ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ, ಪ್ರತಿಪಕ್ಷ ನಾಯಕರ ಮಧ್ಯೆ ‘ಪವರ್ ಕ್ಯಾನ್ಸರ್’ ಶುರುವಾಗಿದೆ ಎಂದು ವ್ಯಂಗ್ಯವಾಡಿದೆ.
ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಕಚ್ಚಾಟ ಶುರುವಾಗಿರುವ ವಿಚಾರಕ್ಕೆ ಸಂಬಂಧಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್‌ಗೆ ‘ಪವರ್ ಕ್ಯಾನ್ಸರ್’ ಶುರುವಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಒಬ್ಬರಿಗಿಂತ ಇನ್ನೊಬ್ಬರು ಪವರ್‌ಫುಲ್ ಎಂದು ತೋರಿಸಿಕೊಳ್ಳುವ ಹಾಗೇ ಮುಖ್ಯಮಂತ್ರಿ ಅಭ್ಯರ್ಥಿ ನಾನೇ ಎಂಬ ಸಂದೇಶ ರವಾನಿಸುವುದರಲ್ಲೇ ತಮ್ಮ ಶಕ್ತಿ ವ್ಯಯಿಸುತ್ತಿದ್ದಾರೆ ಎಂದು ಕಿಚಾಯಿಸಿದೆ.
‘ಇವರಿಬ್ಬರ ಜಗಳದಲ್ಲಿ ಡಾ.ಜಿ.ಪರಮೇಶ್ವರ ಮತ್ತು ಮಲ್ಲಿಕಾರ್ಜುನ ಖರ್ಗೆ ನಡುವೆ ಪೈಪೋಟಿ ಶುರುವಾಗಿದೆ. ಎಲ್ಲಿ ಖರ್ಗೆ ಬಂದುಬಿಟ್ಟಾರೋ ಎಂದು ಪರಮೇಶ್ವರ್ ಮೆಲ್ಲಗೆ ಕುರ್ಚಿಗೆ ಟವೆಲ್ ಹಾಸಿ ಕುಳಿತಿದ್ದಾರೆ. ಈ ವಿಷಯ ತಿಳಿದಿರುವ ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ಹೊಸ ಖೆಡ್ಡವನ್ನು ತೋಡುತ್ತಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.
‘ಎಲ್ಲಿ ತನಗಿಂತ ಬೆಳೆದುಬಿಡುತ್ತಾರೋ ಎಂದು ಡಿ.ಕೆ.ಶಿವಕುಮಾರ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯ ಹಿಂದೆ ಆಡಿದ ಆಟಗಳು ಒಂದೆರಡಲ್ಲ. 17 ಜನ ನಾಯಕರನ್ನು ದೆಹಲಿಗೆ ಕರೆದೊಯ್ದು, ಡಿಕೆಶಿಯನ್ನ ರಾಜ್ಯ ಘಟಕ ಅಧ್ಯಕ್ಷರನ್ನಾಗಿ ನೇಮಿಸಬೇಡಿ ಎಂದು ಹಿಂದಿನಿಂದ ಬಾಣ ಬಿಟ್ಟಿದ್ದನ್ನು ಡಿಕೆಶಿ ಇನ್ನೂ ಮರೆತಿಲ್ಲ’ ಎಂದು ಬಿಜೆಪಿ ಕಾಲೆಳೆದಿದೆ.
‘ಈಗ ಅದೇ ಕಾರಣಕ್ಕೆ ಸಿದ್ದರಾಮಯ್ಯನವರ ಸುತ್ತಲೂ ತಮ್ಮ ಬೆಂಬಲಿಗರ ಕೋಟೆ ಕಟ್ಟಿದ್ದು ಡಿ.ಕೆ.ಶಿವಕುಮಾರ್. ಈಗ ಒಳಜಗಳ ಕೇವಲ ಡಿಕೆಶಿ v/s ಸಿದ್ದರಾಮಯ್ಯನವರ ಮಧ್ಯೆಯಷ್ಟೇ ಆಗಿರದೇ, ಉಭಯ ನಾಯಕರ ಬಣಗಳ ನಡುವೆ ಹೊತ್ತಿಕೊಂಡಿದೆ. ಆಯಾ ನಾಯಕರ ಬೆಂಬಲಿಗರು ಪ್ರತಿ ಕ್ಷೇತ್ರಗಳಲ್ಲಿ ಟಿಕೆಟ್ ಜಗಳ ಶುರು ಮಾಡಿಕೊಂಡಿದ್ದಾರೆ’ ಎಂದು ಬಿಜೆಪಿ ಕಿಡಿಕಾರಿದ್ದಾರೆ.
‘ಇಬ್ಬರು ನಾಯಕರನ್ನು ದೆಹಲಿಗೆ ಕರೆದು ಸಮಾಧಾನ ಮಾಡುವಷ್ಟರಲ್ಲಿ ಈಗ ಉಭಯ ನಾಯಕರ ಬಣಗಳು ಕಿತ್ತಾಟ ಶುರು ಮಾಡಿಕೊಂಡಿರುವುದು ಕಾಂಗ್ರೆಸ್ ಹೈಕಮಾಂಡ್‌ಗೆ ತಲೆ ಬಿಸಿ ಶುರುವಾಗಿದೆ. ಇದು ಕಪ್ಪೆಗಳನ್ನು ಹಿಡಿದು ಕೊಳಗ ತುಂಬಿದಂತಾಗಿದ್ದು, ಇವರ ಜಗಳವನ್ನೇ ಸುಧಾರಿಸುತ್ತಿದ್ದರೆ ಚುನಾವಣೆಗೆ ಹೊರಡುವುದು ಯಾವಾಗ ಎಂಬಂತಾಗಿದೆ’ ಎಂದು ಬಿಜೆಪಿ ಟೀಕಿಸಿದೆ.
‘ರಾಹುಲ್ ಗಾಂಧಿ ಸ್ಟೇಜ್ ಮೇಲೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ರನ್ನು ತಬ್ಬಿಕೊಳ್ಳುವಂತೆ ಮಾಡಿದರೂ ಕೆಳಗಿಳಿದು ಮತ್ತದೇ ಕಿತ್ತಾಟ ಶುರು ಮಾಡುವುದನ್ನು ನೋಡಿ, ಬೇಸತ್ತು ಖರ್ಗೆಯವರನ್ನು ಡ್ಯಾಮೇಜ್ ಕಂಟ್ರೋಲ್ ಮಾಡಲು ಬಿಟ್ಟರು, ಸೋಜಿಗವೆಂದರೆ ಖರ್ಗೆಯವರೇ ಮತ್ತೊಂದು ಗುಂಪಿನ ನಾಯಕ!’ ಬಿಜೆಪಿ ಹಾಸ್ಯ ಚಟಾಕಿ ಹಾರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.