ಜೆಡಿಎಸ್– ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿಸಿ, ಬಿಜೆಪಿ ಸರ್ಕಾರ ಬರಲು ಕಾರಣರಾದ ಶಾಸಕರ ಕಣ್ಣು ‘ಹಸ್ತ’ದ ಮ್ಯಾಲೆ ಬಿದ್ದಿದೆಯಂತೆ. ಚುನಾವಣೆಯಲ್ಲಿ ತಮ್ಮ ಪಾಲಿಗೆ ಹಸ್ತದ ‘ಅಭಯ’ ಸಿಗುವುದೋ ಎಂಬ ನಿರೀಕ್ಷೆಯಲ್ಲಿ ಅಂತರಂಗದಲ್ಲೇ ‘ಕೈ–ಕೈ ಜೈ–ಜೈ’ ಎನ್ನುತ್ತಿದ್ದಾರಂತೆ.
ಹೀಗೊಂದು ಸುದ್ದಿ ಕಾಂಗ್ರೆಸ್– ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹರಿದಾಡುತ್ತಿದೆ. ‘ಪಕ್ಷಕ್ಕೆ ಕೈಕೊಟ್ಟು ವಲಸೆ ಹೋದವರನ್ನು ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಖುಲ್ಲಂಖುಲ್ಲಾ ಹೇಳಿರುವುದೇ ಅವರ ಒಂದು ಕಾಲದ ಆಪ್ತೇಷ್ಟರನ್ನು ಇಕ್ಕಟ್ಟಿಗೆ ಸಿಲುಕಿಸಿದೆಯಂತೆ. ಮರಳಿ ಯತ್ನವ ಮಾಡು ಎಂಬುದನ್ನು ಪಾಲಿಸುತ್ತಿರುವ ಕೆಲವರು, ತಮ್ಮ ಜಾತಿಗೆ ಸೇರಿದ, ನಾಯಕರ ಜತೆ ನಿಕಟ ಬಾಂಧವ್ಯ ಇರುವ ಶಾಸಕರನ್ನು ಸಂಪರ್ಕಿಸಿರುವ ಸಚಿವರೊಬ್ಬರು, ‘ಹೇಗಾದರೂ ಮಾಡಿ ಸಾಹೇಬರ ಭೇಟಿಗೆ ಅವಕಾಶ ಕೊಡಿಸಪ್ಪ’ ಎಂದು ದುಂಬಾಲು ಬಿದ್ದಿದ್ದಾರೆ. ಅದನ್ನು ನಾಯಕರ ಕಿವಿಗೆ ಹಾಕಿದಾಗ, ‘ಅಧಿಕಾರಕ್ಕಾಗಿ ಪಕ್ಷ ಬಿಟ್ಟು ಹೋಗುವಾಗ ಬುದ್ದಿ ಎಲ್ಲೋಗಿತ್ತಂತೆ. ಈಗ ಅವರ ಪರ ವಕಾಲತ್ ವಹಿಸಿಕೊಂಡು ಬಂದಿದ್ಯಾ. ನಡೀ ನಡೀ’ ಎಂದು ಗದರಿದರಂತೆ ಸಿದ್ದರಾಮಯ್ಯ.
ಈ ಸರ್ಕಾರದಲ್ಲಿ ಸಚಿವರಾಗಿರುವ ಕೆಲವರು ಹೇಗಾದರೂ ಮಾಡಿ ಮತ್ತೆ ಕೈ ಹಿಡಿಯಲು ಅಣಿಯಾಗಿದ್ದಾರೆ. ಪಕ್ಷದ ಪ್ರಭಾವಿಗಳು ಸೈ ಎಂದಿದ್ದಾರೆ. ಆದರೆ, ಸಿದ್ದರಾಮಯ್ಯನವರೇ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಗುಸುಗುಸು ಹಬ್ಬಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.