ಬೆಂಗಳೂರು: ವಿರೋಧಪಕ್ಷದ ಸ್ಥಾನವನ್ನು ಬಿಜೆಪಿಯವರು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಎರವಲು ಸೇವೆಯ ಮೇಲೆ ಬಿಟ್ಟುಕೊಡಲಿದ್ದಾರೆ ಎಂದು ಕಾಂಗ್ರೆಸ್‌ನ ಲಕ್ಷ್ಮಣ ಸವದಿ ಲೇವಡಿ ಮಾಡಿದರು.
ವಿಧಾನಸಭೆಯಲ್ಲಿ ಬುಧವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಜೆಡಿಎಸ್‌ನ ಜಿ.ಟಿ.ದೇವೇಗೌಡ ಮಾತನಾಡುವಾಗ ಮಧ್ಯ ಪ್ರವೇಶಿಸಿದ ಸವದಿ, ಹೀಗೆ ಹೇಳುವ ಮೂಲಕ ಬಿಜೆಪಿ ನಾಯಕರ ಕಾಲೆಳೆದರು.
‘ಬಿಜೆಪಿಯವರು ಏಕಾಏಕಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಏಕೆ ಇಳಿಸಿದರು ಎಂಬುದು ಗೊತ್ತಾಗಿಲ್ಲ. ನಿಮಗೇನಾದರೂ ಗೊತ್ತಿದ್ದರೆ ತಿಳಿಸಿ’ ಎಂದು ಜಿ.ಟಿ.ದೇವೇಗೌಡ ಅವರು ಸವದಿಯವರನ್ನೇ ಪ್ರಶ್ನಿಸಿದರು.
‘ಈ ವಿಚಾರದ ಬಗ್ಗೆ ನಿಮಗೆ ಮಾಹಿತಿ ಇದೆ. ಅವರೇ ಅದನ್ನು ಹೇಳಬಹುದು’ ಎಂದು ಸವದಿ ಪ್ರತಿಕ್ರಿಯಿಸಿದರು.
‘ಕುಮಾರಸ್ವಾಮಿ ಅವರೇ ಆರಂಭದಲ್ಲಿ ನೀವು ವಿರೋಧಪಕ್ಷದ ನಾಯಕರಾಗಿ ಸಮರ್ಥವಾಗಿ ಕೆಲಸ ಮಾಡಿ. ವಿರೋಧ ಪಕ್ಷದ ನಾಯಕನ ಸ್ಥಾನ ಕುಮಾರಸ್ವಾಮಿ ಅವರ ಮನೆ ಬಾಗಿಲಿಗೆ ಬರುತ್ತದೆ. ಹೀಗಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಬಿಜೆಪಿಯ ಯಾವುದೇ ನಾಯಕ ಕೂರುತ್ತಿಲ್ಲ. ಆ ಸ್ಥಾನಕ್ಕಾಗಿ ಪರಸ್ಪರ ಕಚ್ಚಾಡುತ್ತಿದ್ದಾರೆ‘ ಎಂದೂ ಕುಟುಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.