ADVERTISEMENT

ಬಿಜೆಪಿ ಸರ್ಕಾರಕ್ಕೆ ಬರಿಗಾಲಲ್ಲಿ ನಡೆಯುವ ಮಕ್ಕಳ ಕಷ್ಟ ಅರ್ಥವಾಗಲ್ಲ: ಡಿಕೆಶಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2023, 12:46 IST
Last Updated 2 ಫೆಬ್ರುವರಿ 2023, 12:46 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ‘ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲು ರಾಜ್ಯ ಸರ್ಕಾರದ ಬಳಿ ಹಣ ಇದೆ. ಶೂ ಸಾಕ್ಸ್‌ ನೀಡಲು ಹಣವಿಲ್ಲವೇ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಶಾಲಾ ಮಕ್ಕಳಿಗೆ ಶೂ, ಸಾಕ್ಸ್‌ ವಿತರಣೆ ವಿಚಾರವಾಗಿ ‘ಪ್ರಜಾವಾಣಿ’ ವರದಿಯನ್ನು ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿರುವ ಅವರು, ‘ಉತ್ಸವಗಳಿಗೆ ಕೋಟಿ ಕೋಟಿ ಖರ್ಚು ಮಾಡುವ ರಾಜ್ಯ ಸರ್ಕಾರಕ್ಕೆ ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್‌ ನೀಡುವ ಯೋಗ್ಯತೆಯಿಲ್ಲವೇ ಎಂದು ಹೈಕೋರ್ಟ್‌ ಛೀಮಾರಿ ಹಾಕಿರುವುದರಲ್ಲಿ ಆಶ್ಚರ್ಯವೇನಿಲ್ಲ. ಹೊಟ್ಟೆ ತುಂಬಿದ ಈ ಸರ್ಕಾರಕ್ಕೆ ಬರಿಗಾಲಲ್ಲಿ ನಡೆಯುವ ಮಕ್ಕಳ ಕಷ್ಟ ಅರ್ಥವಾಗುತ್ತದೆಯೇ?’ ಎಂದು ಟೀಕಿಸಿದ್ದಾರೆ.

‘ಮಕ್ಕಳು ಶೂ, ಸಾಕ್ಸ್‌ಗಾಗಿ ಶಾಲೆಗೆ ಬರಲ್ಲ ಎನ್ನುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ಗೆ ಬಡ ಮಕ್ಕಳ ಸಂಕಷ್ಟ ಎಲ್ಲಿ ಅರ್ಥವಾಗಬೇಕು, ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲು ಸರ್ಕಾರದ ಬಳಿ ಹಣ ಇದೆ. ಶೂ, ಸಾಕ್ಸ್‌ ನೀಡಲು ಹಣವಿಲ್ಲವೇ? ನಮ್ಮ ಸರ್ಕಾರದ ಅವಧಿಯಲ್ಲಿ 47 ಲಕ್ಷ ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್ ಹಾಗೂ 5 ಲಕ್ಷ ಮಕ್ಕಳಿಗೆ ಸೈಕಲ್ ನೀಡಲಾಗಿತ್ತು’ ಎಂದು ರಾಜ್ಯ ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ಸರ್ಕಾರಿ ಶಾಲೆಗಳ ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ ಮತ್ತು ಶೂ ಒದಗಿಸಲು ಆಗದ ರಾಜ್ಯ ಸರ್ಕಾರಕ್ಕೆ ಉತ್ಸವಗಳನ್ನು ನಡೆಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲು ಮನಸ್ಸಿದೆ. ಆದರೆ, ಮಕ್ಕಳ ಹಕ್ಕು, ಶಿಕ್ಷಣಗಳ ವಿಚಾರದಲ್ಲಿ ತನ್ನ ಸಾಂವಿಧಾನಿಕ ಹೊಣೆಗಾರಿಕೆಯನ್ನು ನಿರ್ವಹಿಸಲು ಮಾತ್ರ ಆಗುತ್ತಿಲ್ಲ. ಅಧಿಕಾರಿಗಳಿಗಂತೂ ಮಾನ ಮರ್ಯಾದೆ, ಆತ್ಮಸಾಕ್ಷಿ ಯಾವುದೂ ಇಲ್ಲವಾಗಿದೆ. ಸರ್ಕಾರಿ ಶಾಲೆಗಳ ಮಕ್ಕಳ ಬಗ್ಗೆ ಅವರಲ್ಲಿ ಕಿಂಚಿತ್‌ ಮಾನವೀಯತೆಯೂ ಉಳಿದಿಲ್ಲ. ಈಗಲಾದರೂ ಕಣ್ಣು ತೆರೆದು ಸಮವಸ್ತ್ರ ಒದಗಿಸಲಿ...’

‘ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲುಚೀಲಗಳನ್ನು ನೀಡಬೇಕು ಎಂದು 2018ರ ಆಗಸ್ಟ್‌ನಲ್ಲಿ ಹೈಕೋರ್ಟ್ ಹೊರಡಿಸಿರುವ ಆದೇಶ ಪಾಲನೆಯಾಗಿಲ್ಲ’ ಎಂದು ಆರೋಪಿಸಿ ಕೊಪ್ಪಳ ಜಿಲ್ಲೆಯ ಮಾಸ್ಟರ್ ಮಂಜುನಾಥ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ ಕಿಡಿಕಾರಿದ ಪರಿಯಿದು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.