ಬೆಂಗಳೂರು: ರಾಜ್ಯದ ಜನರ ಆಶೋತ್ತರಗಳಿಗೆ ತಕ್ಕಂತೆ ಪ್ರಣಾಳಿಕೆ ತಯಾರಾಗಲಿದೆ. ವಿರೋಧ ಪಕ್ಷ ಗಳಂತೆ ಜನರ ದಿಕ್ಕು ತಪ್ಪಿಸುವ ಪ್ರಣಾಳಿಕೆ ಮಾಡುವುದಿಲ್ಲ ಎಂದು ಬಿಜೆಪಿ ಪ್ರಣಾಳಿಕೆ ತಯಾರಿ ಸಲಹಾ ಅಭಿ ಯಾನದ ಸಂಚಾಲಕ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಜನರ ಬದುಕು ಕಟ್ಟಿಕೊಡುವ ಯೋಜನೆಗಳಿರುವ ಪ್ರಣಾಳಿಕೆ ತಯಾ ರಾಗಲಿದೆ ಎಂದು ಅವರು ಪಕ್ಷದ ಕಚೇರಿ ಯಲ್ಲಿ ಪ್ರಣಾಳಿಕೆ ಅಭಿಯಾನ ಸಮಿತಿ ಮೊದಲ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಪಕ್ಷದ ಪ್ರಣಾಳಿಕೆ ತಂಡವನ್ನು ಭೇಟಿಯಾಗಿ ಜಿಲ್ಲಾವಾರು, ತಾಲ್ಲೂಕು ವಾರು ಯಾರೆಲ್ಲ ತಂಡದಲ್ಲಿರಬೇಕು ಎಂದು ಚರ್ಚಿಸಲಾಗಿದೆ. ಪಕ್ಷದ ಕಚೇರಿ ಯಲ್ಲಿ ಸೋಮವಾರ ಮತ್ತೊಂದು ಸಭೆ ನಡೆಯಲಿದ್ದು, ಎಲ್ಲಾ ಜಿಲ್ಲೆಗಳ 200 ಕ್ಕೂ ಹೆಚ್ಚು ಮುಖಂಡರು ಸಭೆಯಲ್ಲಿ ಭಾಗವಹಿಸಿ ಸಲಹೆ ನೀಡಲಿದ್ದಾರೆ. ಪ್ರಣಾಳಿಕೆ ಶೀರ್ಷಿಕೆಯನ್ನು ಸದ್ಯವೇ ಅಂತಿಮವಾಗಲಿದೆ. ಮಹಿಳೆಯರು, ಯುವಜನತೆ, ವೃದ್ಧರು, ಅಂಗವಿಕಲರಿಗೆ ನೀಡಬೇಕಾದ ಕಾರ್ಯಕ್ರಮಗಳ ಬಗ್ಗೆ ನಿರ್ಧಾರವಾಗಲಿದೆ ಎಂದರು.
ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ಎಷ್ಟು ಗಂಟೆ ನಿರಂತರವಾಗಿ ವಿದ್ಯುತ್ ನೀಡಿದ್ದಾರೆ ಎಂಬುದನ್ನು ರೈತರಿಗೆ ಕೇಳಿದರೆ ಗೊತ್ತಾಗುತ್ತದೆ. ಬಿಜೆಪಿಯು
ರಚನಾತ್ಮಕವಾಗಿ ಆಲೋಚಿಸಿ ಕಾರ್ಯಕ್ರಮ ನೀಡಿ, ಜನರ ಜೀವನ ಗುಣಮಟ್ಟ ಉತ್ತಮಪಡಿಸುವ ಗುರಿ ಹೊಂದಿದೆ ಎಂದು ಸುಧಾಕರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.