ಬೆಂಗಳೂರು: ರಾಜ್ಯಪಾಲ ವಜುಭಾಯಿ ವಾಲಾ ಅವರು ಏಳು ನೂತನ ಸಚಿವರಿಗೆ ಬುಧವಾರ ಅಧಿಕಾರಪದ ಹಾಗೂ ಗೋಪ್ಯತೆ ಪ್ರಮಾಣವಚನ ಬೋಧಿಸಿದರು.
ರಾಜಭವನದ ಗಾಜಿನಮನೆಯಲ್ಲಿ ಮಧ್ಯಾಹ್ನ 3.50 ಕ್ಕೆ ಪದ ಗ್ರಹಣ ನಡೆಯಿತು. ಎಲ್ಲರೂ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ಕ್ರಮವಾಗಿ ಉಮೇಶ ಕತ್ತಿ, ಮುರುಗೇಶ ನಿರಾಣಿ, ಅರವಿಂದ ಲಿಂಬಾವಳಿ, ಎಂಟಿಬಿ ನಾಗರಾಜ್, ಸಿ.ಪಿ.ಯೋಗೇಶ್ವರ್, ಎಸ್.ಅಂಗಾರ ಅವರು ಪ್ರಮಾಣ ಸ್ವೀಕರಿಸಿದರು.
ವಿಧಾನ ಪರಿಷತ್ ಸದಸ್ಯರಾದ ಎಂ.ಟಿ.ಬಿ. ನಾಗರಾಜ್, ಸಿ. ಪಿ.ಯೋಗೇಶ್ವರ್ ಹಾಗೂ ಆರ್. ಶಂಕರ್ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಇದನ್ನೂ ಓದಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ; ನೂತನ ಸಚಿವರ ಕಿರು ಪರಿಚಯ
ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರದ ಎಸ್. ಅಂಗಾರ ಮೊದಲ ಬಾರಿಗೆ ಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಬೆಂಗಳೂರಿನ ಮಹದೇವಪುರ ಕ್ಷೇತ್ರ ಶಾಸಕ ಅರವಿಂದ ಲಿಂಬಾವಳಿ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಇದನ್ನೂ ಓದಿ: ಪ್ರಭಾವ, ಒತ್ತಡಕ್ಕೆ ಮಣೆ; ಯುವ ಶಾಸಕರಿಗೆ ಸಿಗದ ಮನ್ನಣೆ
ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನ ಸಭಾಕ್ಷೇತ್ರದ ಶಾಸಕ ಮುರುಗೇಶ್ ನಿರಾಣಿ ಹಾಗೂ ಹುಕ್ಕೇರಿ ವಿಧಾನ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಅವರು ದೇವರು ಹಾಗೂ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪ ಮುಖ್ಯಮಂತ್ರಿಗಳಾದ ಡಾ.ಅಶ್ವಥ್ ನಾರಾಯಣ್ ಹಾಗೂ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ. ಸೋಮಣ್ಣ, ಕಂದಾಯ ಸಚಿವ ಆರ್. ಅಶೋಕ ಸೇರಿದಂತೆ ಅನೇಕ ಸಚಿವರುಗಳು ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮುಂತಾದವರು ಇದ್ದರು.
ನೂತನ ಸಚಿವರು ಪ್ರಮಾಣ ಸ್ವೀಕರಿಸುವಾಗ ಅವರ ಅಭಿಮಾನಿಗಳು ಜೈಕಾರ ಹಾಕಿ ಹರ್ಷೋದ್ಘಾರ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.