ಕೋಲಾರ: ‘ಸಿದ್ದರಾಮಯ್ಯ ವಿರುದ್ಧ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಡವೆಂದು ನನಗೆ ಹೇಳಲು ಕುರುಬ ಸಮುದಾಯದ ಸ್ವಾಮೀಜಿ ಸೇರಿದಂತೆ ಯಾರಿಗೂ ಸಾಧ್ಯವಿಲ್ಲ’ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ವರ್ತೂರು ಪ್ರಕಾಶ್ ತಿಳಿಸಿದರು.
‘ಸಿದ್ದರಾಮಯ್ಯ ಕಡೆಯವರು ಮತ್ತು ಸ್ವಾಮೀಜಿ ಒತ್ತಡಕ್ಕೆ ಮಣಿದು ರಾಜಿ ಮಾಡಿಕೊಂಡು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ, ಸ್ಪರ್ಧಿಸಿದರೂ ತಟಸ್ಥವಾಗುತ್ತೇನೆ ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹ ಹಬ್ಬಿಸುತ್ತಿದ್ದಾರೆ. ಈ ಮೂಲಕ ನನ್ನನ್ನು ರಾಜಕೀಯವಾಗಿ ತೇಜೋವಧೆ ಮಾಡುವ ಪ್ರಯತ್ನ ನಡೆದಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಇವೆಲ್ಲಾ ವಾಸ್ತವಕ್ಕೆ ದೂರವಿದ್ದು, ನನ್ನ ಮನವೊಲಿಕೆಗೆ ಯಾರೂ ಪ್ರಯತ್ನಿಸಿಲ್ಲ. ನಾನು ಹೈವೋಲ್ಟೇಜ್ ವಿದ್ಯುತ್ ತಂತಿ ಇದ್ದಂತೆ. ನನ್ನನ್ನು ದಾರಿ ತಪ್ಪಿಸಲು ಅಥವಾ ಮನವೊಲಿಕೆಗೆ ಬರುವವರು ಸುಟ್ಟು ಭಸ್ಮವಾಗುತ್ತಾರೆ’ ಎಂದು ಅವರು ಎಚ್ಚರಿಕೆ ನೀಡಿದರು.
‘ಜ.9ರವರೆಗೆ ಸಿದ್ದರಾಮಯ್ಯ ಮೇಲೆ ಗೌರವವಿತ್ತು. ಆದರೆ, ಅವರದೇ ಸಮುದಾಯಕ್ಕೆ ಸೇರಿದ ನನ್ನ ವಿರುದ್ಧ ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಅಂದು ಪ್ರಕಟಿಸಿದ ನಂತರ ಅವರ ಮೇಲಿದ್ದ ಗೌರವ ದೂರವಾಯಿತು. ರಮೇಶ್ ಕುಮಾರ್, ಎಂ.ಎಲ್.ಅನಿಲ್ ಕುಮಾರ್ ಮತ್ತಿತರರು ಕರೆತಂದರು ಎನ್ನುವುದಕ್ಕಿಂತ ನನ್ನನ್ನು ಚಿವುಟಿ ಹಾಕಲೆಂದೇ ಅವರು ಸ್ಪರ್ಧೆಗೆ ಮುಂದಾಗಿದ್ದಾರೆ’ ಎಂದು ಟೀಕಿಸಿದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಹಳ್ಳಿ ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ನಡುಪಳ್ಳಿ ಕೃಷ್ಣಮೂರ್ತಿ, ಬೆಗ್ಲಿ ಸೂರ್ಯಪ್ರಕಾಶ್ ಅವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.