ಬೆಳಗಾವಿ (ಸುವರ್ಣ ವಿಧಾನಸೌಧ): ‘ರಾಜ್ಯದಲ್ಲಿರುವ 10.11 ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶದ ಪೈಕಿ 6.64 ಲಕ್ಷ ಹೆಕ್ಟೇರ್ ಅನ್ನು ಕಂದಾಯ ಇಲಾಖೆಯ ವ್ಯಾಪ್ತಿಗೆ ವಾಪಸ್ ಪಡೆಯಲು ನಿರ್ಧರಿಸಿದ್ದು, ಸುಪ್ರೀಂ ಕೋರ್ಟ್‌ಗೆ ಶೀಘ್ರದಲ್ಲಿ ಪ್ರಮಾಣಪತ್ರ ಸಲ್ಲಿಸಲಾಗುವುದು’ ಎಂದು ಕಂದಾಯ ಸಚಿವ ಆರ್.ಅಶೋಕಬುಧವಾರ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಕೆ.ಪ್ರತಾಪಚಂದ್ರ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಂದಾಯ ಇಲಾಖೆ ಅಧೀನದಲ್ಲಿದ್ದ ಭೂಮಿಯನ್ನು ಜಿಲ್ಲಾಧಿಕಾರಿಗಳೇ ಈ ಹಿಂದೆ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದರು. ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸುವ ಮೂಲಕ ಈಗ ಡೀಮ್ಡ್ ಅರಣ್ಯದ ವ್ಯಾಪ್ತಿ ಯಿಂದ ಕೈಬಿಡಲಾಗುವುದು’ ಎಂದು ತಿಳಿಸಿದರು.
‘ಕೈಬಿಡಬೇಕಾದ ಜಮೀನನ್ನು ಈಗಾಗಲೇ ಗುರುತಿಸಲಾಗಿದೆ. ಅರಣ್ಯ ಇಲಾಖೆಯೂ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದೆ. ಕಾನೂನು ಇಲಾಖೆಯ ಸಲಹೆ ಆಧರಿಸಿ ಅರಣ್ಯ ಇಲಾಖೆಯು ಪ್ರಮಾಣ ಪತ್ರವನ್ನು ಸಿದ್ಧಪಡಿಸುತ್ತಿದೆ’ ಎಂದು ಹೇಳಿದರು.
‘ಡೀಮ್ಡ್ ಅರಣ್ಯದ ಕಾರಣದಿಂದ ಉಡುಪಿ ಜಿಲ್ಲೆಯಲ್ಲಿ ಜಮೀನು ಮಂಜೂರಾತಿ ಕೋರಿ ನಮೂನೆ 50ರ ಅಡಿಯಲ್ಲಿ 80, ನಮೂನೆ 53ರ ಅಡಿಯಲ್ಲಿ 7,754 ಮತ್ತು ನಮೂನೆ 94ಸಿ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಗಳನ್ನು ತಡೆ ಹಿಡಿಯಲಾಗಿದೆ. ಜಿಲ್ಲೆಯಲ್ಲಿ 68,794 ಹೆಕ್ಟೇರ್ ಡೀಮ್ಡ್ ಅರಣ್ಯವಿದ್ದು, 34,918 ಹೆಕ್ಟೇರ್ ಕೈಬಿಡಲು ವರದಿ ಸಲ್ಲಿಸಲಾಗಿದೆ’ ಎಂದರು.
ಪರಿಹಾರಕ್ಕೆ ಆಗ್ರಹಿಸಿ ಧರಣಿ: ಸಚಿವರ ಉತ್ತರವನ್ನು ಪ್ರತಿಭಟಿಸಿ ಪ್ರತಾಪಚಂದ್ರ ಶೆಟ್ಟಿ ಸಭಾಪತಿಯವರ ಪೀಠದ ಎದುರು ಕೆಲಕಾಲ ಧರಣಿ ನಡೆಸಿದರು. ಆಗ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಕ್ಸಮರವೂ ನಡೆಯಿತು.
‘ಉಡುಪಿ ಜಿಲ್ಲೆಯಲ್ಲಿ ಕರಾವಳಿ ನಿಯಂತ್ರಣ ವಲಯದಲ್ಲಿ ಮರಳು ಗಣಿ ಗಾರಿಕೆಗೆ ಅನುಮತಿ ಸಿಗುತ್ತದೆ. ಆದರೆ, ಬಡವರ ಮನೆಗೆ ಹಕ್ಕುಪತ್ರ ಸಿಗುವುದಿಲ್ಲ. ಜನರ ಗೋಳು ಕೇಳುವವರು ಯಾರು’ ಎಂದು ಪ್ರತಾಪ ಚಂದ್ರ ಶೆಟ್ಟಿ ಪ್ರಶ್ನಿಸಿದರು.
‘ಕಂದಾಯ ಇಲಾಖೆಯು ಜಮೀನು ಗಳನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಟ್ಟಿರುವುದು 1993–94ರಲ್ಲಿ. ಡೀಮ್ಡ್ ಅರಣ್ಯದ ಸಮಸ್ಯೆ ಕಾಂಗ್ರೆಸ್ ಸರ್ಕಾರದ ಪಾಪದ ಕೂಸು’ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಪ್ರತ್ಯುತ್ತರ ನೀಡಿದರು.
ಡೀಮ್ಡ್ ಅರಣ್ಯದ ಸಮಸ್ಯೆ ಕುರಿತು ಅರ್ಧ ಗಂಟೆಗಳ ಕಾಲ ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಪತಿ ತಿಳಿಸಿದರು. ಬಳಿಕ ಶೆಟ್ಟಿ ಧರಣಿ ಅಂತ್ಯಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.