ADVERTISEMENT

ವಾಲ್ಮೀಕಿ ನಿಗಮ ಹಗರಣ: ವಿಧಾನಸಭೆ ಕಲಾಪಕ್ಕೆ ಹಾಜರಾದ ಬಸನಗೌಡ ದದ್ದಲ್

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 7:04 IST
Last Updated 15 ಜುಲೈ 2024, 7:04 IST
ಬಸನಗೌಡ ದದ್ದಲ್
ಬಸನಗೌಡ ದದ್ದಲ್   

ಬೆಂಗಳೂರು: ಜಾರಿ ನಿರ್ದೇಶನಾಲಯದಿಂದ ಬಂಧನ ಭೀತಿಯಲ್ಲಿ ಎರಡು ದಿನಗಳಿಂದ ತಲೆಮರೆಸಿಕೊಂಡಿದ್ದ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರು ಸೋಮವಾರ ಬೆಳಿಗ್ಗೆ ಆರಂಭವಾದ ವಿಧಾನಸಭೆ ಕಲಾಪಕ್ಕೆ ಹಾಜರಾಗಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದದ್ದಲ್ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬುಧವಾರ ದಾಳಿ ಮಾಡಿದ್ದರು. ಎರಡು ದಿನಗಳ ಕಾಲ ಶೋಧ, ವಿಚಾರಣೆ ನಡೆಸಲಾಗಿತ್ತು.

ಶುಕ್ರವಾರ ವಿಶೇಷ ತನಿಖಾ ದಳದ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದ ದದ್ದಲ್, ಶನಿವಾರ ಮನೆಯ ಬಾಗಿಲು ಬಂದ್ ಮಾಡಿ ನಾಪತ್ತೆಯಾಗಿದ್ದರು.

ADVERTISEMENT

ವಿಧಾನಮಂಡಲ ಅಧಿವೇಶನದ ಅವಧಿಯಲ್ಲಿ ಶಾಸಕರನ್ನು ಬಂಧಿಸಬೇಕಾದರೆ ವಿಧಾನಸಭೆ ಅಧ್ಯಕ್ಷರ ಅನುಮತಿ ಅಗತ್ಯ. ಇಕ ರೀತಿಯ ರಕ್ಷಣೆ ಇರುವ ಕಾರಣದಿಂದ ಸದನಕ್ಕೆ ಬಂದಿದ್ದಾರೆ.

ಸದನಕ್ಕೆ ಹಾಜರಾಗುವ ಮುನ್ನ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, 'ನಾನು ಎಲ್ಲಿಯೂ ತಲೆಮರೆಸಿಕೊಂಡಿರಲಿಲ್ಲ. ಊರಿಗೆ ಹೋಗಿದ್ದೆ. ಇ.ಡಿ ಅಧಿಕಾರಿಗಳು ನನಗೆ ಯಾವುದೇ ನೋಟಿಸ್ ನೀಡಿಲ್ಲ' ಎಂದರು.

ಶಾಸಕರಿಗೂ ಕುತೂಹಲ: ಬಸನಗೌಡ ಸದನಕ್ಕೆ ಹಾಜರಾದುದನ್ನು ನೋಡಿದ ಹಲವು ಶಾಸಕರು ಕುತೂಹಲದಿಂದ ಅವರ ಬಳಿ ಹೋಗಿ ಮಾತನಾಡಿಸಿಕೊಂಡು ಬಂದರು. ಕೆಲವರಂತೂ ಅವರನ್ನು ಮಾತನಾಡಿಸುವುದಕ್ಕಾಗಿಯೇ ಮೊಗಸಾಲೆಯಲ್ಲಿ ಹುಡುಕುತ್ತಿದ್ದ ದೃಶ್ಯ ಕಂಡುಬಂತು.

ನಾಗೇಂದ್ರ ಬಂಧನದ ಮಾಹಿತಿ ಪ್ರಕಟಣೆ
ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಪ್ರಕರಣದಲ್ಲಿ ಶಾಸಕ ಬಿ. ನಾಗೇಂದ್ರ ಅವರನ್ನು ಬುಧವಾರ ರಾತ್ರಿ 10.30ಕ್ಕೆ ಬಂಧಿಸಿದ್ದು ಜುಲೈ 18ರವರೆಗೆ ಕಸ್ಟಡಿಗೆ ಪಡೆಯಲಾಗಿದೆ ಎಂಬುದಾಗಿ ಜಾರಿ ನಿರ್ದೇಶನಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಸಭಾಧ್ಯಕ್ಷ ಯು.ಟಿ. ಖಾದರ್‌ ಸದನದಲ್ಲಿ ಪ್ರಕಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.