ADVERTISEMENT

ಬೆಳೆನಷ್ಟ ಪರಿಹಾರ ಹೆಚ್ಚಳ, ರೈತರ ನೆರವಿಗೆ ಸಂಕಲ್ಪ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 4:21 IST
Last Updated 22 ಡಿಸೆಂಬರ್ 2021, 4:21 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಳಗಾವಿ (ಸುವರ್ಣ ವಿಧಾನಸೌಧ): ‘ಅತಿವೃಷ್ಟಿ, ಪ್ರವಾಹದಿಂದ ಸಂಕಷ್ಟಕ್ಕೆ ತುತ್ತಾಗಿರುವ ರೈತರ ನೆರವಿಗೆ ನಿಲ್ಲುವತ್ತ ಸರ್ಕಾರ ಪ್ರಾಮಾಣಿಕ ಹೆಜ್ಜೆಯಿಟ್ಟಿದ್ದು, ಪರಿಹಾರ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ. ಕೇಂದ್ರ ಸರ್ಕಾರ ನೀಡುವ ಪರಿಹಾರ ಮೊತ್ತದ ಜತೆಗೆ ಪ್ರತಿ ಹೆಕ್ಟೇರ್‌ ಮಳೆಯಾಶ್ರಿತ ಬೆಳೆಗಳಿಗೆ ₹6,800, ನೀರಾವರಿ ಬೆಳೆಗಳಿಗೆ ₹11,500 ಮತ್ತು ತೋಟಗಾರಿಕಾ ಬೆಳೆಗಳಿಗೆ ₹ 10,000 ಹೆಚ್ಚುವರಿಯಾಗಿ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಪ್ರಕಟಿಸಿದರು.

ಅತಿವೃಷ್ಟಿಯ ಕುರಿತು ವಿಧಾನಸಭೆಯಲ್ಲಿ ನಾಲ್ಕು ದಿನ ನಡೆದ ಸುದೀರ್ಘ ಚರ್ಚೆಗೆ ಕಂದಾಯ ಸಚಿವ ಆರ್‌.ಅಶೋಕ ಅವರುಮಂಗಳವಾರ ಉತ್ತರ ನೀಡಿದರು. ಈ ವೇಳೆಯಲ್ಲಿ ಮಧ್ಯ ಪ್ರವೇಶಿಸಿದ ಬೊಮ್ಮಾಯಿ ಪರಿಹಾರದ ಹೆಚ್ಚುವರಿ ಮೊತ್ತವನ್ನು ಪ್ರಕಟಿಸಿದರು.

‘ನಮ್ಮ ಸರ್ಕಾರ ರೈತರ ಪರವಾಗಿದೆ. ಕೋವಿಡ್‌ನ ಕಷ್ಟಕಾಲದಲ್ಲೂ ಪರಿಹಾರ ಮೊತ್ತವನ್ನು ಹೆಚ್ಚಿಸುವ ಸಂಕಲ್ಪ ಮಾಡಿದ್ದೇವೆ. ಇದರಿಂದ 12.69 ಲಕ್ಷ ರೈತರಿಗೆ ಅನುಕೂಲವಾಗಲಿದ್ದು, ರಾಜ್ಯ ಸರ್ಕಾರಕ್ಕೆ ₹1,200 ಕೋಟಿ ಹೆಚ್ಚುವರಿ ಹೊರೆಯಾಗಲಿದೆ ಎಂದು ಹೇಳಿದರು.

ADVERTISEMENT

ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಇದೇ ಮೊದಲ ಬಾರಿಗೆ ಸಮೀಕ್ಷೆ ಮಾಡಿ ಆ್ಯಪ್‌ ಮೂಲಕ ಮಾಹಿತಿ ನೀಡಿದ 48 ಗಂಟೆಗಳಲ್ಲಿ ರೈತರ ಖಾತೆಗೇ ಪರಿಹಾರ ಮೊತ್ತ ಜಮೆ ಮಾಡಲಾಗುತ್ತಿದೆ. ಮೂರು ತಿಂಗಳಲ್ಲಿ 14 ಲಕ್ಷಕ್ಕೂ ಹೆಚ್ಚು ರೈತರಿಗೆ ಪರಿಹಾರ ವಿತರಿಸಿರುವುದು ದಾಖಲೆ ಎಂದು ತಿಳಿಸಿದರು.

ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಭೌತಿಕ ತರಗತಿಗಳು ಆರಂಭವಾಗದ ಕಾರಣ ತಡವಾಗಿತ್ತು. 2.40 ಲಕ್ಷ ಪಿಯುಸಿ ವಿದ್ಯಾರ್ಥಿಗಳಿಗೆ ವಿತರಿಸಿದ್ದು, ಪದವಿ ವಿದ್ಯಾರ್ಥಿಗಳಿಗೆ ಸದ್ಯವೇ ವಿತರಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಕಂದಾಯ ಸಚಿವ ಆರ್‌.ಅಶೋಕ ಮಾತನಾಡಿ, ಈವರೆಗೆ ಬೆಳೆ ಹಾನಿಗೆ 14.42 ಲಕ್ಷ ರೈತರ ಖಾತೆಗಳಿಗೆ ₹926.47 ಕೋಟಿ ನೇರವಾಗಿ ಪರಿಹಾರ ಮೊತ್ತ ಪಾವತಿ ಮಾಡಲಾಗಿದೆ. 54,716 ಮನೆಗಳಿಗೆ ಹಾನಿಯಾಗಿದ್ದು, ದುರಸ್ತಿಗೆ ₹333.9 ಕೋಟಿ ಜಿಲ್ಲಾಧಿಕಾರಿಗಳಿಗೆ ಪಾವತಿ ಮಾಡಲಾಗಿದೆ ಎಂದರು.

2021 ರಲ್ಲಿ ಒಟ್ಟು 45,119 ಕಿ.ಮೀ ರಸ್ತೆ, 3306 ಸೇತುವೆಗಳು, 44,149 ವಿದ್ಯುತ್‌ ಕಂಬಗಳು, 993 ಸಣ್ಣ ನೀರಾವರಿ ಕೆರೆಕಟ್ಟೆಗಳು, 1600 ನೀರು ಸರಬರಾಜು ರಚನೆಗಳು ಹಾಗೂ 13,419 ಸರ್ಕಾರಿ ಕಟ್ಟಡಗಳು ಹಾನಿಯಾಗಿವೆ. ಮೂಲ ಸೌಕರ್ಯಗಳ ಹಾನಿಯಿಂದ ₹6,556.58 ಕೋಟಿ ನಷ್ಟವಾಗಿದೆ. ಮೂಲ ಸೌಕರ್ಯಗಳ ತುರ್ತು ದುರಸ್ತಿಗಾಗಿ ಕಂದಾಯ ಇಲಾಖೆ ವತಿಯಿಂದ ₹100 ಕೋಟಿ ಮತ್ತು ಲೋಕೋಪಯೋಗಿ ಇಲಾಖೆಯ ವತಿಯಿಂದ ₹310 ಕೋಟಿ ಸೇರಿ ಒಟ್ಟು ₹410 ಕೋಟಿ ಬಿಡುಗಡೆಗೊಳಿಸಲಾಗಿದೆ ಎಂದು ಅವರು ವಿವರಿಸಿದರು.

ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ವಾರ್ಷಿಕ ₹1,054 ಕೋಟಿಗೆ ಪರಿಷ್ಕರಿಸಲಾಗಿದ್ದು, ಅದರಂತೆ 2020–21 ರ ಸಾಲಿಗೆ ₹1054 ಕೋಟಿ ಬಿಡುಗಡೆಯಾಗಿದೆ. ಅಲ್ಲದೆ, ಕೇಂದ್ರ ಸರ್ಕಾರದಿಂದ ಎಸ್‌ಡಿಆರ್‌ಎಫ್‌ ಅಡಿ ₹632.80 ಕೋಟಿ ಬಿಡುಗಡೆಯಾಗಿದೆ ಎಂದು ಅಶೋಕ ಹೇಳಿದರು.

ಈ ಹಿಂದೆ 2019 ರಲ್ಲಿ ಕೇಂದ್ರ ಸರ್ಕಾರದ ಎಸ್‌ಡಿಆರ್‌ಎಫ್‌/ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅಡಿ ನಿಗದಿ ಪಡಿಸಿ ದರಕ್ಕಿಂತ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್‌ಗೆ ₹10 ಸಾವಿರ ಹೆಚ್ಚಿಸಿ ಇನ್‌ಪುಟ್‌ ಸಬ್ಸಿಡಿ ನೀಡಲಾಗಿತ್ತು. ಆಗ ಮಳೆಯಾಶ್ರಿತ ಬೆಳೆಗೆ ₹16,800, ನೀರಾವರಿ ಬೆಳೆಗೆ ₹23,500 ಮತ್ತು ತೋಟಗಾರಿಕೆ ಬೆಳೆಗಳಿಗೆ ₹28,500 ನೀಡಲಾಗಿತ್ತು ಎಂದು ವಿವರಿಸಿದರು.

ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಮಾತನಾಡಿ, ಹಾನಿ ಪ್ರಕರಣದಲ್ಲಿ ಮನೆ ಕಟ್ಟಿಸಿಕೊಳ್ಳಲು ಅಥವಾ ದುರಸ್ತಿಗೆ ಇರುವ ಕಡೇ ದಿನಾಂಕವನ್ನು ವಿಸ್ತರಿಸಬೇಕು‘ ಎಂದು ಕೋರಿದರು.

ಜೆಡಿಎಸ್‌ನ ಎಚ್‌.ಡಿ.ರೇವಣ್ಣ ಮಾತನಾಡಿ, ಹಳ್ಳಿ ರಸ್ತೆಗಳು, ಶಾಲಾ ಕಟ್ಟಡಗಳ ದುರಸ್ತಿ ಕಾರ್ಯ ನಡೆದಿಲ್ಲ. ಅದಕ್ಕೆ ಹಣ ಬಿಡುಗಡೆ ಆಗಿಲ್ಲ. ಇದಕ್ಕಾಗಿ ಪ್ರತಿ ಕ್ಷೇತ್ರಕ್ಕೂ ತಲಾ ₹10 ಕೋಟಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.