ADVERTISEMENT

ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ: ಪರೋಕ್ಷವಾಗಿ ಜಮೀರ್ ವಿರುದ್ಧ ಡಿಕೆಶಿ ಗುಡುಗು

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 6:44 IST
Last Updated 23 ಜುಲೈ 2022, 6:44 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ‘ನನ್ನ ಲೆವೆಲ್‌ಗೆ ಮಾತನಾಡುವವರ ವಿಚಾರ ನಾನು ಮಾತನಾಡುತ್ತೇನೆ. ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಬಾಯಿ ಮುಚ್ಚಿಕೊಂಡು ಮಾಡಬೇಕು. ಎಲ್ಲರಿಗೂ ನಾನು ಈ ಮಾತು ಹೇಳುತ್ತಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುಡುಗಿದರು.

ಮುಖ್ಯಮಂತ್ರಿ ಸ್ಥಾನ ವಿಚಾರವಾಗಿ ಪಕ್ಷದ ಶಾಸಕ ಜಮೀರ್ ಅಹ್ಮದ್ ನೀಡಿರುವ ಹೇಳಿಕೆ ಪ್ರತಿಕ್ರಿಯಿಸಿದ ಅವರು, ‘ಪಕ್ಷದ ಬಗ್ಗೆ ನಿಜವಾಗಲೂ ಆಸಕ್ತಿ ಇದ್ದರೆ ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಿ. ಹೆಚ್ಚಿನ ಜನರನ್ನು ಪಕ್ಷಕ್ಕೆ ಕರೆ ತರುವತ್ತ ಗಮನಹರಿಸಿ’ಎಂದರು.

‘ಎಲ್ಲರೂ ತಮ್ಮ ಸಮುದಾಯಗಳನ್ನು ಸಂಘಟನೆ ಮಾಡಿ, ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು’ಎಂದೂ ಅವರು ಸಲಹೆ ನೀಡಿದರು.

ADVERTISEMENT

ಮುಸಲ್ಮಾನರ ಸಲೂನ್ ಬಂದ್ ಮಾಡಿಸಬೇಕು ಎಂಬ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾನು ಪ್ರಮೋದ್ ಮುತಾಲಿಕ್ ಅವರಿಗೆ ಉತ್ತರ ನೀಡುವುದಿಲ್ಲ. ರಾಜ್ಯದಲ್ಲಿ ಸಂವಿಧಾನ ಬದ್ಧವಾಗಿ ಎಲ್ಲರಿಗೂ ರಕ್ಷಣೆ ನೀಡುತ್ತೇವೆ ಎಂದು ಪ್ರಮಾಣ ಮಾಡಿರುವ ಮುಖ್ಯಮಂತ್ರಿ, ಸಚಿವರು ಈ ಬಗ್ಗೆ ಉತ್ತರ ನೀಡಬೇಕು’ಎಂದರು.

‘ಇದೆಲ್ಲವನ್ನು ಬಿಜೆಪಿ ಹಾಗೂ ಬಿಜೆಪಿ ಸರ್ಕಾರವೇ ಅವರ ಮೂಲಕ ಹೇಳಿಸುತ್ತಿದೆ. ಹಳೇ ಮೈಸೂರು ಸೇರಿದಂತೆ ಅನೇಕ ಭಾಗಗಳಲ್ಲಿ ಅವರು ಈ ರೀತಿ ಪ್ರಚೋದಿಸುತ್ತಿದ್ದಾರೆ. ಇದೆಲ್ಲದರ ಬಗ್ಗೆ ನಾನು ಈಗ ಮಾತನಾಡುವುದಿಲ್ಲ’ ಎಂದರು.

ಕೋಲಾರದಲ್ಲಿ ಬೇರೆ, ಬೇರೆ ಬಣಗಳ ಪ್ರತಿಭಟನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಕೋಲಾರದಲ್ಲಿ ಯಾವುದೇ ಬಣ ಇಲ್ಲ. ಸೋನಿಯಾ ಗಾಂಧಿ ಅವರಿಗೆ ರಕ್ಷಣೆ ಸಿಗಬೇಕು ಎಂದು ಎಲ್ಲರೂ ಹೋರಾಟ ಮಾಡುತ್ತಿದ್ದೇವೆ. ನಾವು ಎಲ್ಲ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡಲು ಸೂಚಿಸಿದ್ದು, ಅವರೂ ಮಾಡಿದ್ದಾರೆ’ ಎಂದು ಉತ್ತರಿಸಿದರು.

‘ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ಸ್ಪರ್ಧೆಯ ಮಧ್ಯೆ ನಾನು‌ ಹೋಗುವುದಿಲ್ಲ, ನನ್ನದೇ ಆದ ಪ್ರತ್ಯೇಕ ಗುರುತು ಇದೆ’ಎಂಬ ಎಂ.ಬಿ. ಪಾಟೀಲ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘224 ಕ್ಷೇತ್ರಗಳಲ್ಲಿ ಗೆಲ್ಲುವ ಎಲ್ಲರೂ ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಟ್ಟರೆ ತಪ್ಪಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.