ನವದೆಹಲಿ/ಹಾಸನ: ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಜೆಡಿಎಸ್‌ನ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅವರು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಮ್ಮುಖದಲ್ಲಿ ಶನಿವಾರ ಬಿಜೆಪಿ ಸೇರಿದರು.
ರಾಮಸ್ವಾಮಿ ಅವರು ವರ್ಷಗಳಿಂದ ಜೆಡಿಎಸ್ ರಾಜ್ಯ ನಾಯಕರ ಜತೆಗೆ ಅಂತರ ಕಾಯ್ದುಕೊಂಡಿದ್ದರು. ಅವರು ಶಾಸಕ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದರು. ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಸ್ವಾಗತಿಸಿದ ಠಾಕೂರ್, ‘ರಾಮಸ್ವಾಮಿ ಸೇರ್ಪಡೆಯಿಂದ ಪಕ್ಷ ಇನ್ನಷ್ಟು ಬಲಗೊಳ್ಳಲಿದೆ. ಭ್ರಷ್ಟಾಚಾರ ಹಾಗೂ ಭೂಗಳ್ಳರ ವಿರುದ್ಧದ ನಿರಂತರ ಹೋರಾಟದ ಮೂಲಕ ರಾಮಸ್ವಾಮಿ ಅಪಾರ ಗೌರವ ಗಳಿಸಿದ್ದಾರೆ. ನಮ್ಮ ಪಕ್ಷಕ್ಕೆ ಸೇರ್ಪಡೆಯಾದ ಬಳಿಕವೂ ರಾಜ್ಯದ ಜನರ ಹಿತದೃಷ್ಟಿಯಿಂದ ತಮ್ಮ ಒಳ್ಳೆಯ ಕೆಲಸಗಳನ್ನು ಮುಂದುವರಿಸಲಿದ್ದಾರೆ’ ಎಂದರು.
ಅರಕಲಗೂಡು ಕ್ಷೇತ್ರದಿಂದ ರಾಮಸ್ವಾಮಿ ಅವರನ್ನು ಬಿಜೆಪಿ ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಒಟ್ಟು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರಾಮಸ್ವಾಮಿ, ‘ನಾನು ಟಿಕೆಟ್ ಅಪೇಕ್ಷೆ ಇಟ್ಟುಕೊಂಡು ಬಿಜೆಪಿಗೆ ಬಂದಿಲ್ಲ. ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧೆ ಮಾಡುವೆ. ಸಣ್ಣ ಕಪ್ಪು ಚುಕ್ಕೆ ಬಾರದಂತೆ ಮುಂದೆಯೂ ಕೆಲಸ ಮಾಡುವೆ’ ಎಂದರು.
‘ನಾನು ಯಾವುದೇ ಷರತ್ತು ಇಲ್ಲದೆ ಬಿಜೆಪಿಗೆ ಸೇರಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಜತೆಗೆ ಕೆಲಸ ಮಾಡಲು ಬಹಳ ಸಂತೋಷ ಆಗುತ್ತಿದೆ’ ಎಂದು ಅವರು ಹೇಳಿದರು.
‘ಬೆಂಗಳೂರಿನ ಭೂ ಅಕ್ರಮದ ಬಗ್ಗೆ 2006–07ರಲ್ಲಿ ವರದಿ ಸಲ್ಲಿಸಿದ್ದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ 41 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ಭೂಗಳ್ಳರು ಕಬಳಿಸಿದ್ದಾರೆ ಎಂಬುದನ್ನು ಉಲ್ಲೇಖಿಸಿದ್ದೆ. ಈ ಹಗರಣದಲ್ಲಿ ಸಾಕಷ್ಟು ಸರ್ಕಾರಿ ನೌಕರರು ಹಾಗೂ ರಾಜಕಾರಣಿಗಳು ಭಾಗಿಯಾಗಿದ್ದಾರೆ’ ಎಂದರು.
ಬಳಿಕ ಅವರು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದರು. ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತೇನೆ’ ಎಂದು ರಾಮಸ್ವಾಮಿ ತಿಳಿಸಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಎ. ಮಂಜು ಅವರು ಕಳೆದ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿಗೆ ಸೇರಿದ್ದರು. ಹಾಸನ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದು ಸೋತಿದ್ದರು. ಅವರು ಇತ್ತೀಚೆಗೆ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದರು. ಅವರು ಅರಕಲಗೂಡು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ
ಇತ್ತೀಚೆಗೆ ಪ್ರಕಟಿಸಿದ್ದರು. ಈ ಕ್ಷೇತ್ರಕ್ಕೆ ಅಭ್ಯರ್ಥಿಯ ಹೆಸರನ್ನು ಕಾಂಗ್ರೆಸ್ ಇನ್ನೂ ಘೋಷಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.