ಬೆಂಗಳೂರು: ಸರ್ಕಾರದಿಂದ ನೆರವು ಪಡೆದಿರುವ ಸಹಕಾರ ಸಂಸ್ಥೆಗಳಲ್ಲಿ ಮೀಸಲಾತಿ ಆಧಾರದಲ್ಲಿ ನಾಮನಿರ್ದೇಶನಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ–2024’ಕ್ಕೆ ಮೂರೂ ಪಕ್ಷಗಳ ಕೆಲವು ಸದಸ್ಯರ ವಿರೋಧ ನಡುವೆಯೂ ವಿಧಾನಸಭೆ ಸೋಮವಾರ ಒಪ್ಪಿಗೆ ನೀಡಿತು.
ಮಸೂದೆಯ ಮೇಲಿನ ಸುದೀರ್ಘ ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿಯ ಎಸ್.ಟಿ. ಸೋಮಶೇಖರ್, ಆರಗ ಜ್ಞಾನೇಂದ್ರ, ಬಸನಗೌಡ ಪಾಟೀಲ ಯತ್ನಾಳ, ಜೆಡಿಎಸ್‌ನ ಜಿ.ಟಿ. ದೇವೇಗೌಡ ಮತ್ತು ಜಿ.ಡಿ. ಹರೀಶ್ ಗೌಡ ಮೀಸಲಾತಿ ಪ್ರಸ್ತಾವವನ್ನು ಕೈಬಿಡುವಂತೆಯೂ ಆಗ್ರಹಿಸಿದರು. ಮಸೂದೆ ಮಂಡಿಸಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸದಸ್ಯರನ್ನು ಮನವೊಲಿಸುವ ಕಸರತ್ತು ನಡೆಸಿದರು. ಕೆಲವು ಬದಲಾವಣೆಗಳಿಗೆ ವಿರೋಧಪಕ್ಷಗಳ ಸದಸ್ಯರು ಪಟ್ಟು ಹಿಡಿದರು.
ಮಸೂದೆಯು ಕುರಿತು ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಎಸ್.ಟಿ.ಸೋಮಶೇಖರ್,‘ಮೀಸಲಾತಿ ಕಲ್ಪಿಸಿ ನಾಮನಿರ್ದೇಶನ ಮಾಡುವುದು ಅಪಾಯಕಾರಿ. ಅವರಿಗೂ ಮತದಾನದ ಹಕ್ಕು ಕೊಡಲಾಗುತ್ತಿದೆ. ಇದರಿಂದ ಸಹಕಾರ ಸಂಸ್ಥೆಗಳ ಆಡಳಿತ ಹಳಿ ತಪ್ಪಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಈ ತಿದ್ದುಪಡಿ ವೈದ್ಯನಾಥನ್ ವರದಿ ಜಾರಿಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ನಬಾರ್ಡ್ ಮಧ್ಯೆ ಆಗಿರುವ ಒಪ್ಪಂದದ ವಿರುದ್ಧವಾಗಿದೆ. ಪ್ರಜಾಪ್ರಭುತ್ವ ವಿರೋಧಿಯಾದ ಕ್ರಮ’ ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ಹೇಳಿದರು.
ನಾಮ ನಿರ್ದೇಶನ ಯಾವ ರೀತಿಯಲ್ಲಿ ಮಾಡುತ್ತೀರಿ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಇಷ್ಟರ ಮಟ್ಟಿಗೆ ಹಸ್ತಕ್ಷೇಪ ಮಾಡುವುದಕ್ಕಿಂತ ಚುನಾವಣೆ ಮಾಡದೇ ಸರ್ಕಾರವೇ ನಡೆಸಲಿ ಎಂದು ಜೆಡಿಎಸ್‌ನ ಜಿ.ಡಿ.ಹರೀಶ್ ಗೌಡ ಹೇಳಿದರು.
ಉತ್ತರ ನೀಡಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ, ‘ಸಹಕಾರ ಆಂದೋಲನ ಜನರ ಆಂದೋಲನ ಆಗಬೇಕು ಎಂಬುದು ತಿದ್ದುಪಡಿಯ ಹಿಂದಿನ ಉದ್ದೇಶ. ಎಲ್ಲ ಸಹಕಾರ ಸಂಸ್ಥೆಗಳಲ್ಲೂ ಮೀಸಲಾತಿ ಕಲ್ಪಿಸುವುದಿಲ್ಲ. ಸರ್ಕಾರದ ನೆರವು ಪಡೆದ ಸಂಸ್ಥೆಗಳಿಗೆ ಸೀಮಿತ. ಮೀಸಲಾತಿ ನೀಡುವಾಗ ಯಾವ ಸಮಾಜಕ್ಕೆ ಇಲ್ಲಿಯವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲವೋ ಅವರಿಗೆ ಆದ್ಯತೆ ನೀಡಲಾಗುವುದು. ಕೆಲವು ಸಹಕಾರ ಸಂಸ್ಥೆಗಳ ಸ್ಥಿತಿ ಗತಿಯ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ತೀರಾ ಹದಗೆಟ್ಟಿವೆ’ ಎಂದು ಹೇಳಿದರು.
ಕಾನೂನು ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ನಾಮನಿರ್ದೇಶನದ ಹೆಸರಿನಲ್ಲಿ ಹೊರಗಿನವರನ್ನು ತಂದು ಹೇರುತ್ತೀರಿ ಎಂಬ ಆತಂಕ ಹಲವು ಸದಸ್ಯರಿಗಿದೆ. ಆ ಆತಂಕವನ್ನು ನಿವಾರಿಸಬೇಕಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.