ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ವಸತಿ ಶಾಲೆಗಳಲ್ಲಿನ ಅವ್ಯವಸ್ಥೆ ಕುರಿತು ವಿಧಾನಸಭೆಯಲ್ಲಿ ಪಕ್ಷಾತೀತವಾಗಿ ಪ್ರಸ್ತಾಪಿಸಿದ ಸದಸ್ಯರು, ಲೋಪಗಳನ್ನು ಸರಿಪಡಿಸಿ ಗುಣಮಟ್ಟದ ಶಿಕ್ಷಣ, ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದರು.
ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ರೂಪಕಲಾ, ‘ಕ್ರೈಸ್ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳಲ್ಲಿ ಅವ್ಯವಸ್ಥೆ ವ್ಯಾಪಕವಾಗಿದೆ. ಒಂದು ಲಕ್ಷ ವಿದ್ಯಾರ್ಥಿಗಳಿರುವ ನಿಲಯಗಳ ನಿರ್ವಹಣೆಗೆ ಕೇವಲ ₹ 300 ಕೋಟಿ ವೆಚ್ಚ ಮಾಡಲಾಗುತ್ತಿದೆ. ಆದರೆ, ಸಮುದಾಯ ಭವನಗಳ ನಿರ್ಮಾಣಕ್ಕೆ ₹ 1 ಸಾವಿರ ಕೋಟಿ ನೀಡಲಾಗುತ್ತಿದೆ. ತಿಂಗಳಿಗೊಮ್ಮೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಬೇಕೆಂಬ ನಿಯಮವೂ ಪಾಲನೆಯಾಗುತ್ತಿಲ್ಲ. ಪ್ರಧಾನ ಕಾರ್ಯದರ್ಶಿ ಹಂತದ ಅಧಿಕಾರಿಗಳಿಂದ ಮೇಲ್ವಿಚಾರಣೆ ವ್ಯವಸ್ಥೆ ತರಬೇಕು’ ಎಂದರು.
ಅದಕ್ಕೆ ದನಿಗೂಡಿಸಿದ ಬಿಜೆಪಿಯ ಎಸ್. ಸುರೇಶ್ ಕುಮಾರ್, ಹಿರಿಯೂರಿನ ನವೋದಯ ಶಾಲೆ ಮತ್ತು ಹಾವೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಪ್ರಸ್ತಾಪಿಸಿದರು. ಮಕ್ಕಳಿಗೆ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಆಪ್ತ ಸಮಾಲೋಚನೆ ವ್ಯವಸ್ಥೆ ತರಬೇಕು ಎಂದೂ ಸಲಹೆ ನೀಡಿದರು.
ಬಿಜೆಪಿಯ ಆರಗ ಜ್ಞಾನೇಂದ್ರ, ‘ಬಹಳಷ್ಟು ಉಪ ನಿರ್ದೇಶಕರು ಆಹಾರ ಗುತ್ತಿಗೆದಾರರಂತೆ ಕೆಲಸ ಮಾಡುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಆಹಾರ ಸಿಗುತ್ತಿಲ್ಲ’ ಎಂದು ದೂರಿದರು. ಕಾಂಗ್ರೆಸ್‌ನ ಎಸ್.ಎನ್. ನಾರಾಯಣಸ್ವಾಮಿ, ‘ಮಕ್ಕಳಿಗೆ ಗುಣಮಟ್ಟದ ಆಹಾರ ಸಿಗುವುದಿರಲಿ, ತಟ್ಟೆಯೂ ಇಲ್ಲ’ ಎಂದರು.
ಕಾಂಗ್ರೆಸ್‌ನ ಪಿ.ಎಂ. ನರೇಂದ್ರಸ್ವಾಮಿ, ‘ಕ್ರೈಸ್ ಸಂಸ್ಥೆಯಲ್ಲಿನ ‘ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟಂಟ್’ ಕಟ್ಟಡ ನಿರ್ಮಾಣಕ್ಕಷ್ಟೇ ಒತ್ತು ನೀಡುತ್ತಿದೆ. ವಸತಿ ಶಾಲೆಗಳಲ್ಲಿ ಶೇ 80ರಷ್ಟು ಹೊರಗುತ್ತಿಗೆ ಶಿಕ್ಷಕರಿದ್ದಾರೆ’ ಎಂದರು. ಪ್ರಕಾಶ್ ಕೋಳಿವಾಡ, ‘ಐದು ವರ್ಷಗಳಲ್ಲಿ ವಿದ್ಯಾರ್ಥಿನಿ ನಿಲಯಗಳಲ್ಲಿ 92 ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕ ಮೂಡಿಸುತ್ತದೆ’ ಎಂದರು.
ಸಮಾಜ ಕಲ್ಯಾಣ ಸಚಿವರ ಪರವಾಗಿ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ‘ಗುಣಮಟ್ಟದ ಆಹಾರ ವಿತರಿಸದಿರುವುದು, ಉಪನಿರ್ದೇಶಕರ ಕಾರ್ಯವೈಖರಿ, ತಹಶೀಲ್ದಾರ್‌ಗಳು ಭೇಟಿ ನೀಡದಿರುವ ಬಗ್ಗೆ ವಿಸ್ತೃತ ವರದಿ ಸಲ್ಲಿಸಲು ಸೂಚಿಸಲಾಗುವುದು. ರೋಟರಿ ಇಂಟರ್‌ನ್ಯಾಷನಲ್ ಸಂಸ್ಥೆಯ ಸಹಯೋಗದಲ್ಲಿ ಮಕ್ಕಳ ದೈಹಿಕ, ಮಾನಸಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದ್ದು, ಸದ್ಯದಲ್ಲೇ ಸಚಿವ ಸಂಪುಟ ಸಭೆಗೆ ಪ್ರಸ್ತಾವ ಮಂಡಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.