ಬೆಂಗಳೂರು: ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಇದೇ 13ರಂದು ನಡೆಯುವ ಉಪಚುನಾವಣೆಯ ಪ್ರಚಾರಕ್ಕೆ ಬಿಜೆಪಿ ಸಿದ್ಧಪಡಿಸಿರುವ ತಾರಾ ಪ್ರಚಾರಕರ ಪಟ್ಟಿಯಲ್ಲಿ ಭಿನ್ನಮತೀಯರಿಗೆ ಸ್ಥಾನ ನೀಡದೇ ಇರುವುದು ಚರ್ಚೆಗೆ ಕಾರಣವಾಗಿದೆ.
ಈ ಮೂರು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿರುವ 40 ಜನರ ಪಟ್ಟಿಯನ್ನು ಬಿಜೆಪಿ ಈಗಾಗಲೇ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಆದರೆ, ಇದರಲ್ಲಿ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಪ್ರತಾಪ್ ಸಿಂಹ, ಕುಮಾರ ಬಂಗಾರಪ್ಪ ಸೇರಿ ಭಿನ್ನ ಗುಂಪಿನ ಯಾವುದೇ ನಾಯಕರ ಹೆಸರು ಇಲ್ಲ.
ಉತ್ತರ ಕರ್ನಾಟಕ ಭಾಗದ ನಾಯಕರಾದ ಯತ್ನಾಳ ಮತ್ತು ರಮೇಶ ಜಾರಕಿಹೊಳಿಯವರ ಹೆಸರು ಸೇರಿಸಿಲ್ಲ. ಆ ಭಾಗದಲ್ಲಿ ಎರಡು ಕ್ಷೇತ್ರಗಳಲ್ಲಿ (ಸಂಡೂರು, ಶಿಗ್ಗಾವಿ) ಚುನಾವಣೆ ನಡೆಯಲಿದೆ. ‘ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೂ ಜಾಗ ನೀಡಿಲ್ಲ. ಚನ್ನಪಟ್ಟಣದಲ್ಲಿ ಇವರನ್ನು ಬಳಸಿಕೊಳ್ಳಬಹುದಿತ್ತು’ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ರೈತರ ಜಮೀನುಗಳಿಗೆ ವಕ್ಫ್ ಆಸ್ತಿ ಎಂದು ನೋಟಿಸ್ ನೀಡಿದ್ದರಿಂದಾಗಿ ರೈತರ ಅಹವಾಲು ಕೇಳಲು ರಚಿಸಿದ್ದ ನಿಯೋಗದಲ್ಲೂ ಯತ್ನಾಳ ಹೆಸರಿರಲಿಲ್ಲ. ಈ ಬಗ್ಗೆ ಟೀಕೆಗಳು ಕೇಳಿ ಬಂದ ಬಳಿಕ ನಿಯೋಗವನ್ನು ಪರಿಷ್ಕರಿಸಿ ಯತ್ನಾಳ ಅವರ ಹೆಸರು ಸೇರಿಸಲಾಗಿತ್ತು.
ಲೋಕಸಭಾ ಚುನಾವಣೆ ಬಳಿಕ ಭಿನ್ನರು ರಾಜ್ಯದ ವಿವಿಧ ಕಡೆಗಳಲ್ಲಿ ಎರಡು–ಮೂರು ಸಭೆಗಳನ್ನು ನಡೆಸಿ, ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದರು. ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದೂ ಒತ್ತಾಯಿಸಿದ್ದರು. ಆರ್‌ಎಸ್‌ಎಸ್ ಮುಖಂಡರು ಬಿಕ್ಕಟ್ಟನ್ನು ಬಗೆಹರಿಸಲು ಮಧ್ಯ ಪ್ರವೇಶಿಸಿದರೂ ಸಮಸ್ಯೆ ಇತ್ಯರ್ಥಗೊಂಡಿಲ್ಲ. ಇದೀಗ ಉಪಚುನಾವಣಾ ಪ್ರಕ್ರಿಯೆಯಲ್ಲಿ ಇವರಲ್ಲಿ ಯಾರೊಬ್ಬರನ್ನೂ ತೊಡಗಿಸಿಕೊಳ್ಳದೇ ಇರುವುದು, ಒಳಜಗಳ ಮತ್ತೆ ಮುನ್ನೆಲೆಗೆ ಬರಲು ಕಾರಣವಾಗಬಹುದು ಎಂಬ ಚರ್ಚೆ ಬಿಜೆಪಿಯಲ್ಲಿ ನಡೆಯುತ್ತಿದೆ.
ಪ್ರಚಾರಕರ ಪಟ್ಟಿಯಲ್ಲಿರುವ ಪ್ರಮುಖರು: ಬಿ.ಎಸ್.ಯಡಿಯೂರಪ್ಪ, ರಾಧಾ ಮೋಹನ್ ದಾಸ್ ಅಗರವಾಲ್, ಸುಧಾಕರ ರೆಡ್ಡಿ, ಬಿ.ವೈ.ವಿಜಯೇಂದ್ರ, ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ, ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಪ್ರಲ್ಹಾದ ಜೋಶಿ, ನಳಿನ್ ಕುಮಾರ್ ಕಟೀಲ್, ಗೋವಿಂದ ಕಾರಜೋಳ, ಸಿ.ಎನ್.ಅಶ್ವತ್ಥನಾರಾಯಣ, ಸಿ.ಟಿ.ರವಿ, ಬಿ.ಶ್ರೀರಾಮುಲು, ಜಗದೀಶ ಶೆಟ್ಟರ್, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ವಿ.ಸುನಿಲ್‌ಕುಮಾರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.