ADVERTISEMENT

ಬಣ ಮುನಿಸಿನ ನಡುವೆ ಕೋಲಾರಕ್ಕೆ ಇಂದು ಸಿದ್ದರಾಮಯ್ಯ: ಕಾರ್ಯಕರ್ತರೊಂದಿಗೆ ಸಭೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 19:31 IST
Last Updated 8 ಜನವರಿ 2023, 19:31 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಕೋಲಾರ: ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಬಣದ ಮುನಿಸಿನ ನಡುವೆಯೇ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ನಗರಕ್ಕೆ ಭೇಟಿ ನೀಡುತ್ತಿದ್ದು, ಕೋಲಾರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಮಧ್ಯಾಹ್ನ 12.15ಕ್ಕೆ ನಗರದ ಮಿನಿ ಕ್ರೀಡಾಂಗಣದಲ್ಲಿ ಸಭೆ ನಡೆಯಲಿದ್ದು, ಈ ಸಂಬಂಧ ಸಿದ್ದರಾಮಯ್ಯ ಅವರ ಪ್ರವಾಸದ ವೇಳಾಪಟ್ಟಿಯನ್ನು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಬಣದವರು ಬಿಡುಗಡೆ ಮಾಡಿದ್ದಾರೆ.

‘ಕೋಲಾರ ಕ್ಷೇತ್ರದಲ್ಲೇ ಸ್ಪರ್ಧಿಸುವ ಬಗ್ಗೆ ಸಿದ್ದರಾಮಯ್ಯ ಘೋಷಣೆ ಮಾಡಲಿದ್ದಾರೆ’ ಎಂಬುದಾಗಿ ಈ ಬಣದ ಸದಸ್ಯ, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಸೇರಿದಂತೆ ಹಲವರು ಹೇಳುತ್ತಿದ್ದಾರೆ.

ADVERTISEMENT

ಆದರೆ, ಈ ಸಭೆಯಲ್ಲಿ ಕೆ.ಎಚ್‌. ಮುನಿಯಪ್ಪ ಬಣದ ಒಬ್ಬರೂ ಕಾಣಿಸಿಕೊಳ್ಳುತ್ತಿಲ್ಲ. ಈ ವಿಚಾರವಾಗಿ ಮುನಿಯಪ್ಪ ಬಣದ ಮುನಿಸು ಹಾಗೂ ಆಕ್ಷೇಪ ಮುಂದುವರಿದಿದ್ದು, ಸಭೆಯಲ್ಲಿ ಪಾಲ್ಗೊಳ್ಳುವುದು ಅನುಮಾನ. ಮುನಿಯಪ್ಪ ಹಾಗೂ ಅವರ ಬೆಂಬಲಿ
ಗರು ಬುಧವಾರವಷ್ಟೇ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರ ಭೇಟಿ ವೇಳೆ ಈ ವಿಚಾರ ಪ್ರಸ್ತಾಪಿಸಿದ್ದಾರೆ.

‘ಕ್ಷೇತ್ರದಲ್ಲಿ ಸ್ಪರ್ಧೆಗೆ ಆಕ್ಷೇಪಣೆ ಇಲ್ಲ. ಆದರೆ, ಜಿಲ್ಲೆಯಲ್ಲಿ ಪಕ್ಷದೊಳಗಿರುವ ಆಂತರಿಕ ಸಮಸ್ಯೆ ಬಗೆಹರಿಸಿಕೊಂಡು ಬರಬೇಕು. ಆಗ ಮಾತ್ರ ತಮಗೆ ಒಳ್ಳೆಯದಾಗುತ್ತದೆ ಎಂಬುದಾಗಿ ಭೇಟಿ ವೇಳೆ ಸಿದ್ದರಾಮಯ್ಯ ಅವರಿಗೆ ಮುನಿಯಪ್ಪ ಹೇಳಿದರು’ ಎಂದು ಜಿಲ್ಲಾ ಕಾಂಗ್ರೆಸ್‌ ಎಸ್‌ಟಿ ಘಟಕದ ಅಧ್ಯಕ್ಷ ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘4 ತಿಂಗಳಲ್ಲಿ ಸಿದ್ದರಾಮಯ್ಯ ಮತ್ತೆ ಸಿ.ಎಂ’
ಶ್ರೀನಿವಾಸಪುರ:
‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಇನ್ನೂ ನಾಲ್ಕು ತಿಂಗಳಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ’ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.

ತಾಲ್ಲೂಕಿನ ಮುದಿಮಡಗು ಗ್ರಾಮದಲ್ಲಿ ಭಾನುವಾರ ಸಾಲ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

‘ಸ್ತ್ರೀಶಕ್ತಿ ಸಂಘದ ಸದಸ್ಯರು ಮತ್ತು ರೈತರಿಗೆ ಡಿಸಿಸಿ ಬ್ಯಾಂಕ್ ನೀಡುವ ಬಡ್ಡಿರಹಿತ ಸಾಲದ ಮೊತ್ತ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಹೆಚ್ಚಾಗಲಿದೆ. ಆ ಬಗ್ಗೆ ಯಾವುದೇ ಅನುಮಾನ ಬೇಡ. ಆದರೆ, ಅದಕ್ಕಾಗಿ ನಾಲ್ಕು ತಿಂಗಳು ಕಾಯಬೇಕು ಅಷ್ಟೇ’ ಎಂದರು.

**

ಮುನಿಯಪ್ಪ ಕಾಂಗ್ರೆಸ್‌ನ ಹಿರಿಯ ನಾಯಕ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಮೇಶ್‌ ಕುಮಾರ್‌ ಬಣ ಕರೆಸಿಕೊಳ್ಳಬೇಕಿತ್ತು.
-ಕೆ.ಜಯದೇವ್‌, ಜಿಲ್ಲಾ ಕಾಂಗ್ರೆಸ್‌ ಎಸ್‌ಸಿ ಘಟಕದ ಅಧ್ಯಕ್ಷ

*
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಇನ್ನೂ ನಾಲ್ಕು ತಿಂಗಳಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ.
-ಕೆ.ಆರ್.ರಮೇಶ್ ಕುಮಾರ್, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.