ADVERTISEMENT

ಕೃಷಿ ಹೊಂಡಗಳಿಗೆ ತಡೆಬೇಲಿ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 23:30 IST
Last Updated 19 ಜುಲೈ 2024, 23:30 IST
<div class="paragraphs"><p> ಜಮೀನಿನಲ್ಲಿ ನಿರ್ಮಿಸಿರುವ ಬೃಹತ್‌ ಕೃಷಿ ಹೊಂಡ</p></div>

ಜಮೀನಿನಲ್ಲಿ ನಿರ್ಮಿಸಿರುವ ಬೃಹತ್‌ ಕೃಷಿ ಹೊಂಡ

   

ಬೆಂಗಳೂರು: ಜಮೀನುಗಳಲ್ಲಿ ನಿರ್ಮಾಣ ಮಾಡುವ ಕೃಷಿ ಹೊಂಡಗಳಿಗೆ ತಡೆ ಬೇಲಿ ಹಾಕುವುದನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ವಿಧಾನ ಪರಿಷನ್‌ನಲ್ಲಿ ಶುಕ್ರವಾರ ಬಿಜೆಪಿಯ ಎಸ್‌. ಕೇಶವ ಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್, ರಾಜ್ಯ ಸರ್ಕಾರದ ಕೃಷಿ ಭಾಗ್ಯ ಯೋಜನೆ ಹಾಗೂ ಉದ್ಯೋಗ ಖಾತ್ರಿಗಳ ಮೂಲಕ ಪ್ರತಿ ವರ್ಷವೂ ಕೃಷಿ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ. ಸಹಾಯಧನ ಪಡೆದು ರೈತರೇ ತಮ್ಮ ಹೊಲಗಳಲ್ಲಿ ನಿರ್ಮಿಸಿಕೊಳ್ಳುವ ಕೃಷಿ ಹೊಂಡಗಳಲ್ಲಿ ಮಕ್ಕಳು, ಜಾನುವಾರು ಬಿದ್ದು ಮೃತಪಟ್ಟ ಕೆಲ ಘಟನೆಗಳು ವರದಿಯಾಗಿವೆ. ಹಾಗಾಗಿ, ಕೃಷಿ ಹೊಂಡಗಳ ಸುತ್ತ ತಡೆಬೇಲಿ ಹಾಕುವುದನ್ನು ಕಡ್ಡಾಯಗೊಳಿಸಲಾಗುವುದು ಎಂದರು.

ADVERTISEMENT

ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ 6,601 ಸೇರಿದಂತೆ 2023–24ನೇ ಸಾಲಿನಲ್ಲಿ ಒಟ್ಟು 15,871 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ರಾಜ್ಯ ಸರ್ಕಾರ ಅದಕ್ಕಾಗಿ ₹23.32 ಕೋಟಿ ವೆಚ್ಚ ಮಾಡಿದೆ ಎಂದು ಹೇಳಿದರು. 

150 ಹೆಚ್ಚುವರಿ ಹಾಸ್ಟೆಲ್‌: ಹಿಂದುಳಿದ ವರ್ಗಗಳ ಕಾಲೇಜು ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಹೆಚ್ಚುವರಿಯಾಗಿ 150 ಹಾಸ್ಟೆಲ್ ಆರಂಭಿಸಲಾಗುತ್ತಿದೆ. ಬೆಂಗಳೂರು ನಗರ, ಮೈಸೂರಿನಲ್ಲಿ ತಲಾ 14, ಧಾರವಾಡ 15 ಸೇರಿದಂತೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಅಗತ್ಯಕ್ಕೆ ತಕ್ಕಂತೆ ಹಾಸ್ಟೆಲ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್‌ ತಂಗಡಗಿ ಹೇಳಿದರು.

ಬಿಜೆಪಿಯ ತಳವಾರ್ ಸಾಬಣ್ಣ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ  ಪ್ರಸ್ತುತ 1,277 ಮೆಟ್ರಿಕ್ ಪೂರ್ವ, 1,169 ಮೆಟ್ರಿಕ್‌ ನಂತರದ ಹಾಸ್ಟೆಲ್‌ಗಳು ಸೇರಿ 2,446 ಹಾಸ್ಟೆಲ್‌ಗಳಿವೆ. 2,28,761 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ ಎಂದರು.

ಅಂಗನವಾಡಿ ಮಕ್ಕಳಿಗೆ ಸಾಲದು ₹8 ಘಟಕ ವೆಚ್ಚ: ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸಲು ಪ್ರತಿ ಮಗುವಿಗೆ ನಿಗದಿಪಡಿಸಿದ ಘಟಕ ವೆಚ್ಚ ₹8 ಮಾತ್ರ. ಬೆಲೆ ಏರಿಕೆಯ ದಿನಗಳಲ್ಲಿ ಈ ವೆಚ್ಚ ಸಾಲದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. 

ಬಿಜೆಪಿಯ ಹೇಮಲತಾ ನಾಯಕ್‌ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 69,919 ಅಂಗನವಾಡಿಗಳಿವೆ. 12,236 ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಅಲ್ಲೆಲ್ಲ ಸುವ್ಯವಸ್ಥೆಯ ಬಾಡಿಗೆ ಕಟ್ಟಡಗಳಿವೆ. ಸಣ್ಣಪುಟ್ಟ ಲೋಪಗಳಿದ್ದರೆ ಸರಿಪಡಿಸಲಾಗುವುದು ಎಂದರು.

ನವರಸಪುರ ನೃತ್ಯೋತ್ಸವ ಮತ್ತೆ ಆರಂಭ: ವಿಜಯಪುರದಲ್ಲಿ ನವರಸಪುರ ನೃತ್ಯೋತ್ಸವ ಮತ್ತೆ ಆರಂಭಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕಾಂಗ್ರೆಸ್‌ನ ಪ್ರಕಾಶ್ ರಾಠೋಡ್ ಪ್ರಶ್ನೆಗೆ ಉತ್ತರಿಸಿದ ಅವರು, 2016ರಲ್ಲಿ ಬರದ ಕಾರಣಕ್ಕೆ ನೃತ್ಯೋತ್ಸವ ಸ್ಥಗಿತವಾಗಿತ್ತು. ಅಂದಿನಿಂದ ಮತ್ತೆ ಚಾಲನೆಯೇ ದೊರೆತಿಲ್ಲ. ಪ್ರಸ್ತಾವ ಕಳುಹಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು. ಹಾಗೆಯೇ, ಚಾಲುಕ್ಯ ಉತ್ಸವವನ್ನೂ ಹಮ್ಮಿಕೊಳ್ಳಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.