ADVERTISEMENT

ಮನೆ– ಮಠ ಬಿಟ್ಟು ಪಕ್ಷ ಕಟ್ಟಿದ ಬಿಎಸ್‌ವೈ: ಬಸನಗೌಡ ಪಾಟೀಲ ಯತ್ನಾಳ್

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 22:00 IST
Last Updated 24 ಫೆಬ್ರುವರಿ 2023, 22:00 IST
ವಿಧಾನಸಭೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿದರು
ವಿಧಾನಸಭೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿದರು   

ಬೆಂಗಳೂರು: ‘ನನ್ನ ಮತ್ತು ಯಡಿಯೂರಪ್ಪ ಮಧ್ಯೆ ವೈಮನಸ್ಸು ಇದ್ದರೂ, ಅವರು ನಮ್ಮ ನಾಯಕರು. ಮನೆ–ಮಠ ಬಿಟ್ಟು ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದವರು’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಯಡಿಯೂರಪ್ಪ ಮತ್ತು ಅನಂತಕುಮಾರ್ ರಾಜ್ಯದಲ್ಲಿ ನಮ್ಮ ಪಕ್ಷವನ್ನು ಕಟ್ಟಿದ ಜೋಡಿ. ಕೃಷ್ಣ– ಅರ್ಜುನರಂತೆ ಇದ್ದರು’ ಎಂದು ನೆನಪಿಸಿಕೊಂಡರು. ಯತ್ನಾಳ ಅವರು ಯಡಿಯೂರಪ್ಪ ವಿರುದ್ಧ ನಿರಂತರ ವಾಗ್ದಾಳಿ ಮಾಡುತ್ತಾ ಬಂದಿದ್ದರು. ಆದರೆ, ವಿದಾಯ ಭಾಷಣದ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಅಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಮಂತ್ರಿ ಆಗಿ ಕೆಲಸ ಮಾಡಿದ್ದು ನನ್ನ ಸೌಭಾಗ್ಯ. ಆ ಸ್ಥಾನ ಸಿಗಲು ಯಡಿಯೂರಪ್ಪ ಮತ್ತು ಅನಂತಕುಮಾರ್‌ ಕಾರಣರು. ಯಡಿಯೂರಪ್ಪ ನಮ್ಮನ್ನು ಬೆಳೆಸಿದರು. ಹಿಂದೆ ಅವರು ಡಿಲಕ್ಸ್‌ ಬಸ್‌ ಹತ್ತಿಕೊಂಡು ವಿಜಯಪುರಕ್ಕೆ ಬರುತ್ತಿದ್ದರು. ಬಸ್‌ ಸ್ಟಾಂಡ್‌ನಿಂದ ಆಟೋದಲ್ಲಿ ಅವರನ್ನು ಐಬಿಗೆ ಕರೆದುಕೊಂಡು ಹೋಗುತ್ತಿದ್ದೆ. ಪಕ್ಷಕ್ಕಾಗಿ ಮನೆ–ಮಠ ಬಿಟ್ಟು ದುಡಿದವರು. ಆದರೆ, ಈ ಬಾರಿ ನನ್ನನ್ನು ಮತ್ತು ನಿಮ್ಮನ್ನು (ಕಾಗೇರಿ) ಮಂತ್ರಿ ಮಾಡಲಿಲ್ಲ’ ಎಂದು ಲಘು ದಾಟಿಯಲ್ಲಿ ಛೇಡಿಸಿದರು.

ADVERTISEMENT

‘ಯಡಿಯೂರಪ್ಪ ಚುನಾವಣೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಇನ್ನೂ ಕೆಲವು ಹಿರಿಯ ಶಾಸಕರು ಸ್ಪರ್ಧಿಸುವುದಿಲ್ಲ, ಮಕ್ಕಳಿಗೆ ಟಿಕೆಟ್‌ ಕೇಳುತ್ತೇನೆ ಎನ್ನುತ್ತಿದ್ದವರು, ಈಗ ಉಲ್ಟಾ ಹೊಡೆಯುತ್ತಿದ್ದಾರೆ. ಜನ ಬಿಡ್ತಾ ಇಲ್ಲ ಮತ್ತೆ ಸ್ಪರ್ಧಿಸಿ ಎಂದು ದುಂಬಾಲು ಬೀಳುತ್ತಿದ್ದಾರೆ ಎಂದು ಸಬೂಬು ಹೇಳುತ್ತಿದ್ದಾರೆ. ಇಂತಹವರಿಗೆ ಸಾಯೋತನಕ ಶಾಸಕನಾಗಿರಬೇಕು, ಆ ಸ್ಥಾನದಲ್ಲೇ ಇದ್ದು ಸಾಯಬೇಕು ಎಂಬ ಹಂಬಲವುಳ್ಳವರೂ ಇದ್ದಾರೆ’ ಎಂದು ಚಾಟಿ ಬೀಸಿದರು.

ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್‌, ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪುರ್, ಜೆಡಿಎಸ್‌ನ ಸಾ.ರಾ.ಮಹೇಶ್‌ ಮತ್ತು ಇತರರು ಯಡಿಯೂರಪ್ಪ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿ, ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದನ್ನು ಸ್ಮರಿಸಿಕೊಂಡರು.

ಬಿಎಸ್‌ವೈ ಛಲ–ಸಾಹಸ ನಮಗೆ ಮಾದರಿ: ಬಸವರಾಜ ಬೊಮ್ಮಾಯಿ

‘ಯಡಿಯೂರಪ್ಪ ಅವರಿಗೆ ಜೀವನದ ಸತ್ಯ, ಸಿಹಿ–ಕಹಿ ಎಲ್ಲವೂ ಗೊತ್ತು. ನಮ್ಮ ವಯಸ್ಸಿನಷ್ಟು ಅವರಿಗೆ ಅನುಭವ ಇದೆ. ಅದನ್ನು ತೋರಿಸಿಕೊಳ್ಳದೇ ಎಲ್ಲರ ಜತೆಗೂ ಬೆರೆತು ಎಲ್ಲರನ್ನೂ ಸರಿಸಮಾನರನ್ನಾಗಿ ಕಂಡು ದೊಡ್ಡತನ ಮೆರೆಯುತ್ತಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಬಿಎಸ್‌ವೈ ಅವರು ನಡೆದು ಬಂದ ದಾರಿ, ಮಾಡಿದ ಹೋರಾಟ ಸಾಮಾನ್ಯ ಏನಲ್ಲ. ತಾವು ಏನು ಮಾಡಬೇಕೆಂದುಕೊಂಡಿದ್ದರೋ ಅದನ್ನು ಮಾಡದೇ ಬಿಟ್ಟಿಲ್ಲ. ಅವರ ಛಲ–ಸಾಹಸ ನಿಜಕ್ಕೂ ಮೆಚ್ಚುವಂಥದ್ದು. ನಮಗೆಲ್ಲ ಮಾದರಿ’ ಎಂದು ಹೇಳಿದರು.

****
ಯತ್ನಾಳ್‌ಗೆ ಅವರದ್ಧೇ ಶೈಲಿ ಇದೆ. ಅವರ ಮಾತಿನಲ್ಲಿ ಮೊನಚು ಇದೆ. ಹೇಳಬೇಕಾಗಿದ್ದನ್ನು ನಿರ್ಭೀತಿಯಿಂದ ಹೇಳಿಬಿಡುತ್ತಾರೆ

-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

****

ಯಡಿಯೂರಪ್ಪ ಅವರಂತೆ ಸವಾಲು– ಸಮಸ್ಯೆಗಳನ್ನು ಎದುರಿಸಿದ ಮತ್ತೊಬ್ಬ ಮುಖ್ಯಮಂತ್ರಿ ಇಲ್ಲ. ರೈತರು, ನೀರಾವರಿ ಬಗ್ಗೆ ಅಪಾರ ಕಾಳಜಿಯುಳ್ಳವರಾಗಿದ್ದರು

-ಜೆ.ಸಿ.ಮಾಧುಸ್ವಾಮಿ, ಕಾನೂನು ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.