ADVERTISEMENT

Karnataka Assembly Session: ‘ಕೈ’ ಶಾಸಕರ ಕೂರಿಸಲು ಸಚೇತಕರ ಹರಸಾಹಸ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 23:30 IST
Last Updated 19 ಜುಲೈ 2024, 23:30 IST
<div class="paragraphs"><p>ವಿಧಾನಸಭೆ ಅಧಿವೇಶನ (ಸಾಂದರ್ಭಿಕ ಚಿತ್ರ)</p></div>

ವಿಧಾನಸಭೆ ಅಧಿವೇಶನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ವಿಧಾನಸಭೆಯಲ್ಲಿ ಧರಣಿ ನಿರತ ಬಿಜೆಪಿ ಸದಸ್ಯರ ವಿರುದ್ಧ ಮನಬಂದಂತೆ ಕಾಂಗ್ರೆಸ್ ಸದಸ್ಯರು ಮಾತನಾಡುವುದನ್ನು ತಡೆಯಲು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರು ಶುಕ್ರವಾರ ಹರಸಾಹಸಪಟ್ಟರು.

ಕಾಂಗ್ರೆಸ್‌ನ ಪ್ರದೀಪ್ ಈಶ್ವರ್, ಕೆ.ಎಂ.ಶಿವಲಿಂಗೇಗೌಡ, ನಯನಾ ಮೋಟಮ್ಮ ಅವರು ಅತಿವೃಷ್ಟಿಯ ಬಗ್ಗೆ ಮಾತನಾಡುವುದಕ್ಕೆ ಎದ್ದು ನಿಂತು ವಿಷಯಾಂತರ ಮಾಡಿ ಬಿಜೆಪಿಯ ಬಗ್ಗೆ ಟೀಕಾ ಪ್ರಹಾರ ನಡೆಸಲು ಆರಂಭಿಸಿದರು. 

ADVERTISEMENT

ಬಿಜೆಪಿ ಸದಸ್ಯರು ‘ವಾಲ್ಮೀಕಿ ಹಗರಣದ ಬಗ್ಗೆಯೂ ಮಾತನಾಡಿ’ ಎಂದು ಕಾಂಗ್ರೆಸ್‌ ಶಾಸಕರನ್ನು ಪುಸಲಾಯಿಸಲಾರಂಭಿಸಿದರು. ಚರ್ಚೆ ಹಳಿ ತಪ್ಪಲಾರಂಭಿಸಿತು. ಆಗ ಅವರನ್ನು ಕೂರಿಸಲು ಮುಖ್ಯಸಚೇತಕ ಅಶೋಕಪಟ್ಟಣ, ಪ್ರಿಯಾಂಕ್ ಖರ್ಗೆ ಮತ್ತು ಇತರರು ಹೆಣಗಾಡಿದರು. ಬಲವಂತವಾಗಿ ಕೈ ಹಿಡಿದು ಕೂರಿಸಿದರು.

ಆಗ ಬಿಜೆಪಿ ಸದಸ್ಯರು ‘ಕಮಾನ್‌ ಪ್ರದೀಪ್‌’, ‘ಕಮಾನ್‌ ಶಿವಲಿಂಗೇಗೌಡ’ ‘ಮಾತಾಡಿ ಮಾತಾಡಿ’ ಎಂದು ಮಾತನಾಡುವಂತೆ ಪ್ರಚೋದಿಸಿದರು.

ಉತ್ತೇಜಿತರಾದ ಕಾಂಗ್ರೆಸ್‌ ಸದಸ್ಯರು ಬಿಜೆಪಿಯನ್ನು ಟೀಕಿಸಲು ನಿಂತಾಗ ಬಿಜೆಪಿ ಸದಸ್ಯರು ‘ಸಿದ್ರಾಮಣ್ಣ, ಸಿದ್ರಾಮಣ್ಣ ದಲಿತರ ಹಣ ನುಂಗಿದೆಯಣ್ಣ’, ‘ಏನಿಲ್ಲಾ, ಏನಿಲ್ಲಾ ಅರಸೀಕೆರೆಗೆ ಏನಿಲ್ಲ’, ‘ಚೊಂಬು ಚೊಂಬು, ಗ್ರ್ಯಾಂಟ್‌ ಇಲ್ಲ...’, ‘ಬುರುಡೆ ದಾಸ ಶಿವಲಿಂಗೇಗೌಡ’ ಇತ್ಯಾದಿ ಘೋಷಣೆಗಳನ್ನು ಕೂಗಿದರು.

ಒಂದು ಹಂತದಲ್ಲಿ ಪ್ರದೀಪ್‌ ಈಶ್ವರ್‌ ಅವರನ್ನು ಅಶೋಕ ಪಟ್ಟಣ ಬಲವಂತವಾಗಿ ಕೂರಿಸಿದರು. ಆಗ ಬಿಜೆಪಿ ಸದಸ್ಯರು ‘ಶಾಸಕರ ಧ್ವನಿಯನ್ನು ಅಡಗಿಸಲಾಗುತ್ತಿದೆ. ದೌರ್ಜನ್ಯ ಮಾಡಲಾಗುತ್ತಿದೆ. ಒತ್ತಾಯಪೂರ್ವಕವಾಗಿ ಕೂರಿಸುತ್ತಿದ್ದಾರೆ. ಇದು ಸರ್ವಾಧಿಕಾರಿ ನಡೆ. ಸಭಾಧ್ಯಕ್ಷರು ಶಾಸಕರ ರಕ್ಷಣೆಗೆ ಬರುತ್ತಿಲ್ಲ’ ಎಂದು ವಿರೋಧಪಕ್ಷದ ನಾಯಕ ಆರ್‌.ಅಶೋಕ ಹರಿಹಾಯ್ದರು.

ಪ್ರದೀಪ್ ಈಶ್ವರ್ ಮತ್ತೆ ಎದ್ದು ನಿಂತು ‘ಜೈ ಸಿದ್ರಾಮಯ್ಯ, ಜೈ ಸಿದ್ರಾಮಯ್ಯ’ ಎಂದು ಏರಿದ ಧ್ವನಿಯಲ್ಲಿ ಕೂಗಲಾರಂಭಿಸಿದರು. ಆಗ ಅಶೋಕ ಪಟ್ಟಣ ಅವರು ಪ್ರದೀಪ್ ಬಳಿ ಹೋಗಿ ಕೈಮುಗಿದು, ಕೂರುವಂತೆ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.