ADVERTISEMENT

ಚುನಾವಣಾ ಪುರಾಣ | ಸತ್ತರಷ್ಟೇ ಸಿಗತಾವಲೇ ಅನುಕಂಪದ ವೋಟು!

ಸಿದ್ದಯ್ಯ ಹಿರೇಮಠ
Published 26 ಏಪ್ರಿಲ್ 2023, 19:58 IST
Last Updated 26 ಏಪ್ರಿಲ್ 2023, 19:58 IST
ಚುನಾವಣಾ ಪುರಾಣ
ಚುನಾವಣಾ ಪುರಾಣ   ಕಲೆ: ಭಾವು ಪತ್ತಾರ್‌

‘ಅಣ್ಣಾ ನಮ್ ಕ್ಯಾಂಡಿಡೇಟ್‌ಗೆ ಮತದಾರರಿಂದ ಅನುಕಂಪ ಹರಿದು ಬರುತ್ತಂತ?’

ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಾಕ್ಯಂಡು, ತಿಂಗಳುಗಟ್ಟಲೇ ಜೈಲಲ್ಲಿದ್ದು, ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದ ಬಳಿಕ ಒಂದು ಕೈ ನೋಡಿದರಾಯ್ತು ಅಂತ ಎಲೆಕ್ಷನ್‌ಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ತನ್ನ ನೆಚ್ಚಿನ ನಾಯಕನ ಪರ ಪ್ರಚಾರದಲ್ಲಿ ತೊಡಗಿದ್ದ ಸಿಂಗ್ನಳ್ಳಿ ಸೀನ ಒಗ್ಗರಣಿ ಮೆಣ್ಸಿನ್‌ಕಾಯ್ ಅಂಗಡಿ ಮುಂದೆ ಕುಳಿತಿದ್ದ ಆಪ್ತಮಿತ್ರ ಕಿಟಗೇರಿ ಕೊಟ್ರಪ್ಪನ ಹತ್ರ ಈ ರೀತಿ ಅಚ್ಚರಿಯಿಂದ ಕೇಳಿದ.

‘ನೀ ಬಲು ಬೇಸದಿಯಲ್ಲಲೇ.. ಎಂಥಾ ಪ್ರಶ್ನೆ ಅಂತ ಕೇಳ್ತಿಗೀ ಅಂತೀನಿ. ನಂಗೊತ್ತಿದ್ದಿದ್ದು ಏನಪಂದ್ರ, ಗಂಡ ಸತ್ತ್ರ ಹೇಣತಿಗೆ, ಅಪ್ಪ ಸತ್ತ್ರ ಮಗನೀಗೆ, ಅಣ್ಣ ಸತ್ತ್ರ ತಮ್ಮನಿಗಿ ಟಿಕೆಟ್‌ ಕೊಟ್ರಪಂದ್ರ ಜನಾ ಕಣ್ಣೀರಿಗೆ ಕರಗಿ, ಮರಗಿ ಅನುಕಂಪ ತೋರ್ಸಿ ವೋಟ್‌ ಹಾಕ್ತಾರ. ನೀ ಏನ್‌ ಹೇಳ್ತೆಲೇ.. ರೊಕ್ಕಾ ತಿಂದ್‌ ಸಿಗೆಬಿದ್ದು, ಜೈಲಿಗ್ಯೋಗಿ ಬಂದಾತಗ ಯಾರಾನಾ ಮರಗ್ತಾರನ್ಲೇ?

ADVERTISEMENT

ಮರು ಪ್ರಶ್ನೆ ಕೇಳಿದೊಡನೇ ತಬ್ಬಿಬ್ಬಾದ ಸೀನ ಸುಧಾರಿಸಿಕೊಂಡು ಕೇಳಿದ, ‘ಏನೈತೆ ಗೊತ್ತಿಲ್ಲಪಾ. ನಮ್‌ ಊರಾಕ ಒಂದಿಬ್ರು ಹಂಗ್ ಮಾತ್ಯಾಡದ್ ಕೇಳಸ್ಯಂಡು ಕಣಪೀಜಾಗಿದ್ಯಾ. ನಿನ್ನ ಹತ್ತ್ರ ಡೌಟ್‌ ಕ್ಲಿಯರ್ ಮಾಡ್ಕ್ಯಂಡ್ರಾತಂತ ಕೇಳಿದ್ಯಾ. ಅದಕ್ಯಾಕ ಇಷ್ಟ್‌ ಸಿಟ್ಟಿಗೇಳ್ತ್ಯಲೇ?

ಮತ್ತೊಂದು ಪ್ರಶ್ನೆ ಧುತ್ತನೇ ಬಂದಿದ್ದರಿಂದ ಸುಧಾರಿಸಿಕೊಂಡ ಮತ್ತೆ ಮಾತಿಗಿಳಿದ ಕೊಟ್ರಪ್ಪ, ‘ಹೋಗಲೇ ನೀ ಹೇಳಿದಂಗ ಮಂದ್ಯೆಲ್ಲ ಮರಗಿ ಇಂಥೌರ್ಗೆಲ್ಲಾ ವೋಟ್‌ ಕೊಟ್‌ ಬುಟ್ರ, ಸೋಲೌರರೆ ಯಾರಂತೀನಿ. ಈಗ್‌ ನೋಡಪಾ ಎಲೆಕ್ಷನ್‌ಗೆ ನಿಂತೌರೆಲ್ಲಾ ಯಾರ್‌ ಸುದ್ಧದಾರಲೇ, ಒಂದಿಲ್ಲಾ ಒಂದ್‌ ಸಲಾ ಜೈಲಿಗೆ ಹೋಗಿ ಬಂದೌರು, ಇನ್ನೇನ್ ಜೈಲಿಗೆ ಹೋಗೌರೇ ಅಲ್ಲೇನು. ಹಿಂದ್ಕ, ಚಳವಳಿ, ಹೋರಾಟಾ ಅಂತ್ಯಲ್ಲಾ ಬೀದೀಗಿಳ್ದು ಜೈಲಿಗೋಗಿ ಬಂದೌರಿಗಿ ಜನ್ಯೆಲ್ಲಾ ಹುಚ್ಚೆದ್ದು ವೋಟ್‌ ಹಾಕ್ತಿದ್ರಂತ ಕೇಳೀನಿ. ಮರ್ಡರ್‌ ಮಾಡಿ ಒಳಗೋದೌರು, ಮಣ್ಣ್‌ ಗ್ಯಬರಿ ಒಳಗೋದೌರು, ರೊಕ್ಕಾ ತಿಂದು, ಔರಿವ್ರ ಜ್ಯತಿಗಿ ಜ್ಯಗಳಾಡಿ ಒಳಗೋದೌರು ಎಲೆಕ್ಷನ್ನಿಗಿ ನಿಂತ್ರ ಯಾರ್‌ ವೋಟ್‌ ಹಾಕ್ತಾರಪಂತೀನಿ? ಇಂಥಾ ಹುಚ್ಚುಚ್‌ ಪ್ರಶ್ನೆ ಕೇಳ್ತ್ಯಲ್ಲಾ ನೀ ಎಂಥಾ ಗಣಮಗಂತೀನಿ?

‘ಹೌದಪಾ ನೀ ತಿಳದಾತದಿ.. ಹೇಳ್ತಿದಿ ಅಂತ ಕೇಳಿದ್ಯಾ. ಮತ್ತ, ಈಟ್‌ ದಿನಿದ್ದ ಪಾರ್ಟಿ ಬುಟ್ಟು ಬ್ಯಾರೇ ಪಾರ್ಟಿಗೆ ಹೋದೌರಿಗೂ ಅನುಕಂಪ ತೋರಸ್ತಾರಂತ ಸುದ್ದಿ ಐತ್ಯಲ್ಲಾ, ಅಂಥೌರಿಗ್ಯಲ್ಲಾ ವೋಟ್‌ ಬೀಳಕುಲ್ಲಂತೀಗ್ಯಾ? ಡೌಟ್‌ ಕ್ಲಿಯರ್‌ ಆದಂತೆ ಕಾಣಿಸದೆ ಸೀನ ಮತ್ತೆ ಕೇಳೇಬಿಟ್ಟ.

ಲೇ ಒಮ್ಮೆ ಹೇಳಿದ್ದನ್ನ ಸರಿಯಾಗಿ ಕೇಳಿಸ್ಗ್ಯಳಲೇ ಖೋಡಿ.. ನಾ ಮೊದಲೇ ಹೇಳಿಲ್ಲಾ, ಸತ್ತರಷ್ಟ ಅನುಕಂಪ ಸಿಗತೈತಿ ಅಂತ. ನಿನ್ ಮಾತ್ ಕೇಳೀದ್ರಪಂದ್ರ, ಅನುಕಂಪ ಹುಡಿಕ್ಯಂಡ್‌ ಬರಬೌದಂತ ತಿಳಕಂಡು ಮುಂದಿನ ಸಲಾ ಎಲೆಕ್ಷನ್‌ನ್ಯಾಗ ನಿಲ್ಲಬೇಕಂತ ಯಾರನರ ಸಾಯ್ ಬಡದು, ಒಳಗೋಗಿ ಬರಂಗ ಕಾಣ್ತೆಪಾ. ಈಗಿದ್ದ ಪಾರ್ಟ್ಯಾಗ ಇದ್ರೇ ವೋಟ್‌ ಬೀಳಂಗಿಲ್ಲ ಅಂಬೋ ಸ್ಥಿತಿ ಆದ. ಅದರಾಗ ನೀ ಪಾರ್ಟಿ ಬುಟ್ಟೋದ್ರ ವೋಟ್‌ ಬೀಳ್ತಾವಾ ಅಂತ ಕೇಳ್ತ್ಯಲ್ಲ.. ಬರೇ ಇದೇ ಆತು ನಡ್ಯಲೇ ಪುಗ್ಸಟ್ಟೆ ಏನೇನಾರ ಕೇಳಬ್ಯಾಡಾ ತಿನ್ನಾಕ ಏನರ ಆರ್ಡರ್‌ ಮಾಡು...’ ಅಂತ ಕೊಟ್ರಪ್ಪ ಸೀನನಿಗೇ  ಆರ್ಡರ್‌ ಮಾಡಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.