್ಲಿಯೇ ಈ ಬಾರಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ದಾಖಲೆಯ ಫಲಿತಾಂಶ ಬಂದಿದೆ. ದ್ವಿತೀಯ ಪಿಯು ಪರೀಕ್ಷೆಯಲ್ಲಿ 2023ರಲ್ಲಿ ಬದಲಾವಣೆ (ಬಹು ಆಯ್ಕೆ ಪ್ರಶ್ನೆಗಳು) ತಂದಿದ್ದು ಹಾಗೂ ಇದೇ ಮೊದಲ ಬಾರಿ ಎಲ್ಲ ವಿಷಯಗಳಿಗೂ ಆಂತರಿಕ ಮೌಲ್ಯಮಾಪನ ಪರಿಚಯಿಸಿದ್ದು ಈ ದಾಖಲೆ ಫಲಿತಾಂಶಕ್ಕೆ ಕಾರಣ.

2023-24ನೇ ಸಾಲಿನ ಫಲಿತಾಂಶವನ್ನು ಬುಧವಾರ ಪ್ರಕಟಿಸಲಾಗಿದ್ದು, 5.52 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಶೇಕಡ 81.15ರಷ್ಟು ಫಲಿತಾಂಶ ದೊರೆತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 6.48ರಷ್ಟು ಹೆಚ್ಚಳವಾಗಿದೆ. 

ADVERTISEMENT

ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿ, ಫಲಿತಾಂಶದಲ್ಲಿ ಮುನ್ನಡೆ ಸಾಧಿಸುವ ತಮ್ಮ ಹೆಗ್ಗಳಿಕೆಯನ್ನು ಉಳಿಸಿಕೊಂಡಿದ್ದಾರೆ. ಪರೀಕ್ಷೆ ಬರೆದಿದ್ದ 3.59 ಲಕ್ಷ ವಿದ್ಯಾರ್ಥಿನಿಯರಲ್ಲಿ 3.05 ಲಕ್ಷ (ಶೇ 84.87) ವಿದ್ಯಾರ್ಥಿನಿಯರು ಹಾಗೂ 3.21 ಲಕ್ಷ ಬಾಲಕರಲ್ಲಿ 2.47 ಲಕ್ಷ (76.98) ಬಾಲಕರು ತೇರ್ಗಡೆಯಾಗಿದ್ದಾರೆ. ಈ ಬಾರಿಯ ಫಲಿತಾಂಶದ ಮತ್ತೊಂದು ವಿಶೇಷ ಎಂದರೆ ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಮಬಲ. ಪರೀಕ್ಷೆಗೆ ಹಾಜರಾಗಿದ್ದ 1.48 ಲಕ್ಷ ಗ್ರಾಮೀಣರಲ್ಲಿ 1.20 ಲಕ್ಷ (ಶೇ 81.31) ತೇರ್ಗಡೆಯಾಗಿದ್ದಾರೆ. ನಗರ ಪ್ರದೇಶದ 5.32 ಲಕ್ಷ ವಿದ್ಯಾರ್ಥಿಗಳಲ್ಲಿ 4.32 ಲಕ್ಷ (ಶೇ 81.10) ತೇರ್ಗಡೆಯಾಗಿದ್ದಾರೆ. ಕನ್ನಡ ಮಾಧ್ಯಮದವರಿಗಿಂತ (ಶೇ 70.41) ಇಂಗ್ಲಿಷ್‌ ಮಾಧ್ಯಮದ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣವು ಶೇ 17ರಷ್ಟು ಹೆಚ್ಚು. 

ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆ ಅತ್ಯಧಿಕ ತೇರ್ಗಡೆಯ ಫಲಿತಾಂಶ (ಶೇ 97.37) ಪಡೆಯುವ ಮೂಲಕ ಮೊದಲ ಸ್ಥಾನ ಉಳಿಸಿಕೊಂಡಿದೆ. ಉಡುಪಿ ಎರಡನೇ ಸ್ಥಾನದಲ್ಲಿದ್ದರೆ (ಶೇ 96.80), ಗದಗ ಜಿಲ್ಲೆ (ಶೇ 72.86) ಕೊನೆಯ ಸ್ಥಾನದಲ್ಲಿದೆ. ಮಾರ್ಚ್‌1ರಿಂದ 22ರವರೆಗೆ 1,124 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 36 ಸಾವಿರ ಪುನರಾವರ್ತಿತರು, 22 ಸಾವಿರ ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ 6.81 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ವಿಜ್ಞಾನ ವಿದ್ಯಾರ್ಥಿಗಳೇ ಅಧಿಕ: ವಿಜ್ಞಾನ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ತೇರ್ಗಡೆಯಾಗಿದ್ದಾರೆ. ಶೇ 89.96ರಷ್ಟು ತೇರ್ಗಡೆಯಾಗಿ, ಒಟ್ಟಾರೆ ಫಲಿತಾಂಶಕ್ಕಿಂತ 8.71ರಷ್ಟು ಹೆಚ್ಚು ಮುಂದಿದ್ದಾರೆ. ಕಲಾ ವಿದ್ಯಾರ್ಥಿಗಳು ಶೇ 68.36 ಹಾಗೂ ವಾಣಿಜ್ಯ ವಿದ್ಯಾರ್ಥಿಗಳು ಶೇ 80.94ರಷ್ಟು ತೇರ್ಗಡೆಯಾಗಿದ್ದಾರೆ.  

1.53 ಲಕ್ಷ ವಿದ್ಯಾರ್ಥಿಗಳು ಶೇ 85ಕ್ಕಿಂತ ಹೆಚ್ಚು ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ, 2.89 ಲಕ್ಷ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 72,098 ವಿದ್ಯಾರ್ಥಿಗಳು ದ್ವಿತೀಯ ಹಾಗೂ 37,489 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 

ಖಾಸಗಿ ಕಾಲೇಜುಗಳ ಮೇಲುಗೈ: ಫಲಿತಾಂಶದಲ್ಲಿ ಖಾಸಗಿ ಕಾಲೇಜುಗಳೇ ಈ ಬಾರಿಯೂ ಮೇಲುಗೈ ಸಾಧಿಸಿವೆ. ಖಾಸಗಿ ಕಾಲೇಜುಗಳು ಶೇ 90.46ರಷ್ಟು ಫಲಿತಾಂಶ ಪಡೆದರೆ, ಅನುದಾನಿತ ಕಾಲೇಜುಗಳಿಗೆ ಶೇ 79.82 ಹಾಗೂ ಸರ್ಕಾರಿ ಕಾಲೇಜುಗಳಿಗೆ ಶೇ 75.29ರಷ್ಟು ಫಲಿತಾಂಶ ಬಂದಿದೆ.

35 ಕಾಲೇಜುಗಳಿಗೆ ಶೂನ್ಯ ಫಲಿತಾಂಶ

ರಾಜ್ಯದಲ್ಲಿ 35 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ. ಅವುಗಳಲ್ಲಿ 26 ಖಾಸಗಿ ಕಾಲೇಜುಗಳು. ಎರಡು ಸರ್ಕಾರಿ, ಆರು ಅನುದಾನಿತ ಹಾಗೂ ಒಂದು ವಿಭಜಿತ ಕಾಲೇಜು ಶೂನ್ಯ ಫಲಿತಾಂಶ ಪಡೆದಿವೆ.

345 ಖಾಸಗಿ, 91 ಸರ್ಕಾರಿ ಹಾಗೂ 26 ಅನುದಾನಿತ ಸೇರಿದಂತೆ 463 ಕಾಲೇಜುಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ.

2ನೇ ಪರೀಕ್ಷೆಗೆ ಶುಲ್ಕ: ಏ.17 ಕೊನೆ ದಿನ

ತೇರ್ಗಡೆಯಾಗದ ವಿದ್ಯಾರ್ಥಿಗಳು ಫಲಿತಾಂಶ ಉತ್ತಮಪಡಿಸಿಕೊಳ್ಳಲು ಪರೀಕ್ಷೆ–2ಕ್ಕೆ ಅರ್ಜಿ ಸಲ್ಲಿಸಬಹುದು. ಎರಡು ಪರೀಕ್ಷೆಗಳಲ್ಲಿ ಯಾವುದರಲ್ಲಿ ಹೆಚ್ಚು ಅಂಕ ಇರುತ್ತದೆಯೋ ಆ ಅಂಕಪಟ್ಟಿ ಪಡೆಯಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷೆ ಎನ್‌.ಮಂಜುಶ್ರೀ ಹೇಳಿದರು.

ಮೊದಲ ಹಾಗೂ ಎರಡನೇ ಪರೀಕ್ಷೆಯಲ್ಲಿ ಯಾವ ಯಾವ ವಿಷಯಗಳಲ್ಲಿ ಹೆಚ್ಚು ಅಂಕ ಬಂದಿರುತ್ತದೆಯೋ ಅದನ್ನೇ ಪಡೆಯಬಹುದು. ಎರಡೂ ಪರೀಕ್ಷೆಗಳ ಅಂಕಗಳು ತೃಪ್ತಿಯಾಗದಿದ್ದರೆ ಮೂರನೇ ಪರೀಕ್ಷೆ ತೆಗೆದುಕೊಳ್ಳಬಹುದು. ಹಾಗೆಯೇ, ಅನುತ್ತೀರ್ಣರಾದವರು ಮರು ಪರೀಕ್ಷೆ ಬರೆಯಬಹುದು. ಮರು ಮೌಲ್ಯಮಾಪನಕ್ಕೂ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ಪರೀಕ್ಷೆ–2ಕ್ಕೆ ಅರ್ಜಿ ಸಲ್ಲಿಸಲು ಮರುಮೌಲ್ಯಮಾಪನದ ಫಲಿತಾಂಶದವರೆಗೆ ಕಾಯುವ ಅಗತ್ಯವಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಿರಂತರ ಓದಿನ ನಡುವೆ ಸ್ವಲ್ಪ ಬಿಡುವು ಮಾಡಿಕೊಂಡು ಪಠ್ಯೇತರ ಚಟುವಟಿಕೆಗಳಿಗೆ ಗಮನ ನೀಡುತ್ತಿದ್ದೆ. ಇದರಿಂದ ಮತ್ತೆ ಓದಿನ ಕಡೆ ಗಮನ ಕೇಂದ್ರೀಕರಿಸಲು ಸಾಧ್ಯವಾಯಿತು. ಮುಂದೆ ಮನೋವಿಜ್ಞಾನದಲ್ಲಿ ಉನ್ನತ ಶಿಕ್ಷಣ ಪಡೆಯುವ ಕನಸಿದೆ.
–ಡಿ. ಮೇಧಾ, ಕಲಾವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.