ADVERTISEMENT

ಬಿಜೆಪಿ ಹಗರಣ ಬಯಲಾಗುವ ಭಯಕ್ಕೆ ಗದ್ದಲ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 15:45 IST
Last Updated 19 ಜುಲೈ 2024, 15:45 IST
<div class="paragraphs"><p>ಡಿ.ಕೆ. ಶಿವಕುಮಾರ್</p></div>

ಡಿ.ಕೆ. ಶಿವಕುಮಾರ್

   

ಬೆಂಗಳೂರು: ‘ಸರ್ಕಾರದ ಮೇಲೆ ಆರೋಪ ಮಾಡಿದ ಬಿಜೆಪಿಯವರಿಗೆ ಉತ್ತರವನ್ನು ಕೇಳುವ ಸಹನೆ, ಸಂಯಮ ಇರಲಿಲ್ಲ. ಅವರ ಹಗರಣಗಳು ಬಯಲಿಗೆ ಬರುವ ಭಯದಿಂದ ಸದನದಲ್ಲಿ ಗಲಾಟೆ ಮಾಡಿ ಸ್ಪೀಕರ್‌ ಮುಂದೆ ಪ್ರತಿಭಟನೆಗೆ ಮುಂದಾದರು. ಮುಖ್ಯಮಂತ್ರಿ ಉತ್ತರಿಸುವಾಗ ತೊಂದರೆ ಮಾಡಿದರು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಲವು ಹಗರಣಗಳನ್ನು ಮುಚ್ಚಿಹಾಕಲಾಗಿದೆ. ಕೆಲವನ್ನು ಮುಚ್ಚಿಹಾಕಲು ಯತ್ನಿಸಲಾಗಿದೆ. ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರವನ್ನು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಯಲಿಗೆ ಎಳೆದಿದ್ದಾರೆ. ಪರಶುರಾಮ ಥೀಮ್ ಪಾರ್ಕ್ ಹಗರಣ, ಗಂಗಾಕಲ್ಯಾಣ ಅಕ್ರಮ, ಬಿಟ್ ಕಾಯಿನ್ ಹಗರಣ, ಪಿಎಸ್‌ಐ ಹಗರಣ ಸೇರಿ ಅನೇಕ ಹಗರಣಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿವೆ’ ಎಂದರು.

ADVERTISEMENT

‘ಯಡಿಯೂರಪ್ಪ ಅವರ ಆಪ್ತ ಉಮೇಶ್ ಮನೆಯಲ್ಲಿ ₹750 ಕೋಟಿಗೂ ಹೆಚ್ಚು ಮೊತ್ತದ ಹಣ ಅಕ್ರಮ ವರ್ಗಾವಣೆ ಸೇರಿ ಅನೇಕ ಅಕ್ರಮಗಳ ದಾಖಲೆಗಳು ದೊರೆತಿವೆ. ಯಡಿಯೂರಪ್ಪ ವಿರುದ್ಧ ಕೆ.ಎಸ್‌.ಈಶ್ವರಪ್ಪ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರು. ಅದು ಸಹ ತನಿಖೆಯಲ್ಲಿದೆ. ಗುರು ರಾಘವೇಂದ್ರ ಬ್ಯಾಂಕ್‌ನಲ್ಲಿ ಸಾವಿರಾರು ಕೋಟಿಯ ಹಗರಣವಾಗಿದ್ದರೂ ಸಿಬಿಐಗೆ ನೀಡಲಿಲ್ಲ. ಅದನ್ನು ಸಹ ತನಿಖೆಗೆ ನೀಡಲು ಚರ್ಚಿಸಲಾಗುವುದು’ ಎಂದರು.

‘ಮುಖ್ಯಮಂತ್ರಿ ಹುದ್ದೆಗೆ ₹2500 ಕೋಟಿ, ಮಂತ್ರಿ ಸ್ಥಾನಕ್ಕೆ ₹100 ಕೋಟಿ ನೀಡಬೇಕು ಎನ್ನುವ ಬಸನಗೌಡ ಪಾಟೀಲ ಯತ್ನಾಳ ಅವರ ಆರೋಪ ಹಾಗೂ ಭೋವಿ ನಿಗಮದ ಅಕ್ರಮದ ಬಗ್ಗೆ ಗೂಳಿಹಟ್ಟಿ ಶೇಖರ್ ಮಾಡಿದ ಆರೋಪಗಳ ಮೇಲೆ ಏಕೆ ಬಿಜೆಪಿ ತನಿಖೆ ನಡೆಸಲಿಲ್ಲ’ ಎಂದು ಪ್ರಶ್ನಿಸಿದರು.

ಬಿಜೆಪಿಯ ಆರೋಪದ ನಂತರ ನೀವು ತನಿಖೆ ಮಾಡಲು ಮುಂದಾಗಿದ್ದೀರಿ ಎಂದ ಸುದ್ದಿಗಾರರ ಪ್ರಶ್ನೆಗೆ, ‘ಈ ರೀತಿ ಏನೂ ಇಲ್ಲ. ಯಾರನ್ನೂ ರಕ್ಷಿಸುವ ಉದ್ದೇಶ ನಮಗಿಲ್ಲ. ಎಲ್ಲವನ್ನೂ ಬಯಲಿಗೆ ಎಳೆದು ಸಾರ್ವಜನಿಕರ ಗಮನಕ್ಕೆ ತರುವ ಉದ್ದೇಶ ನಮ್ಮದು’ ಎಂದರು.

‘ಬಿಎಸ್‌ವೈ ಬೊಮ್ಮಾಯಿ ಕಾಲದಲ್ಲಿ ₹300 ಕೋಟಿ ಅಕ್ರಮ’

‘ಬಿ.ಎಸ್‌.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಹಲವಾರು ನಿಗಮಗಳಲ್ಲಿ ₹300 ಕೋಟಿಗೂ ಹೆಚ್ಚು ಅಕ್ರಮ ನಡೆದಿದೆ. ಇದನ್ನು ನಾವು ಸದನದ ಮೂಲಕ ಜನರಿಗೆ ತಿಳಿಸುತ್ತೇವೆ’ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೋವಿ ನಿಗಮದ ₹87 ಕೋಟಿ ಎಪಿಎಂಸಿಯ ₹47 ಕೋಟಿ 2019ರಲ್ಲಿ ಅಂಗವಿಕಲ ಕಲ್ಯಾಣ ಇಲಾಖೆಯ ₹22 ಕೋಟಿ 2018ರಲ್ಲಿ ಅಂಬೇಡ್ಕರ್ ನಿಗಮದ ₹5 ಕೋಟಿ ದೇವರಾಜ್ ಅರಸು ನಿಗಮದ ₹47 ಕೋಟಿ ಮಾಲಿನ್ಯ ನಿಯಂತ್ರಣ ಮಂಡಳಿಯ ₹10 ಕೋಟಿ ಮತ್ತು ಕೆಐಡಿಬಿಯ ಹಣ ಸೇಲಂಗೆ ಅಕ್ರಮವಾಗಿ ವರ್ಗಾವಣೆಯಾಗಿದೆ’ ಎಂದು ಆರೋಪಿಸಿದರು.

ಬಿಜೆಪಿಯ ಅಕ್ರಮಗಳನ್ನು ತನಿಖೆ ನಡೆಸುವಿರಾ ಎಂದು ಪ್ರಶ್ನಿಸಿದಾಗ “ಖಂಡಿತವಾಗಿಯೂ ತನಿಖೆ ನಡೆಸುತ್ತೇವೆ. ಆದರೆ ಎಲ್ಲವೂ ದಾಖಲೆಯಲ್ಲಿ ಇರಬೇಕು ಎನ್ನುವ ಕಾರಣಕ್ಕೆ ಸದನದಲ್ಲಿ ಎಲ್ಲಾ ದಾಖಲೆಗಳನ್ನು ಬಯಲು ಮಾಡುತ್ತೇವೆ. ಅಕ್ರಮಗಳ ಹಿಂದೆ ಇರುವ ಯಾವ ಮಂತ್ರಿ ಅಧ್ಯಕ್ಷರು ಮುಖ್ಯಮಂತ್ರಿಗಳು ಇದ್ದರು ಎಂದು ಜನರಿಗೆ ತಿಳಿಸುತ್ತೇವೆ” ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.