ADVERTISEMENT

890 ಪ್ರಶ್ನೆಗೆ 283ಕ್ಕಷ್ಟೇ ಉತ್ತರ: ಕ್ರಮಕ್ಕೆ ಹೊರಟ್ಟಿ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 15:28 IST
Last Updated 24 ಜುಲೈ 2024, 15:28 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಬೆಂಗಳೂರು: ವಿಧಾನಪರಿಷತ್‌ನಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರ ನೀಡದ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು, ಅದರ ವರದಿಯನ್ನು ಗುರುವಾರ ಸಲ್ಲಿಸಬೇಕು ಎಂದು ಸಭಾನಾಯಕ ಬೋಸರಾಜು ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರು.

ಜೆಡಿಎಸ್‌ನ ಎಸ್.ಎಲ್‌. ಬೋಜೇಗೌಡ ವಿಷಯ ಪ್ರಸ್ತಾಪಿಸಿ, ‘ಪರಿಷತ್‌ ಕಲಾಪ ಕಳೆದ ಸೋಮವಾರ ಆರಂಭವಾದಾಗಿನಿಂದ ಈವರೆಗೆ 890 ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಲ್ಲಿ 283 ಉತ್ತರಗಳಷ್ಟೇ ಬಂದಿವೆ. 607 ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿಲ್ಲ. ನಾವೇಕೆ ಪ್ರಶ್ನೆ ಕೇಳಬೇಕು? ಯಾಕೀ ನಿರ್ಲಕ್ಷ್ಯ’ ಎಂದು ಪ್ರಶ್ನಿಸಿದರು.

‘ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರೆಲ್ಲರೂ ಪ್ರಶ್ನೆ ಕೇಳಿದ್ದಾರೆ. ಉತ್ತರ ಕೊಡಿಸುವ ಭರವಸೆಯನ್ನು ಸಭಾಪತಿಯವರು ನೀಡಿದ್ದಾರೆ. ಆದರೂ ಉತ್ತರ ಸಿಕ್ಕಿಲ್ಲ’ ಎಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ, ‘ಸಭಾನಾಯಕರೇ ಇದು ಅತ್ಯಂತ ಪ್ರಮುಖವಾದ ಜವಾಬ್ದಾರಿ. ಪ್ರತಿದಿನ ಏಕೆ ಉತ್ತರ ಕೊಡಿಸುತ್ತಿಲ್ಲ? ನಾನು ಸಾಕಷ್ಟು ಸೂಚನೆ ಕೊಟ್ಟಿದ್ದೇನೆ. ಅಧಿಕಾರಿಗಳು ಇಲ್ಲೇ ಇರುತ್ತಾರಲ್ಲಾ? ಯಾವ ಅಧಿಕಾರಿಗಳು ಉತ್ತರ ಕೊಟ್ಟಿಲ್ಲವೋ ಅವರ ಮೇಲೆ ಕ್ರಮ ಕೈಗೊಳ್ಳಿ. ಅದರ ವರದಿಯನ್ನು ಸದನಕ್ಕೆ ಸಲ್ಲಿಸಿ’ ಎಂದು ಆದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.