ಶಿರಸಿ: ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಅರಸಿಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಭಾನುವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯ ದಾರಿ ಸುಗಮ ಮಾಡಿಕೊಂಡರು.
ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶಿರಸಿ ಕಚೇರಿಗೆ ಬಂದ ಶಿವಲಿಂಗೇಗೌಡ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಶಿವಲಿಂಗೇಗೌಡರ ಜೊತೆ 300ಕ್ಕೂ ಅಧಿಕ ಬೆಂಬಲಿಗರು ಆಗಮಿಸಿದ್ದರು.
2008ರಲ್ಲಿ ಮೊದಲ ಬಾರಿ ಶಾಸನಸಭೆಗೆ ಆಯ್ಕೆಯಾಗಿದ್ದ ಅವರು 2018ರ ಚುನಾವಣೆಯಲ್ಲಿ ಅರಸಿಕೆರೆ ವಿಧಾನಸಭೆ ಕ್ಷೇತ್ರದಲ್ಲಿ 93,986 ಮತಗಳನ್ನು ಪಡೆದು ಜಯಗಳಿಸಿದ್ದರು. ಪಕ್ಷದಲ್ಲಿ ನಿರೀಕ್ಷಿತ ಮನ್ನಣೆ, ಸ್ಥಾನಮಾನ ಸಿಗದ ಕಾರಣ ಅವರು ಜೆಡಿಎಸ್ ತೊರೆಯಲು ನಿರ್ಧರಿಸಿದ್ದರು.
ನಾಯಕರ ಜೊತೆ ಭಿನ್ನಮತ ಇತ್ತು. ಸಾಕಷ್ಟು ಮಾತುಕತೆಯ ನಂತರವೂ ಯಾವುದೇ ಪ್ರಯೋಜನವಾಗಲಿಲ್ಲ. ಪಕ್ಷ ಬಿಡುವುದು ಇಲ್ಲವೇ ಪಕ್ಷಾಂತರವೇ ಉಳಿದ ಮಾರ್ಗವಾಗಿದೆ. ಕ್ಷೇತ್ರದ ಜನರ ಅಭಿಪ್ರಾಯದಂತೆ ಕಾಂಗ್ರೆಸ್ ಸೇರಲಿದ್ದೇನೆ ಎಂದರು.
ಕ್ಷೇತ್ರಕ್ಕೆ ತೆರಳಿ ಜನರ ಬಳಿ ಬಹುಮತ ಕೇಳುತ್ತೇನೆ. ಈಗಾಗಲೇ ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ನನ್ನ ಹೆಸರು ಅಂತಿಮವಾಗಿದ್ದು, ನಿಶ್ಚಿತವಾಗಿ ಗೆಲುವು ಪಡೆಯುತ್ತೇನೆ. ಜೆಡಿಎಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎಂದರು.
ರಾಜಕೀಯದಲ್ಲಿ ಯಾರು ಬೇಕಾದರೂ ಪಕ್ಷಾಂತರ ಮಾಡುತ್ತಾರೆ. ಅಣ್ಣತಮ್ಮಂದಿರೇ ಋಣ ತೀರಿದ ಮೇಲೆ ಅವರವರ ದಾರಿಗೆ ಹೋಗಿತ್ತಾರೆ. ನಾನು ಕ್ಷೇತ್ರದ ಜನರು ಹೇಳಿದಂತೆ ರಾಜೀನಾಮೆ ನೀಡಿದ್ದೇನೆ. ಪಕ್ಷಾಂತರದ ಬಗ್ಗೆ ಯಾರೂ ತಪ್ಪು ತಿಳಿಯಬಾರದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಯಾರು ಬೇಕಾದರೂ ಸವಾಲು ಹಾಕಲಿ, ಏನಾದರೂ ಮಾಡಲಿ. ನಾನು ಮಾತ್ರ ಸುಮ್ಮನಿದ್ದು ಎಲ್ಲವನ್ನೂ ಕ್ಷೇತ್ರದ ಜನರಿಗೆ ಬಿಡುತ್ತೇನೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.