ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಮುಖಂಡರ ನಡುವಿನ ವಾಕ್ಸಮರವೂ ದಿನದಿಂದ ದಿನಕ್ಕೆ ಜೋರಾಗುತ್ತಿದೆ.
ಲಿಂಗಾಯತರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ್ದ ಹೇಳಿಕೆ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ಸಿಗರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಡಿಕೆಶಿ ಅವರೇ ಲಿಂಗಾಯತ ಡ್ಯಾಂನ ಬಗ್ಗೆ ಮಾತನಾಡಿದ್ದೀರಿ. ಇದು ಎಷ್ಟು ಗಟ್ಟಿ ಇದೆ ಎಂದು ಅರಿವು ನಿಮಗಿಲ್ಲ. ನೀವು ಅದನ್ನು ಒಡೆಯುವ ಭ್ರಮೆಯಲ್ಲಿದ್ದೀರಿ. 2018ರಲ್ಲಿ ನಿಮ್ಮ ಸರ್ಕಾರ ಇದ್ದು ಇದನ್ನು (ಲಿಂಗಾಯತ ಸಮಾಜ) ಒಡೆಯಲು ಸಾಧ್ಯವಾಗಿಲ್ಲ. ಈಗೇನು ಮಾಡಲು ಸಾಧ್ಯ’ ಎಂದು ಬೊಮ್ಮಾಯಿ ಟೀಕಿಸಿದ್ದಾರೆ.
‘ಮೊದಲು ನಿಮ್ಮ ಕಾಂಗ್ರೆಸ್ಸಿನ ಗುಂಡಿಯಲ್ಲಿ ನೀರಿಲ್ಲ. ಅದರ ಬಗ್ಗೆ ಚಿಂತನೆ ಮಾಡಿ, ನಿಮ್ಮ ಹೇಳಿಕೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಮೇ 13ಕ್ಕೆ ಯಾರ ಯಾರ ಡ್ಯಾಂನಲ್ಲಿ ಎಷ್ಟು ನೀರಿದೆ ಅಂತ ಗೊತ್ತಾಗುತ್ತದೆ. ನಿಮ್ಮ ಹೇಳಿಕೆಯಿಂದ ಲಿಂಗಾಯತ ಧರ್ಮವನ್ನು ಒಡೆಯುವ ಮತ್ತೊಂದು ಹುನ್ನಾರ ಬಯಲಾಗಿದೆ’ ಎಂದು ಬೊಮ್ಮಾಯಿ ಗುಡುಗಿದ್ದಾರೆ.
ಸಮುದಾಯವನ್ನು ಒಡೆಯಲು ಕಾಂಗ್ರೆಸ್ ಯತ್ನ: ಬೊಮ್ಮಯಿ
‘ಕಾಂಗ್ರೆಸ್ ಪಕ್ಷ ಲಿಂಗಾಯತ ಸಮಾಜವನ್ನು ಒಡೆಯುವ ಕೆಲಸ ಮಾಡಿದೆ. ಆದರೆ, ನಾವು ಲಿಂಗಾಯತ ಸಮಾಜವೂ ಸೇರಿ ಎಲ್ಲ ಸಮುದಾಯಗಳಿಗೂ ನ್ಯಾಯ ಕೊಡುವ ಕೆಲಸವನ್ನು ಮಾಡಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು ಮತ್ತು ಭಾಲ್ಕಿಯಲ್ಲಿ ಸುದ್ದಿಗಾರರ ಜತೆ ಪ್ರತ್ಯೇಕವಾಗಿ ಮಾತನಾಡಿದ ಅವರು, ‘ಎಲ್ಲ ಸಮುದಾಯಗಳಿಗೂ ಬಿಜೆಪಿ ಆದ್ಯತೆ ನೀಡಿದೆ. ಈ ಬಾರಿ 68 ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯದವರಿಗೆ ಟಿಕೆಟ್ ನೀಡಲಾಗಿದೆ’ ಎಂದು ಪ್ರತಿಪಾದಿಸಿದರು.
‘ಯಡಿಯೂರಪ್ಪ ಅವರ ಮನೆಯಲ್ಲಿ ನಡೆದ ಲಿಂಗಾಯತ ಶಾಸಕರು, ಸಂಸದರ ಸಭೆಯಲ್ಲಿ ಸದ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಮತ್ತು ಕಾಂಗ್ರೆಸ್ ಅಪಪ್ರಚಾರಗಳ ಬಗ್ಗೆ ಹೇಗೆ ತಿರುಗೇಟು ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು’ ಎಂದರು.
ಲಿಂಗಾಯತ ಮುಖ್ಯಮಂತ್ರಿ ಬಗ್ಗೆಯೂ ಕೆಲವರು ಸಲಹೆ ಕೊಟ್ಟಿದ್ದಾರೆ. ಸಭೆಯಲ್ಲಿ ಧರ್ಮೇಂದ್ರ ಪ್ರಧಾನ್ ಕೂಡಾ ಇದ್ದರು. ಸಭೆಯಲ್ಲಿ ವ್ಯಕ್ತವಾಗಿರುವ ಭಾವನೆಗಳನ್ನು ವರಿಷ್ಠರಿಗೆ ತಿಳಿಸುವುದಾಗಿ ಅವರು ಹೇಳಿದ್ದಾರೆ ಎಂದರು.
ಕಾಂಗ್ರೆಸ್‌ನದ್ದು ಲಿಂಗಾಯತ ವಿರೋಧಿ ನಡೆ: ‘50 ವರ್ಷದಲ್ಲಿ ಒಬ್ಬ ಲಿಂಗಾಯತನನ್ನೂ ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿಲ್ಲ. ಈ ಮಧ್ಯೆ, ವೀರೇಂದ್ರ ಪಾಟೀಲರು ಒಂಬತ್ತು ತಿಂಗಳು ಮುಖ್ಯಮಂತ್ರಿಗಳಾಗಿದ್ದರು. ಅವರನ್ನೂ ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಮುಖ್ಯಮಂತ್ರಿ ಹುದ್ದೆಯಿಂದ ಅವರನ್ನು ತೆಗೆದುಹಾಕುವ ತೀರ್ಮಾನವನ್ನು ವಿಮಾನ ನಿಲ್ದಾಣದಲ್ಲಿಯೇ ಕೈಗೊಳ್ಳಲಾಯಿತು. ಕಾಂಗ್ರೆಸ್ ಪಕ್ಷವು ಲಿಂಗಾಯತ ಸಮಾಜದ ರಾಜಶೇಖರ ಮೂರ್ತಿ ಅವರನ್ನು ನಡೆಸಿಕೊಂಡ ರೀತಿಯೂ ಸರಿಯಲ್ಲ’ ಎಂದರು.
‘ಪ್ರತ್ಯೇಕ ಧರ್ಮದ ಹೆಸರಿನಲ್ಲಿ ವೀರಶೈವರು– ಲಿಂಗಾಯತರನ್ನು ಒಡೆಯಲು ಕಾಂಗ್ರೆಸ್ ಪ್ರಯತ್ನಿಸಿತ್ತು. ಮತ ಬ್ಯಾಂಕ್‌ಗಾಗಿ ಸಮುದಾಯವನ್ನು ಒಡೆಯಲು ಮುಂದಾಗಿದ್ದ ಧೋರಣೆಯನ್ನು ಜನ ಮರೆಯುವುದಿಲ್ಲ. ಕಾಂಗ್ರೆಸ್‌ನವರು ದಲಿತರು, ಹಿಂದುಳಿದವರು ಮತ್ತು ಲಿಂಗಾಯತರಿಗೆ ಮೋಸ ಮಾಡಿದ್ದಾರೆ’ ಎಂದು ಬೊಮ್ಮಾಯಿ ಆರೋಪಿಸಿದರು.
ಲಿಂಗಾಯತ ಮತ ರಾಜಕಾರಣ
‘ಲಿಂಗಾಯತ ಸಮುದಾಯದ ನಾಯಕರನ್ನು ಬಿಜೆಪಿ ಕಡೆಗಣಿಸುತ್ತಿದೆ’ ಎಂಬ ಕಾಂಗ್ರೆಸ್ ನಾಯಕರ ಆರೋಪದಿಂದಾಗಿ ಕಳೆದ ಮೂರು ಚುನಾವಣೆಗಳಲ್ಲಿ ತಮ್ಮ ಬೆನ್ನಿಗೆ ನಿಂತಿದ್ದ ಮತಬ್ಯಾಂಕ್ ಛಿದ್ರಗೊಳ್ಳಬಹುದೆಂಬ ಆತಂಕಕ್ಕೆ ಬಿದ್ದಿರುವ ಬಿಜೆಪಿ ನಾಯಕರು, ಮತಭದ್ರಗೊಳಿಸಿಕೊಳ್ಳುವ ಕಸರತ್ತು ಆರಂಭಿಸಿದ್ದಾರೆ.
ಟಿಕೆಟ್ ಕೈತಪ್ಪಿದ ಕಾರಣಕ್ಕೆ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಪಾಳೆಯಕ್ಕೆ ಜಿಗಿದಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಿದ್ದವರನ್ನೇ ಬಿಜೆಪಿ ಅವಮಾನಿಸಿದೆ ಎಂದು ಪ್ರತಿಪಾದಿಸಿದ ಕಾಂಗ್ರೆಸ್ ನಾಯಕರು, ಇದನ್ನೇ ಕಮಲ ಪಕ್ಷದ ವಿರುದ್ಧದ ಅಸ್ತ್ರವಾಗಿ ಬಳಸಿದರು.
‘ಲಿಂಗಾಯತರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ’ ಎಂದು ಹೇಳಿದ ಶೆಟ್ಟರ್ ಇದಕ್ಕೆ ಧ್ವನಿಯನ್ನು ಕೊಟ್ಟರು. ತಮ್ಮಿಂದ ಅಂತರ ಕಾಯ್ದುಕೊಂಡಿದ್ದ ರಾಜಕೀಯವಾಗಿ ಪ್ರಬಲ ಸಮುದಾಯವನ್ನು ಸೆಳೆಯಲು ಮುಂದಾದ ಡಿ.ಕೆ.ಶಿವಕುಮಾರ್ ಇದನ್ನೇ ಬಿಜೆಪಿ ವಿರುದ್ಧದ ಬಾಣವಾಗಿ ಬಳಸಿದರು.
ಕಾಂಗ್ರೆಸ್‌ನ ಈ ನಡೆಯ ಗಂಭೀರತೆ ಅರಿತ ಬಿಜೆಪಿಯು ತನ್ನ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಮತ್ತು ಸಂಭವಿಸಬಹುದಾದ ಹಾನಿಯನ್ನು ತಡೆಯಲು ಕಾರ್ಯಪ್ರವೃತ್ತವಾಗಿದೆ. ಶೆಟ್ಟರ್ ಬಂಡಾಯದ ಬೆನ್ನಲ್ಲೇ ಬಿಜೆಪಿಯ ರಾಷ್ಟ್ರಿಯ ಅಧ್ಯಕ್ಷ ಜೆ.ಪಿ.ನಡ್ಡಾ ನೇರ ಹುಬ್ಬಳಿಗೆ ಬಂದಿದ್ದೂ ಅಲ್ಲದೇ, ಹಾನಿ ತಡೆಗೆ ಕೆಲವು ಕಾರ್ಯತಂತ್ರಗಳನ್ನು ರೂಪಿಸಿದರು. ಅದರ ಭಾಗವಾಗಿ ಲಿಂಗಾಯತ ಸಮುದಾಯಕ್ಕೆ ಸೇರಿದ ಶಾಸಕರು, ಸಂಸದರು, ಸಚಿವರ ಸಭೆ ನಡೆಸಲು ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೂಚಿಸಿದರು.
ಬಿಜೆಪಿಯ ಕಾರ್ಯತಂತ್ರದ ಭಾಗವಾಗಿ ಲಿಂಗಾಯತ ಸಮುದಾಯರವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಕಾಂಗ್ರೆಸ್‌ಗೆ ಸವಾಲು ಹಾಕುವುದರ ಜತೆಗೆ, ಜಗದೀಶ ಶೆಟ್ಟರ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವಂತೆಯೂ ದಾಳ ಉರುಳಿಸಿದೆ. ಇದನ್ನು ಸಚಿವ ವಿ.ಸೋಮಣ್ಣ ಅವರು ಚಾಮರಾಜನಗರದಲ್ಲಿ ಪ್ರಸ್ತಾಪಿಸಿದ್ದಾರೆ.
ಅಲ್ಲದೇ, ನಿಜಲಿಂಗಪ್ಪ ಬಿಟ್ಟರೆ ವೀರೇಂದ್ರ ಪಾಟೀಲ ಅವರನ್ನು ಮಾತ್ರ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಮಾಡಿದೆ. ಕಳೆದ 50 ವರ್ಷಗಳಲ್ಲಿ (ವೀರೇಂದ್ರ ಪಾಟೀಲರನ್ನು 9 ತಿಂಗಳು ಬಿಟ್ಟರೆ) ಯಾರನ್ನೂ ಮುಖ್ಯಮಂತ್ರಿ ಮಾಡಲಿಲ್ಲ. ವೀರೇಂದ್ರ ಪಾಟೀಲ ಅವರನ್ನು ಅವಮಾನಕರ ರೀತಿಯಲ್ಲಿ ಕೆಳಗಿಳಿಸಲಾಯಿತು ಎಂಬುದಾಗಿ ಪ್ರಸ್ತಾಪಿಸುವ ಮೂಲಕ ಬಿಜೆಪಿ ಆ ಸಮುದಾಯಕ್ಕೆ ತನ್ನದೇ ಆದ ಸಂದೇಶ ನೀಡಲಾರಂಭಿಸಿದೆ.
ಬಹಳ ಕಾಲದ ಬಳಿಕ ಲಿಂಗಾಯತ ಅಸ್ತ್ರ: ವೀರೇಂದ್ರ ಪಾಟೀಲ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಇಳಿಸಿದ ಮೇಲೆ ಲಿಂಗಾಯತ ಸಮುದಾಯ ಕಾಂಗ್ರೆಸ್‌ನಿಂದ ದೂರ ಸರಿದಿತ್ತು. ಇದರಿಂದ ಆದ ನಷ್ಟವನ್ನು ಸರಿದೂಗಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಲಿಂಗಾಯತ ಅಭ್ಯರ್ಥಿಗಳು ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಗೆಲುವು ಸನಿಹವಿದ್ದ ಕಡೆಗಳಲ್ಲಷ್ಟೇ, ಈ ಸಮುದಾಯದ ಮತಗಳು ‘ಕೈಗೆ ದಕ್ಕುತ್ತಿದ್ದವು.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ ಲಿಂಗಾಯತರನ್ನು ನಿರ್ಲಕ್ಷಿಸಲಾಗುತ್ತಿದೆ, ಆ ಸಮುದಾಯದ ನಾಯಕರನ್ನು ಅವಮಾನಿಸಲಾಗುತ್ತಿದೆ ಎಂಬ ಆರೋಪದ ಮೂಲಕ ಕಾಂಗ್ರೆಸ್ ನಾಯಕರು ಲಿಂಗಾಯತ ಮತ ಚದುರಿಸುವ ಯತ್ನವನ್ನು ಆರಂಭಿಸಿದರು. ಶೆಟ್ಟರ್, ಸವದಿ ರಾಜೀನಾಮೆ ನೀಡಿದ್ದರಿಂದಾಗಿ ತಮ್ಮ ವಾದ ಸತ್ಯವೆಂದು ಬಿಂಬಿಸುವ ಅವಕಾಶವನ್ನು ಕಾಂಗ್ರೆಸ್ ನಾಯಕರಿಗೆ ಅನಾಯಾಸವಾಗಿ ಕಲ್ಪಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.